)
ಹಾಸನಾಂಬೆ ಉತ್ಸವ ವೇಳೆ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಮತ್ತೆ ಮೂವರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.
ಮೂವರು ಅಡುಗೆ ಸಿಬ್ಬಂದಿಯನ್ನು ಅಮಾನತುಗೊಳಿಸಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಕುಮಾರ.ಎಂ. ಆದೇಶ ಹೊರಡಿಸಿದ್ದಾರೆ. ಹರಿಜನ್, ಪ್ರಸಾದ್.ಹೆಚ್., ಮಧುಕುಮಾರ್ ಅಮಾನತಾದವರು.
ಅಕ್ಟೋಬರ್ 1 3 ರಂದು ತೇರಾಪಂಥ ಭವನಕ್ಕೆ ರಾತ್ರಿ ಊಟಕ್ಕೆ ಹಾಸನಾಂಬ ಜಾತ್ರಾ ಮಹೋತ್ಸವದ ಕರ್ತವ್ಯನಿರತ ಅಧಿಕಾರಿಗಳು ಬಂದಿದ್ದರು. ಈ ವೇಳೆ ಮೂವರು ಅಡುಗೆ ಕೆಲಸದವರು ಗೈರಾಗಿದ್ದರು ಎನ್ನಲಾಗಿದೆ. ಈ ಕಾರಣದಿಂದ ಲೋಪ ಉಂಟಾದ ಹಿನ್ನೆಲೆಯಲ್ಲಿ ಶಿಸ್ತು ಕ್ರಮ ಜರುಗಿಸಲಾಗಿದೆ ಎನ್ನಲಾಗಿದೆ.
ಕಬ್ಬತ್ತಿ ಗ್ರಾಮದಲ್ಲಿರುವ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯದ ಅಡುಗೆ ಕೆಲಸ ಮಾಡುವ ಆನಂದ ಹರಿಜನ್,
ಹಾಸನದ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯದ ಅಡುಗೆ ಕೆಲಸದ ಸಿಬ್ಬಂದಿ ಪ್ರಸಾದ್.ಹೆಚ್., ಮೊಸಳೆಹೊಸಳ್ಳಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯದ ಅಡುಗೆ ಕೆಲಸ ಮಾಡುವ ಮಧುಕುಮಾರ್ ಅವರನ್ನು ಅಮಾನತು ಮಾಡಲಾಗಿದೆ.
ಈ ನಡುವೆ ಅಮಾನತು ಆದೇಶದಿಂದ ಮನನೊಂದ ಅಡುಗೆ ಕೆಲಸದಾತ ಮಧುಕುಮಾರ್ ಆತ್ಮಹತ್ಯೆ ಮಾಡಿಕೊಳ್ಳುವ ಎಚ್ಚರಿಕೆ ನೀಡಿದ್ದಾರೆ. ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಅಕ್ಟೊಬರ್ 7 ರಿಂದ ಅ.13 ರವರೆಗೆ ಕೆಲಸ ಮಾಡಿರುವ ಎಲ್ಲಾ ಜಿಪಿಎಸ್ ಫೋಟೋಗಳಿವೆ. ಡಿಓ ಸಾಹೇಬರು ಅ.13 ರಂದು ರಾತ್ರಿ 8.30 ರ ಸಮಯದಲ್ಲಿ ಅನಿರೀಕ್ಷಿತ ಭೇಟಿ ನೀಡಿದ ಸಂದರ್ಭದಲ್ಲಿ ನಾನು ಆ ಸ್ಥಾನದಲ್ಲಿ ಇರಲಿಲ್ಲ. ಆ ಸಮಯದಲ್ಲಿ ಪ್ರತಾಪ್ಗೌಡ ಜೊತೆ ಶೌಚಾಲಯಕ್ಕೆ ಹೋಗಿದ್ದೆ. ಆದರೆ ಇದನ್ನೇ ಗುರಿಯಾಗಿರಿಸಿಕೊಂಡು ಕರ್ತವ್ಯದಲ್ಲಿ ಇಲ್ಲ ಎಂದು ಅಮಾನತು ಮಾಡಲಾಗಿದೆ ಎಂದು ಆಪಾದಿಸಿದ್ದಾರೆ.
ನಾನಿ ಹಿಂದುಳಿದ ವರ್ಗಕ್ಕೆ ಸೇರಿದ್ದೇನೆ ಎಂದು ಗುರಿಯಾಗಿಸಿಕೊಂಡು ನನ್ನನ್ನು ಅಮಾನತು ಮಾಡಿ ಸಂದಿಗ್ದ ಪರಿಸ್ಥಿತಿಗೆ ತಳ್ಳಿದ್ದಾರೆ ಎಂದು ಮಧು ಕುಮಾರ್ ಆರೋಪ ಮಾಡಿದ್ದಾರೆ. ಅಮಾನತು ಆದೇಶದಿಂದ ಮಾನಸಿಕವಾಗಿ ಅಘಾತವಾಗಿ, ಆರೋಗ್ಯದಲ್ಲಿ ಏರುಪೇರಾಗಿದೆ. ಒಂದು ವೇಳೆ ನನಗೇನಾದರೂ ಹೆಚ್ಚುಕಮ್ಮಿಯಾದರೆ, ನನ್ನ ಜೀವಕ್ಕೆ ಹಾನಿಯಾದರೆ ಡಿಓ ಸಾಹೇಬರೇ ಕಾರಣ ಎಂದು ಮಧುಕುಮಾರ್ ಎಚ್ಚರಿಕೆ ನೀಡಿದ್ದಾರೆ.