)
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ರಾಜ್ಯದ ಜಿಲ್ಲಾ ಉಸ್ತುವಾರಿ ಸಚಿವರು, ಸಚಿವರು ಮತ್ತು ಶಾಸಕರೊಂದಿಗೆ ಇಂದು ಇಡೀ ದಿನ ನಡೆದ ಸಭೆಯಲ್ಲಿ ರಾಜ್ಯದ ಆರ್ಥಿಕ ಸಾಧನೆ, ಕೃಷಿ, ಅಭಿವೃದ್ಧಿ ಕಾಮಗಾರಿಗಳು, ಗ್ಯಾರಂಟಿ ಯೋಜನೆಗಳು ಮತ್ತು ಕೇಂದ್ರ ಸರ್ಕಾರದ ಅಸಹಕಾರದ ಕುರಿತು ವಿವರವಾಗಿ ಚರ್ಚಿಸಲಾಯಿತು.
ಕೆಡಿಪಿ ಸಭೆಗಳಲ್ಲಿ ಶಾಸಕರ ಸಕ್ರಿಯ ಭಾಗವಹಿಸುವಿಕೆ:
ಸಭೆಯಲ್ಲಿ, ಎಲ್ಲಾ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ (ಕೆಡಿಪಿ) ಸಭೆಗಳಲ್ಲಿ ಶಾಸಕರು ಮತ್ತು ಸಚಿವರು ಅರ್ಥಪೂರ್ಣವಾಗಿ ಭಾಗವಹಿಸಬೇಕು ಎಂದು ಸಿಎಂ ಸೂಚಿಸಿದರು. ಜನರ ಸಮಸ್ಯೆಗಳು, ಕಾಮಗಾರಿಗಳ ತಾಂತ್ರಿಕ ತೊಂದರೆಗಳು, ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ನಿಧಾನ ಧೋರಣೆಯನ್ನು ಎಡಿಪಿ ಸಭೆಗಳಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳುವಂತೆ ಒತ್ತಾಯಿಸಿದರು.
ರಾಜ್ಯದ ತಲಾ ಆದಾಯದಲ್ಲಿ ದೇಶದಲ್ಲಿ ಮೊದಲ ಸ್ಥಾನ:
ರಾಜ್ಯದ ಜನರ ತಲಾ ಆದಾಯವು ದೇಶದಲ್ಲಿಯೇ ಅಗ್ರಸ್ಥಾನದಲ್ಲಿದೆ ಎಂದು ಸಿಎಂ ಹೆಮ್ಮೆಯಿಂದ ತಿಳಿಸಿದರು. ಇದಕ್ಕೆ ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ನೇರ ಕಾರಣವಾಗಿವೆ ಎಂದು ಒತ್ತಿ ಹೇಳಿದ ಅವರು, ಈ ಸಾಧನೆಯನ್ನು ಕ್ಷೇತ್ರದ ಮತದಾರರಿಗೆ ಅರ್ಥಮಾಡಿಸುವ ಕೆಲಸವನ್ನು ರಭಸವಾಗಿ ಮುಂದುವರಿಸಬೇಕು ಎಂದು ಶಾಸಕರಿಗೆ ಕರೆ ನೀಡಿದರು.
ಕೇಂದ್ರದಿಂದ ಯೂರಿಯಾ ಕೊರತೆ:
ಕೇಂದ್ರ ಸರ್ಕಾರದ ಅಸಹಕಾರದಿಂದ ರೈತರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಸೂಚಿಸಿದರು. ಮುಂಗಾರು ಹಂಗಾಮಿಗೆ 11.17 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಅಗತ್ಯವಿದ್ದರೆ, ಕೇಂದ್ರವು ಕೇವಲ 5.17 ಲಕ್ಷ ಮೆಟ್ರಿಕ್ ಟನ್ ಸರಬರಾಜು ಮಾಡಿದೆ. ಈ ವರ್ಷ 2 ಲಕ್ಷ ಹೆಕ್ಟೇರ್ ಹೆಚ್ಚುವರಿ ಮುಸುಕಿನ ಜೋಳ ಬಿತ್ತನೆಯಾದ ಕಾರಣ ಯೂರಿಯಾ ಬೇಡಿಕೆ ಏರಿಕೆಯಾಗಿದೆ. ಆದರೆ, ಕೇಂದ್ರದ ಕಡಿಮೆ ಸರಬರಾಜಿನಿಂದ 1.66 ಲಕ್ಷ ಮೆಟ್ರಿಕ್ ಟನ್ ಕೊರತೆಯಾಗಿದೆ. ಇದರಿಂದಾಗಿ ಬಿಜೆಪಿಯವರ ಪ್ರತಿಭಟನೆಯನ್ನು ರಾಜಕೀಯ ದುರುದ್ದೇಶದ ಕ್ರಮ ಎಂದು ಬಣ್ಣಿಸಿದ ಸಿಎಂ, ಈ ವಿಷಯವನ್ನು ಜನರಿಗೆ ಅರ್ಥಮಾಡಿಸುವಂತೆ ಶಾಸಕರಿಗೆ ಸೂಚಿಸಿದರು.
ಹಿಂದಿನ ಬಿಜೆಪಿ ಸರ್ಕಾರದ ಆರ್ಥಿಕ ಲೋಪಗಳು: ಹಿಂದಿನ ಬಿಜೆಪಿ ಸರ್ಕಾರವು ₹2,70,695 ಕೋಟಿ ಕಾಮಗಾರಿಗಳಿಗೆ ಅನುದಾನ ಒದಗಿಸದೆ ಟೆಂಡರ್ ಕರೆದಿದ್ದು, ₹1,66,426 ಕೋಟಿ ಕಾಮಗಾರಿಗಳಿಗೆ ಅನುಮೋದನೆ ನೀಡಿ ₹72,000 ಕೋಟಿಗೂ ಹೆಚ್ಚು ಬಿಲ್ಗಳನ್ನು ಬಾಕಿ ಇಟ್ಟಿತ್ತು. ಈ ಲೋಪಗಳನ್ನು ಸರಿಪಡಿಸುವ ಜೊತೆಗೆ ಆರ್ಥಿಕತೆಗೆ ಚೈತನ್ಯ ತುಂಬುತ್ತಿರುವುದಾಗಿ ಸಿಎಂ ತಿಳಿಸಿದರು.
ಕೇಂದ್ರದ ತೆರಿಗೆ ಪಾಲು ಕಡಿತ:
15ನೇ ಹಣಕಾಸು ಆಯೋಗದ ವರದಿಯ ನೆಪದಲ್ಲಿ ಕೇಂದ್ರ ಸರ್ಕಾರವು ರಾಜ್ಯಕ್ಕೆ ಶೇ.23ರಷ್ಟು ತೆರಿಗೆ ಪಾಲು ಕಡಿಮೆ ಮಾಡಿದ್ದು, ಕಳೆದ 5 ವರ್ಷಗಳಲ್ಲಿ ₹68,000 ಕೋಟಿಗೂ ಹೆಚ್ಚು ನಷ್ಟವಾಗಿದೆ ಎಂದು ಸಿಎಂ ಆರೋಪಿಸಿದರು. ಈ ವಿಷಯವನ್ನು ಶಾಸಕರು ಜನರಿಗೆ ತಿಳಿಯಪಡಿಸಬೇಕು ಎಂದರು.
ಗ್ಯಾರಂಟಿ ಯೋಜನೆಗಳಿಗೆ ₹52,000 ಕೋಟಿ:
ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳಿಗೆ ವಾರ್ಷಿಕ ₹52,000 ಕೋಟಿ ಖರ್ಚು ಮಾಡುತ್ತಿದ್ದು, ಸಾಮಾಜಿಕ ಪಿಂಚಣಿ, ಸಹಾಯಧನ, ಪ್ರೋತ್ಸಾಹ ಧನ ಮತ್ತು ಫಲಾನುಭವಿಗಳಿಗೆ ನೇರವಾಗಿ ತಲುಪುವ ಯೋಜನೆಗಳಿಗೆ ₹1.12 ಲಕ್ಷ ಕೋಟಿ ವಿನಿಯೋಗಿಸುತ್ತಿದೆ. ಜೊತೆಗೆ, ₹1,24,440 ಕೋಟಿಯನ್ನು ವೇತನ ಮತ್ತು ಪಿಂಚಣಿಗಳಿಗಾಗಿ, ₹83,200 ಕೋಟಿಯನ್ನು ಬಂಡವಾಳ ವೆಚ್ಚಕ್ಕಾಗಿ ಮೀಸಲಿಡಲಾಗಿದೆ. ಇದು ರಾಜ್ಯ ಬಜೆಟ್ನ ಶೇ.20.03ರಷ್ಟು ಮತ್ತು ದೇಶದಲ್ಲಿಯೇ ಅತಿ ಹೆಚ್ಚು ಎಂದು ಸಿಎಂ ತಿಳಿಸಿದರು.
ಶಕ್ತಿ ಯೋಜನೆಯಿಂದ ಮಹಿಳೆಯರ ಉದ್ಯೋಗ ಏರಿಕೆ: ಶಕ್ತಿ ಯೋಜನೆಯಿಂದ ಬೆಂಗಳೂರಿನಲ್ಲಿ ಮಹಿಳೆಯರ ಉದ್ಯೋಗ ಶೇ.23 ಮತ್ತು ಧಾರವಾಡದಲ್ಲಿ ಶೇ.21ರಷ್ಟು ಹೆಚ್ಚಾಗಿದೆ ಎಂದು ಇತ್ತೀಚಿನ ಅಧ್ಯಯನ ವರದಿಗಳು ತಿಳಿಸಿವೆ. ಇದು ರಾಜ್ಯದ ಆರ್ಥಿಕ ಸಾಧನೆಗೆ ಪೂರಕವಾಗಿದೆ ಎಂದು ಸಿಎಂ ಹೇಳಿದರು.
ಅಭಿವೃದ್ಧಿ ಕಾಮಗಾರಿಗಳ ಮೇಲೆ ಗಮನ:
ಜಿಲ್ಲೆಗಳಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಸ್ಥಿತಿಗತಿ, ಕೃಷಿ ಚಟುವಟಿಕೆಗಳು, ಬಿಡುಗಡೆಯಾದ ಅನುದಾನದ ಸದ್ಬಳಕೆ ಮತ್ತು ಕಾಮಗಾರಿಗಳಿಗೆ ಕಾಲಾವಧಿ ನಿಗದಿಪಡಿಸುವ ಕುರಿತು ಅಧಿಕಾರಿಗಳನ್ನು ಚುರುಕುಗೊಳಿಸಬೇಕು ಎಂದು ಸಿಎಂ ಸೂಚಿಸಿದರು. ಚುನಾವಣೆಯಲ್ಲಿ ನೀಡಿದ ಆಶ್ವಾಸನೆಗಳ ಈಡೇರಿಕೆ ಮತ್ತು ಬಜೆಟ್ನಲ್ಲಿ ಘೋಷಿತ ಯೋಜನೆಗಳ ಜಾರಿಗೆ ತೀವ್ರ ಗಮನ ಹರಿಸುವಂತೆ ತಿಳಿಸಿದರು.
ವಿಶೇಷ ಅನುದಾನ: ರಾಜ್ಯದ ಆರ್ಥಿಕ ಸಂಕಷ್ಟಗಳ ನಡುವೆಯೂ ₹50 ಕೋಟಿ ವಿಶೇಷ ಅನುದಾನವನ್ನು ಒದಗಿಸಲಾಗುತ್ತಿದ್ದು, ಇದನ್ನು ಶೇ.100ರಷ್ಟು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಿಎಂ ಒತ್ತಾಯಿಸಿದರು.ಕೇಂದ್ರದ ಅಸಹಕಾರ, ಹಿಂದಿನ ಸರ್ಕಾರದ ಆರ್ಥಿಕ ದುರಾಡಳಿತದ ಹೊರತಾಗಿಯೂ ರಾಜ್ಯವನ್ನು ಉತ್ತಮ ದಿಕ್ಕಿನಲ್ಲಿ ಮುನ್ನಡೆಸುತ್ತಿರುವುದಕ್ಕೆ ಶಾಸಕರು ಮತ್ತು ಸಚಿವರ ಸಹಕಾರಕ್ಕೆ ಸಿಎಂ ಧನ್ಯವಾದ ಸಲ್ಲಿಸಿದರು.