)
ತುಮಕೂರು: ತುಮಕೂರು ನಗರದ ಎಸ್.ಎಸ್.ಪುರಂ ಮೂರನೇ ಕ್ರಾಸ್ನಲ್ಲಿ ಭಾನುವಾರ ಸಂಜೆ ನಡೆದ ಘಟನೆ ಜನರನ್ನು ಬೆಚ್ಚಿಬೀಳಿಸಿದೆ. ಕೇವಲ 23 ವರ್ಷ ವಯಸ್ಸಿನ ಸುಷ್ಮಿತಾ ಎಂಬ ಯುವತಿ ಪತಿಯ ಕ್ರೌರ್ಯಕ್ಕೆ ಬಲಿಯಾಗಿ ಮೃತಪಟ್ಟಿದ್ದಾರೆ.
ಮೃತ ಸುಷ್ಮಿತಾ ಮಾಗಡಿ ಪಟ್ಟಣದವರಾಗಿದ್ದು, ಕಳೆದ ಒಂದೂವರೆ ವರ್ಷದ ಹಿಂದೆ ಕೊರಟಗೆರೆ ತಾಲೂಕಿನ ಪುಟ್ಟಸಂದ್ರ ಗ್ರಾಮದ ಮೋಹನ್ ಅವರೊಂದಿಗೆ ವಿವಾಹವಾಗಿದ್ದರು. ಮದುವೆಯ ನಂತರವೇ ಪತಿ ಮೋಹನ್ ಮನೆ, ಸೈಟ್ ಹಾಗೂ ಹಣಕ್ಕಾಗಿ ಅವಳ ಮೇಲೆ ಹಿಂಸೆ ನಡೆಸುತ್ತಿದ್ದನೆಂಬ ಆರೋಪ ಹೊರಬಂದಿದೆ. ಜೊತೆಗೆ ಮಕ್ಕಳಿಲ್ಲ ಎಂಬ ಕಾರಣಕ್ಕೆ ಸಹ ಅವಳಿಗೆ ಹಿಂಸೆ ನೀಡುತ್ತಿದ್ದನೆಂದು ಕುಟುಂಬಸ್ಥರು ತಿಳಿಸಿದ್ದಾರೆ.
ಭಾನುವಾರ ಸಂಜೆ 4.48 ಕ್ಕೆ ತಾಯಿಗೆ ಕೊನೆಯ ಸಂದೇಶ ಕಳುಹಿಸಿದ್ದ ಸುಷ್ಮಿತಾ, ಸಂಜೆ 5 ರಿಂದ 6 ಗಂಟೆಯ ನಡುವೆಯೇ ಸಾವಿಗೀಡಾದರೆಂದು ಶಂಕಿಸಲಾಗಿದೆ. ಅತ್ತೆ, ಮಾವ ಹಾಗೂ ಮೋಹನ್ ಸೇರಿ ಕೊಲೆ ಮಾಡಿ ನೇಣು ಬಿಗಿದಂತೆ ನಾಟಕವಾಡಿದ್ದಾರೆ ಎಂಬುದು ಕುಟುಂಬಸ್ಥರ ಆರೋಪ. ಇದಕ್ಕೂ ಮುನ್ನ ಹಲವಾರು ಬಾರಿ ಪತಿ ಮೋಹನ್ ಹಲ್ಲೆ ನಡೆಸಿದ್ದನೆಂಬುದು ಬೆಳಕಿಗೆ ಬಂದಿದೆ. ಕುಟುಂಬಸ್ಥರು ರಾಜಿ-ಸಂದಾನ ಮಾಡಿ ವಿಷಯವನ್ನು ಬಗೆಹರಿಸಲು ಪ್ರಯತ್ನಿಸಿದ್ದರು. ಆದರೆ ಕೊನೆಗೆ ಈ ದುರಂತ ಸಂಭವಿಸಿದೆ.
ಸುಷ್ಮಿತಾ ಶವ ಪತ್ತೆಯಾದ ನಂತರ, ತುಮಕೂರು ಶವಾಗಾರದ ಮುಂದೆ ಪೋಷಕರು ಮತ್ತು ಬಂಧುಗಳು ಆಕ್ರಂದನದ ಅಲೆ ಎಬ್ಬಿಸಿದರು. ಪೊಲೀಸರ ಹಸ್ತಕ್ಷೇಪದಲ್ಲಿ ಪ್ರಕರಣ ದಾಖಲಾಗಿ ತನಿಖೆ ಆರಂಭವಾಗಿದೆ.