)
ಅವರದ್ದು ಶಿಕ್ಷಕರ ಕುಟುಂಬ, ಪ್ರತಿ ನಿತ್ಯ ನೂರಾರು ಮಕ್ಕಳಿಗೆ ಪಾಠ ಮಾಡುತ್ತಿದ್ದ ಇಬ್ಬರು ಶಿಕ್ಷಕರು ಆ ಕುಟುಂಬದ ಹಿರಿಯರು. ಆದರೆ ಮಕ್ಕಳಿಗೆ ತಿದ್ದಿತೀಡಿ ಬುದ್ದಿ ಹೇಳುತ್ತಿದ್ದವರ ಕುಟುಂಬದ ಮೇಲೆ ವರದಕ್ಷಿಣೆ ಕಿರುಕುಳದ ಗಂಭೀರ ಆರೋಪ ಕೇಳಿ ಬಂದಿದೆ. ಗಂಡ ಹಾಗೂ ಆತನ ಇಡೀ ಕುಟುಂಬದ ವಿರುದ್ಧ ವರದಕ್ಷಿಣೆ ಕಿರುಕುಳ ದೂರು ನೀಡಲಾಗಿದ್ದು, ಇಡೀ ಕುಟುಂಬಕ್ಕೆ ಬಂಧನದ ಭೀತಿ ಎದುರಾಗಿದೆ. ಮೊದ ಮೊದಲು ಪತಿಯ ಮನೆ ಮುಂದೆ ಧರಣಿ ನಡೆಸುತ್ತಾ ಒಡವೆ ಬೇಕು ಎನ್ನುತ್ತಿದ್ದ ಸೊಸೆ, ಈಗ ಏಕಾಏಕಿ ವರಕ್ಷಿಣೆ ಕಿರುಕುಳ ಎಂದು ಆರೋಪಿಸಿ ಪ್ರಕರಣ ದಾಖಲಿಸಿದ್ದಾಳೆ.
ತುಮಕೂರಿನ ಸಪ್ತಗಿರಿ ಬಡಾವಣೆಯ ಇಡೀ ಕುಟುಂಬವೇ ಜೈಲಿಗೆ ಹೋಗುವ ಪರಿಸ್ಥಿತಿ ಎದುರಾಗಿದೆ. ಕಳೆದ ಶುಕ್ರವಾರ ನಾನು ಬೇಡವೆಂದ ಮೇಲೆ ನನಗೆ ನನ್ನ ಒಡವೆ ಬೇಕು ಎಂದು ಪತಿಯ ಮನೆ ಮುಂದೆ ಸಡನ್ನಾಗಿ ಬಂದು ಧರಣಿ ನಡೆಸುತ್ತ ಕುಳಿತಿದ್ದ ಮಹಿಳೆ ಪ್ರೇರಣಾ, ತನಗಾದ ಅನ್ಯಾಯದ ಬಗ್ಗೆ ಗಂಡ ಹಾಗೂ ಅತ್ತೆ ಮಾವನ ಮೇಲೆ ಸಾಲು ಸಾಲು ಆರೋಪ ಮಾಡಿದ್ದಳು.
ಅವರಿಬ್ಬರದ್ದೂ ಗುರು ಹಿರಿಯರು ನಿಶ್ಚಯಿಸಿ ಮಾಡಿಸಿದ ಮದುವೆ. ಚಿಕ್ಕನಾಯಕನಹಳ್ಳಿಯವರಾದ ಪ್ರೇರಣ ಕಳೆದ ಆಗಸ್ಟ್ 2024ರಲ್ಲಿ ತುಮಕೂರಿನ ಪ್ರಜ್ವಲ್ ಜಯಶಂಕರ್ ಎಂಬುವರನ್ನು ಮದುವೆ ಆಗಿದ್ದರು. ಆದರೆ ಮದುವೆ ಆಗಿ ಕೇವಲ ನಾಲ್ಕೇ ತಿಂಗಳಿಗೆ ಇವರ ಜೊತೆ ಇರೋಕೆ ಕಷ್ಟ ಆಗುತ್ತಿದೆ ಎಂದು ಕಲಹ ಶುರುವಾಗಿತ್ತು. ಹಲವು ಬಾರಿ ರಾಜಿ ಸಂಧಾನ ನಡೆದಿದ್ದರೂ ಏನೂ ಉಪಯೋಗ ಆಗಿರಲಿಲ್ಲ.
ತನ್ನ ಕುಟುಂಬದ ಮೇಲೆ ವರದಕ್ಷಿಣೆಯಂಥ ಒಂದು ಗಂಭೀರ ಕಿರುಕುಳದ ಆರೋಪ ಬರುತ್ತಿದ್ದಂತೆ, ಪ್ರೇರಣ ಪತಿ ಪ್ರಜ್ವಲ್ ಜಯಶಂಕರ್ ನೇರವಾಗಿ ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ. ಆ ಆರೋಪಗಳೆಲ್ಲಾ, ಸುಳ್ಳು, ನಮಗೆ ವರದಕ್ಷಿಣೆ ಪಡೆಯೋ ಮನಸ್ಥಿತಿಯೇ ಇಲ್ಲ. ನಾವೇ ಮದುವೆಗೆಂದು ಲಕ್ಷಾಂತರು ರೂ. ಖರ್ಚು ಮಾಡಿಕೊಂಡಿದ್ದೆವು. ಮದುವೆ ಬಳಿಕ ಆಕೆಯನ್ನು ನಾನೇ ನನ್ನ ಸ್ವಂತ ಖರ್ಚಿನಲ್ಲಿ ಎಂಬಿಎ ಓದೋಕು ಕೂಡಾ ಸೇರಿಸಿದ್ದೆ. ಹಾಗೇನಾದ್ರೂ ನಮ್ಮ ಮೇಲೆ ಆತರ ಅನುಮಾನ ಇದ್ದರೆ ನ್ಯಾಯಾಲಯದಲ್ಲಿ ಸಾಬೀತುಪಡಿಸಲಿ. ನಾವು ವರದಕ್ಷಿಣೆ ಕಿರುಕುಳ ನೀಡಿದ್ದೇವೆ ಎಂಬುದಕ್ಕೆ ಯಾವುದೇ ಸಾಕ್ಷಿ ಇಲ್ಲ ಎಂದು ಪ್ರಜ್ವಲ್ ಹೇಳಿದ್ದಾರೆ. ಇತ್ತ ಪ್ರಜ್ವಲ್ ಪತ್ರಿಕಾಗೋಷ್ಟಿ ಬೆನ್ನಲ್ಲೇ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾಳೆ ಪ್ರೇರಣಾ.
ಅದೇನೇ ಇರಲಿ ಸದ್ಯ ಪತಿ ಪ್ರಜ್ವಲ್ ಜಯಶಂಕರ್ ಸೇರಿ ಆತನ ಕುಟುಂಬದ ನಾಲ್ವರ ಮೇಲೆ ಡೌರಿ ಕೇಸ್ ಬಿದ್ದಿದೆ. ಗಂಡನ ಇಡೀ ಕುಟುಂಬದ ಮೇಲೆ ಸೊಸೆ ಎಫ್ಐಆರ್ ದಾಖಲಿಸಿದ್ದಾಳೆ. ಹೊಸ ಬಿನ್ ಎಸ್ ಕಾಯ್ದೆ ಅಡಿಯಲ್ಲಿ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಾಗಿದೆ. ಆದರೆ, ಇದರ ಸಹವಾಸವೇ ಬೇಡ ಎಂದು ಬೆಂಗಳೂರಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದ ಪ್ರಜ್ವಲ್ ತಂಗಿ ಮೇಲೆ ಎಫ್ಐಆರ್ ಆಗಿರೋದು ದುರಂತ. ಮನೆಯ ಹಿರಿಯರು ಕೂತು ಬಗೆಹರಿಸಿಕೊಳ್ಳಬಹುದಾಗಿದ್ದ ಸಂಬಂಧವೊಂದು ಪೊಲೀಸ್ ಠಾಣೆ ಮೆಟ್ಟಿಲೇರಿ ಮುರಿದು ಬೀಳುವ ಹಂತಕ್ಕೆ ಬಂದಿದೆ.