ವಾಯುಭಾರ ಕುಸಿತದಿಂದಾಗಿ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜಸ್ಥಾನದ ಮೇಲ್ಭಾಗದಿಂದ ಆರಂಭವಾಗಿರುವ ಚಂಡಮಾರುತವು ಮಹಾರಾಷ್ಟ್ರ, ಗುಜರಾತ್ ಅಷ್ಟೇ ಅಲ್ಲದೆ ಕರ್ನಾಟಕದ ಒಳನಾಡಿನ ಪ್ರದೇಶಗಳ ಮೇಲೂ ಪರಿಣಾಮ ಬೀರಲಿದ್ದು ಧಾರಾಕಾರ ಮಳೆ ಬಗ್ಗೆ ಎಚ್ಚರಿಕೆ ನೀಡಲಾಗಿದೆ.
ವಾಯುಭಾರ ಕುಸಿತ, ಮುಂಗಾರು ಪೂರ್ವ ಚಟುವಟಿಕೆಗಳಿಂದಾಗಿ ಮುಂದಿನ ಕೆಲ ದಿನಗಳವರೆಗೆ ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಮಳೆ ಮುನ್ಸೂಚನೆ ನೀಡಿರುವ ಐಎಂಡಿ ಕೆಲ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದ್ದು, ಹಲವೆಡೆ ಆರೆಂಜ್ ಅಲರ್ಟ್ ಅನ್ನು ಸಹ ಘೋಷಣೆ ಮಾಡಿದೆ.
ಹಾಸನ, ತುಮಕೂರು, ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಿತ ಮಳೆ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ ಈ ನಾಲ್ಕೂ ಜಿಲ್ಲೆಗಳಲ್ಲೂ ಯೆಲ್ಲೋ ಅಲರ್ಟ್ ನೀಡಿದೆ.
ಈ ಮಧ್ಯೆ ರಾಜ್ಯ ರಾಜಧಾನಿ ಸಿಲಿಕಾನ್ ಸಿಟಿ ಬೆಂಗಳೂರು ಸೇರಿದ್ನತೆ ರಾಜ್ಯದ 12 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಅನ್ನು ಸಹ ಘೋಷಿಸಲಾಗಿದೆ.
ಐಎಂಡಿ ಮುನ್ಸೂಚನೆ ಪ್ರಕಾರ, ರಾಜ್ಯದ ಉತ್ತರ ಒಳನಾಡಿನ ಪ್ರದೇಶಗಳು, ದಕ್ಷನ್ ಒಳನಾಡು, ಮಲೆನಾಡು, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ನೀಡಲಾಗಿದೆ.
ಇಂದು ಕೂಡ ಬೆಂಗಳೂರಿನಲ್ಲಿ ಮಳೆ ಅಬ್ಬರ ಸಾಧ್ಯತೆ ಇದ್ದು ಮೇ 9ರ ಬಳಿಕ ಮಳೆ ಹೆಚ್ಚಾಗಲಿರುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.