)
ಚಾಮರಾಜನಗರ: ಕಾರು ಹಾಗೂ ಟಿಪ್ಪರ್ ನಡುವೆ ಭೀಕರ ಅಪಘಾತ ಸಂಭವಿಸಿ ಸ್ಥಳದಲ್ಲೇ ಇಬ್ಬರು ಮೃತಪಟ್ಟು, ಮೂವರಿಗೆ ತೀವ್ರ ಗಾಯಗಳಾದ ಘಟನೆ ಗುಂಡ್ಲುಪೇಟೆ ತಾಲೂಕಿನ ಮಾದಪಟ್ಟಣ ಗೇಟ್ ಬಳಿ ಶನಿವಾರ ನಡೆದಿದೆ.
ಕೇರಳದ ಕಲ್ಪೆಟ್ಟ ಮೂಲದ ಬಶೀರ್ ಕರಿಂಚೋರಿ (53) ಹಾಗೂ ನಾಸಿಮಾ ಬಶೀರ್ (42) ಮೃತ ದುರ್ದೈವಿಗಳು, ಅಜೀಮ್ ಹನನ್ (3), ಮಹಮ್ಮದ್ ಶಫಿ(32) ಹಾಗೂ ಜಸೀರಾ (28) ತೀವ್ರವಾಗಿ ಗಾಯಗೊಂಡಿದ್ದು ಬೇಗೂರು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಟ್ಟು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾನೆ ಮಾಡಲಾಯಿತು.
ಮೈಸೂರಿನಿಂದ ಕೇರಳ ಕಡೆಗೆ ಕಾರು ತೆರಳುತ್ತಿದ್ದಾಗ ಬೇಗೂರು ಕಡೆ ಬರುತ್ತಿದ್ದ ಟಿಪ್ಪರ್ ಅತಿವೇಗ ಹಾಗೂ ಓವರ್ ಟೇಕ್ ಮಾಡುವ ಭರದಲ್ಲಿ ಮುಖಾಮುಖಿ ಡಿಕ್ಕಿ ಹೊಡೆದಿದೆ.
ಅಪಘಾತ ಆಗುತ್ತಿದ್ದಂತೆ ಟಿಪ್ಪರ್ ಬಿಟ್ಟು ಚಾಲಕ ಪರಾರಿಯಾಗಿದ್ದು ಬೇಗೂರು ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಎರಡೂ ವಾಹನಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.