)
ರಾಜ್ಯದಲ್ಲಿ ಯೂರಿಯಾ ರಸಗೊಬ್ಬರದ ಕೊರತೆ ಎದುರಾಗಿದೆ. ರಸಗೊಬ್ಬರಕಾಗಿ ಕುಟುಂಬ ಸಮೇತ ಬಂದು ಕ್ಯೂ ನಿಲ್ಲುತ್ತಿದ್ದಾರೆ ರೈತರು. ಬೆಳಗಿನ ಜಾವ 3 ಗಂಟೆಯಿಂದಲೇ ಬಂದು ಕಾದು ಕುಳಿತರೂ ಸಮರ್ಪಕವಾಗಿ ಯೂರಿಯಾ ಸಿಗುತ್ತಿಲ್ಲ ಎಂದು ಅನ್ನದಾತರು ಕಣೀರು ಹಾಕುತ್ತಿದ್ದಾರೆ.
ಗದಗ ಜಿಲ್ಲೆಯಲ್ಲಿ ಯೂರಿಯಾ ರಸಗೊಬ್ಬರ ಸಮಸ್ಯೆ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಇಂದು ಯೂರಿಯಾಗಾಗಿ ಗದಗ ನಗರದ ಡಂಬಳ ನಾಕಾದಲ್ಲಿರುವ ಪ್ರಧಾನಮಂತ್ರಿ ಕಿಸಾನ್ ಸಮೃದ್ದಿ ಕೇಂದ್ರದ ಮುಂದೆ ಸಾವಿರಾರು ಅನ್ನದಾತರು ಜಮಾವಣೆಗೊಂಡಿದ್ದರು. ತಾಲೂಕಿನ ಬಹುತೇಕ ಗ್ರಾಮಗಳಿಂದ ಆಗಮಿಸಿದ್ದ ರೈತರು ಕೇಂದ್ರದ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದರು. ಮುಂಜಾನೆ 3 ಗಂಟೆಯಿಂದಲೇ ಸರತಿ ಸಾಲಿನಲ್ಲಿ ಕಾಡು ಕುಳಿತಿದ್ದರೂ ಗೊಬ್ಬರ ಸಿಗುತ್ತಿಲ್ಲ ಎಂದಾದಾಗ ರಸಗೊಬ್ಬರ ಕೇಂದ್ರದಲ್ಲಿ ರೈತರು ಗಲಾಟೆ ಆರಂಭವಾಯಿತು. ಕೆಲಕಾಲ ರಸ್ತೆ ತಡೆಯೂ ನಡೆಯಿತು.
ಇಷ್ಟೆಲ್ಲಾ ನಡೆದ ಮೇಲೆ ಪೊಲೀಸರ ನಿಯಂತ್ರಣದಲ್ಲೇ ಗೊಬ್ಬರ ವಿತರಣೆ ಮಾಡಲಾಯಿತು. ಬೇಕಾದಷ್ಟು ಸಮರ್ಪಕವಾಗಿ ರಸಗೊಬ್ಬರ ಸಿಗುತ್ತಿಲ್ಲ ಅನ್ನೋದು ರೈತರ ಆರೋಪವಾಗಿದೆ. ಇನ್ನು ಬೆಳಗ್ಗೆ 3 ಗಂಟೆಯಿಂದಲೇ ಕ್ಯೂನಲ್ಲಿ ನಿಂತಿದ್ದೇವೆ. ಅನ್ನ ನೀರು ಬಿಟ್ಟು ಗೊಬ್ಬರಕಾಗಿ ಕಾಯುತ್ತಿದ್ದೇವೆ. ಬೆಳಗಿನಿಂದ ಮನೆಯಲ್ಲಿದ್ದ ಮಕ್ಕಳು ಹಾಗೂ ಮಹಿಳೆಯರ ಸಮೇತ ಸರತಿ ಸಾಲಿನಲ್ಲಿ ನಿಂತು ಸುಸ್ತಾಗಿದ್ದೇವೆ. ಆದರು ಗೊಬ್ಬರ ಸಿಗುತ್ತಿಲ್ಲ ಎಂದು ರೈತರು ಕಣ್ಣೀರು ಹಾಕಿದ್ದಾರೆ.
ಲಕ್ಷಗಟ್ಟಲೇ ಸಾಲ ಸೂಲ ಮಾಡಿ ಭೂತಾಯಿ ಒಡಲು ತುಂಬಿಸಿದ್ದೇವೆ. ಪ್ರತಿ ವರ್ಷಕ್ಕಿಂತ ಈ ವರ್ಷ ವರುಣನ ಆರ್ಭಟ ಜೋರಾಗಿದೆ. ಆದರೆ, ಸರಿಯಾಗಿ ಬಂದ ಫಸಲಿಗೆ ಸಮಯಕ್ಕೆ ಸರಿಯಾಗಿ ನೀಡುವುದಕ್ಕೆ ನಮ್ಮಲ್ಲಿ ಗೊಬ್ಬರ ಇಲ್ಲ. ಹೀಗೆಯೇ ಆದರೆ ನಾವು ಸಾಯ್ತಿವಿ, ಜೊತೆಗೆ ನಮ್ಮ ಬೆಳೆಗಳು ಕೂಡ ಸತ್ತು ಹೋಗುತ್ತವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ ರೈತರು.
ಒಬ್ಬ ರೈತನಿಗೆ ಕೇವಲ 2 ಚೀಲ ಮಾತ್ರ ಯೂರಿಯಾ ವಿತರಣೆ ಮಾಡಲಾಗುತ್ತಿದೆ. ಬೆಳಗಿನಿಂದ ರಸಗೊಬ್ಬರಕ್ಕಾಗಿ ಬಕಪಕ್ಷಿಯಂತೆ ಕಾದು ಸಾಕಾಗಿದೆ ಎಂದು ರೈತರು ಸರ್ಕಾರದ ವಿರುದ್ಧ ಹಿಡಿಶಾಪ ಹಾಕಿದ್ದಾರೆ. ಸಾಕಷ್ಟು ಮಳೆಯಾಗಿ ಬೆಳೆಗಳು ನಾಶವಾಗುತ್ತಿವೆ. ಗೊಬ್ಬರ ಸಿಂಪಡಣೆ ಮಾಡಿದರೆ ಮಾತ್ರ ಬೆಳೆಗಳು ಬರುತ್ತವೆ. ಇಲ್ಲವಾದರೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುತ್ತದೆ. ಉತ್ತಿ, ಬಿತ್ತಿ, ಬೆಳೆದ ಬೆಳೆಗಳು ಕೈತಪ್ಪಿ ಹೋಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.