ಸ್ವಾತಂತ್ರ್ಯ ಹೊರಾಟದಲ್ಲಿ ಭಾಗಿಯಾಗದ ಆರ್‌ಎಸ್‌ಎಸ್‌ಗೆ ಕಾಂಗ್ರೆಸ್‌ ಬಗ್ಗೆ ಮಾತನಾಡುವ ಹಕ್ಕಿಲ್ಲ- ಡಾ.ಜಿ. ಪರಮೇಶ್ವರ್

ಆರ್‌ಎಸ್‌ಎಸ್‌ ಸ್ವಾತಂತ್ರ್ಯ ಹೋರಾಟದಲ್ಲಾಗಲಿ ಅಥವಾ ಕ್ವಿಟ್‌ ಇಂಡಿಯಾ ಚಳುವಳಿಯಲ್ಲಾಗಲಿ ಆರ್‌ಎಸ್‌ಎಸ್‌ ಭಾಗವಹಿಸಿಲ್ಲ- ಡಾ.ಜಿ. ಪರಮೇಶ್ವರ್

Last Updated : Aug 9, 2018, 03:04 PM IST
ಸ್ವಾತಂತ್ರ್ಯ ಹೊರಾಟದಲ್ಲಿ ಭಾಗಿಯಾಗದ ಆರ್‌ಎಸ್‌ಎಸ್‌ಗೆ ಕಾಂಗ್ರೆಸ್‌ ಬಗ್ಗೆ ಮಾತನಾಡುವ ಹಕ್ಕಿಲ್ಲ- ಡಾ.ಜಿ. ಪರಮೇಶ್ವರ್ title=
Pic: Twitter@DrParameshwara

ತುಮಕೂರು: ಸ್ವಾತಂತ್ರ್ಯ ಹೋರಾಟ ಹಾಗೂ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಸಣ್ಣ ಬೆವರೂ ಹರಿಸದ ಆರ್‌ಎಸ್‌ಎಸ್‌‌ಗೆ ಕಾಂಗ್ರೆಸ್‌ ಬಗ್ಗೆ ಮಾತನಾಡುವ ಹಕ್ಕಿಲ್ಲ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು. 

ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಕಾಂಗ್ರೆಸ್‌ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕ್ವಿಟ್‌ ಇಂಡಿಯಾ ಚಳುವಳಿಯ 76ನೇ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟದಲ್ಲಾಗಲಿ ಅಥವಾ ಕ್ವಿಟ್‌ ಇಂಡಿಯಾ ಚಳುವಳಿಯಲ್ಲಾಗಲಿ ಆರ್‌ಎಸ್‌ಎಸ್‌ ಭಾಗವಹಿಸಿಲ್ಲ.‌ ಸ್ವಾತಂತ್ರ್ಯ ಪಡೆಯಲು ಕಾಂಗ್ರೆಸ್‌ ಪಕ್ಷದ ನಾಯಕರು ಹೋರಾಡಿದ್ದಾರೆ. ನಮ್ಮ ಪಕ್ಷದ ಬಗ್ಗೆ ಮಾತನಾಡುವ ಹಕ್ಕು ಆರ್‌ಎಸ್‌ಎಸ್‌ಗಾಗಲಿ ಬಿಜೆಪಿಗಾಗಲಿ ಇಲ್ಲ ಎಂದು ವಾಗ್ದಾಳಿ ನಡೆಸಿದರು. 

1942ರಲ್ಲಿ ಅಖಿಲ ಭಾರತ ಕಾಂಗ್ರೆಸ್‌ ಅಧಿವೇಶನ ನಡೆಸಿ, ಬ್ರಿಟಿಷರನ್ನು 'ದೇಶಬಿಟ್ಟು ತೊಲಗಿ' ಎಂಬ ಸಂದೇಶದೊಂದಿಗೆ ದೊಡ್ಡ ಮಟ್ಟದ ಹೋರಾಟ ನಡೆಸಿತು. ಇದರ ತೀವ್ರತೆ ಹೆಚ್ಚಿಸಲು 'ಮಾಡು ಇಲ್ಲವೇ ಮಡಿ' ಎಂಬ ಘೋಷಣೆಯನ್ನು ಮಹಾತ್ಮ ಗಾಂಧೀಜಿ ಅವರು ಹೊರಡಿಸಿದರು. ತಮ್ಮ‌ ಬಿಗಿ ಸಡಿಲವಾಗುತ್ತಿರುವುದನ್ನು ಅರಿತ ಬ್ರಿಟಿಷರು ಸ್ವಾತಂತ್ರ್ಯ ಕೊಡಲು ಒಪ್ಪಿದರು. ಈ ಹೋರಾಟದಲ್ಲಿ ಕಾಂಗ್ರೆಸ್‌ನ ಹಲವು ನಾಯಕರು ಪ್ರಾಣ ತ್ಯಾಗ ಮಾಡಿದ್ದಾರೆ. ಅವರನ್ನು ಸ್ಮರಿಸಿ ನಮನ ಸಲ್ಲಿಸೋಣ ಎಂದರು. 

ಪ್ರಸ್ತುತ ಸ್ಥಳೀಯ ಚುನಾವಣೆ ಘೋಷಣೆಯಾಗಿದೆ. ಈ ಚುನಾವಣೆಯಲ್ಲಿ ಯಾವ ಪಕ್ಷದೊಂದಿಗೂ ಹೊಂದಾಣಿಕೆ ಮಾಡಿಕೊಳ್ಳದೇ ಪಕ್ಷದ ಅಡಿಯಲ್ಲಿ ಚುನಾವಣೆ ಎದುರಿಸಲಿದ್ದೇವೆ‌. ಲೋಕಸಭೆ ಚುನಾವಣೆ ಕೂಡ ಸಮೀಪಿಸುತ್ತಿದ್ದು, ಈ ಚುನಾವಣೆ ಸವಾಲಾಗಿದೆ. ಈಗಿಲಿಂದಲೇ ಎಲ್ಲ ರೀತಿ ತಯಾರಿ ನಡೆಸಿ, ಗೆಲ್ಲಲೇ ಬೇಕು. ನಮ್ಮ ವ್ಯಾಪ್ತಿಗೆ ಬರುವ ಕ್ಷೇತ್ರದಲ್ಲಿ ಮೂರು ಸಂಸದರು ಕಾಂಗ್ರೆಸ್‌ ನವರೇ ಇದ್ದಾರೆ. ಅವರನ್ನು ಮತ್ತೆ ಗೆಲ್ಲಿಸಿಕೊಳ್ಳಲೇಬೇಕು. ಹಾಗಾಗಿ ಎಲ್ಲ ಮುಖಂಡರು, ಕಾರ್ಯಕರ್ತರು ಚುರುಕಾಗಿ ತಯಾರಿ ನಡೆಸಿ ಎಂದು ಪರಮೇಶ್ವರ್ ಇದೇ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು. 

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಟಿ.ಬಿ. ಜಯಚಂದ್ರ, ಸಂಸದ ಮುದ್ದ ಹನುಮೇಗೌಡ, ವೆಂಕಟ ರಮಣಪ್ಪ ಇತರೆ ಮುಖಂಡರು ಹಾಜರಿದ್ದರು.

Trending News