)
ಬೆಂಗಳೂರು : ವಿಜಯೇಂದ್ರ ದೆಹಲಿಗೆ ತೆರಳಿ ಮೂರುದಿನವಾಗಿದೆ. ಖಾಸಗಿ ಕೆಲಸದ ನಿಮಿತ್ತ ಎಂದು ಸುದ್ದಿಯಾಗಿದ್ದರೂ, ಅವರು ಹೋಗಿದ್ದು ಮಹತ್ವದ ಕೆಲಸಕ್ಕೆ ಅನ್ನೋದು ಎಲ್ಲರಿಗೂ ಅನಿಸಿತ್ತು. ಬಿಜೆಪಿ ರಾಜ್ಯಾಧ್ಯಕ್ಷರಾಗಿ ಎರಡು ವರ್ಷ ಕಳೆದಿದೆ. ಆದರೆ ಅವರು ಚುನಾಯಿತ ಅಧ್ಯಕ್ಷರಾಗಿಲ್ಲ, ನಾಮನಿರ್ದೇಶಿತ ಅಧ್ಯಕ್ಷ. ಹೀಗಾಗಿ ಈಗ ಅಧಿಕೃತವಾಗಿ ಘೋಷಣೆ ಮಾಡಿ ಎಂದು ಹೈಕಮಾಂಡ್ ಮೊರೆ ಹೋಗಿದ್ದಾರೆ ಎನ್ನಲಾಗಿದೆ. ರಾಜ್ಯ ಬಿಜೆಪಿಯಲ್ಲಿ ಎಲ್ಲವು ಸರಿಯಾಗಿಲ್ಲ. ಬಣ ರಾಜಕೀಯ ಹೆಚ್ಚಾಗಿದೆ ಎಂದು ದೂರಿದ್ದಾರೆ ಎನ್ನಲಾಗಿದೆ. ಅಮಿತ್ ಶಾ ಅವರನ್ನ ಭೇಟಿಯಾಗಿ, ರೆಬಲ್ಸ್ ಟೀಂ ಮೇಲಿಂದ ಮೇಲೆ ಸಭೆ ಮಾಡ್ತಿದೆ. ಹಿರಿಯರು ದಿನಕ್ಕೊಂದು ಹೇಳಿಕೆ ನೀಡ್ತಿದ್ದಾರೆ. ಇದಕ್ಕೆಲ್ಲ ಕಡಿವಾಣ ಹಾಕಿ ಎಂದು ಮನವಿ ಮಾಡಿದ್ದಾರಂತೆ. ಪಕ್ಷ ಸಂಘಟನೆ ಮಾಡ್ತಿದ್ದೇನೆ. ಸರ್ಕಾರದ ವಿರುದ್ಧ ಹೋರಾಟ ಕೂಡ ಯಶಸ್ವಿಯಾಗಿ ಮಾಡಲಾಗ್ತಿದೆ. ಆದರೂ ಅಧ್ಯಕ್ಷರ ಬದಲಾವಣೆ ಆಗುತ್ತೆ ಎಂಬ ಗುಸುಗುಸು ಮಾಡ್ತಿದ್ದಾರೆ. ಮುಂದಿನ ಚುನಾವಣೆ ಗು ಅನ್ವಯವಾಗುವಂತೆ ಅಂದರೆ ಮುಂದಿನ ಮೂರು ವರ್ಷಕ್ಕೆ ತಮ್ಮ ಹೆಸರನ್ನ ಅಧ್ಯಕ್ಷರನ್ನಾಗಿ ಘೋಷಿಸಿ. ಪಕ್ಷವನ್ನ ಅಧಿಕಾರಕ್ಕೆ ತರುವುದಾಗಿ ಭರವಸೆ ನೀಡಿದ್ದಾರಂತೆ. ಎಲ್ಲ ಮಾತನ್ನ ಕೇಳಿಸಿಕೊಂಡ ಅಮಿತ್ ಶಾ, ಶೀಘ್ರದಲ್ಲಿಯೇ ಎಲ್ಲ ತೀರ್ಮಾನ ಆಗತ್ತೆ. ಹೈಕಮಾಂಡ್ ಎಲ್ಲವನ್ನು ಗಮನಿಸುತ್ತಿದೆ ಎಂದು ತಿಳಿಸಿದ್ದಾರಂತೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರನ್ನೂ ಭೇಟಿಯಾಗಿ, ಬೇಗ ತೀರ್ಮಾನ ಕೈಗೊಳ್ಳುವಂತೆ ಒತ್ತಡ ಹೇರಿ ಬಂದಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ. ಜೆಡಿಎಸ್ ನಾಯಕರಾದರೂ, ಕೇಂದ್ರದಲ್ಲಿ ಸಚಿವರಾಗಿರುವ ಕುಮಾರಸ್ವಾಮಿ ಬಿಜೆಪಿ ಹೈಕಮಾಂಡ್ ಜೊತೆ ಉತ್ತಮ ಭಾಂಧವ್ಯ ಹೊಂದಿದ್ದಾರೆ. ಈ ಕಾರಣಕ್ಕಾಗಿಯೇ ಅವರನ್ನೂ ಭೇಟಿಯಾದ ವಿಜಯೇಂದ್ರ, ನೀವು ಒಮ್ಮೆ ಮಾತುಕತೆ ಮಾಡಿ. ರಾಜ್ಯ ಬಿಜೆಪಿಯ ಸ್ಥಿತಿಗತಿ ವಿವರಿಸಿ. ಇಲ್ಲದಿದ್ದರೆ ಮೈತ್ರಿ ಇದ್ದರೂ, ಹೋರಾಡುವುದು ಕಷ್ಟವಾಗುತ್ತದೆ ಎಂದು ಮನವರಿಕೆ ಮಾಡುವ ಯತ್ನ ಮಾಡಿದ್ದಾರೆ.
ಇದೆಲ್ಲದರ ಜೊತೆ ಪದಾಧಿಕಾರಿಗಳ ಬದಲಾವೆ ಸಹ ಆಗಬೇಕಿದೆ. ಪ್ರಧಾನ ಕಾರ್ಯದರ್ಶಿಗಳಲ್ಲಿ ಬಹುತೇಕರು ನಿಷ್ಕ್ರೀಯರಾಗಿದ್ದಾರೆ. ಉಪಾಧ್ಯಕ್ಷರು ಯಾರಿದ್ದಾರೆ ಎಂದು ಮರೆತುಹೋಗುವಂತಾಗಿದೆ. ಮೋರ್ಚಾಗಳ ಅಧ್ಯಕ್ಷರನ್ನ ಬದಲಾಯಿಸಬೇಕಿದೆ. ಇದಕ್ಕೆಲ್ಲ ಒಪ್ಪಿಗೆ ನೀಡಿದರೆ ಪಕ್ಷವನ್ನ ಇನ್ನಷ್ಟು ಬಲಪಡಿಸುವೆ ಎಂದು ವಿಜಯೇಂದ್ರ ಆಶ್ವಾಸನೆ ನೀಡಿದ್ದಾರಂತೆ. ಒಂದುವೇಳೆ ಪದಾಧಿಕಾರಿಗಳ ಬದಲಾವಣೆಗೆ ಒಪ್ಪಿದರೆ ತಮ್ಮ ಸ್ಥಾನ ಭದ್ರ ಎಂಬ ಲೆಕ್ಕಾಚಾರದಲ್ಲಿರುವ ವಿಜಯೇಂದ್ರ, ಹೈಕಮಾಂಡ್ ಆದೇಶಕ್ಕೆ ಕಾಯುತ್ತಿದ್ದಾರೆ. ಈಗ ಹೈಕಮಾಂಡ್, ರಾಜ್ಯ ಬಿಜೆಪಿಯ ಪದಾಧಿಕಾರಿಗಳ ಬದಲಾವಣೆ ಮಾಡಲು ಹೇಳುತ್ತಾ ? ಇಲ್ಲವೇ ಬೇರೆಯದೇ ನಿರ್ಧಾರ ಮಾಡುತ್ತಾ ಎಂದು ಕಾದುನೋಡಬೇಕಷ್ಟೆ.