)
ದಾವಣಗೆರೆ : 18 ತಿಂಗಳ ಹಿಂದೆ ದಾಖಲಾಗಿದ್ದ ನಾಪತ್ತೆ ಕೆಸ್ ಗೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕಾಲು ಜಾರಿ ಪತಿ ನಾಲೆಗೆ ಬಿದ್ದಿದ್ದಾನೆ ಎಂದು ಆ ವ್ಯಕ್ತಿಯ ಪತ್ನಿ ಪೊಲೀಸರಿಗೆ ದೂರು ನೀಡಿದ್ದಳು. ಪತ್ನಿಯ ದೂರಿನ ಆಧಾರದಲ್ಲಿ ಕಾಲುವೆ ಪೂರ್ತಿ ಹುಡುಕಾಟವೂ ನಡೆದಿತ್ತು. ಆದರೆ ವ್ಯಕ್ತಿಯಾಗಲಿ, ವ್ಯಕ್ತಿಯ ಮೃತದೇಹವಾಗಲಿ ಸಿಕ್ಕಿರಲಿಲ್ಲ. ಇದೀಗ ಆ ಮಿಸ್ಸಿಂಗ್ ಕೇಸ್ ದೊಡ್ಡ ತಿರುವು ಪಡೆದುಕೊಂಡಿದೆ.
ಮೂಲತಃ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ತ್ಯಾಗದಕಟ್ಟೆಯ ಗ್ರಾಮದ ಲಕ್ಷ್ಮೀಕಾಂತ ಎನ್ನುವ ಮಹಿಳೆಯನ್ನು ಕಳೆದ ಒಂಬತ್ತು ವರ್ಷಗಳ ಹಿಂದೆ ದಾವಣಗೆರೆ ಚನ್ನಗಿರಿ ತಾಲೂಕಿನ ಅಣ್ಣಾಪುರ ಗ್ರಾಮದ ನಿಂಗಪ್ಪ ಎಂಬವರಿಗೆ ವಿವಾಹ ಮಾಡಿಕೊಡಲಾಗಿತ್ತು. ಮದುವೆಯಾಗಿ ಎಂಟು ವರ್ಷ ಕಳೆದರೂ ಈ ಲಕ್ಷ್ಮೀಗೆ ಮಕ್ಕಳಾಗಿರಲಿಲ್ಲಾ. ಮಕ್ಕಳಿಗಾಗಿ ಕಂಡ ಕಂಡ ದೇವರ ಮೊರೆ ಹೋಗಿದ್ದೂ ಆಗಿತ್ತು. ಸಿಕ್ಕ ಸಿಕ್ಕ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದದ್ದೂ ಆಗಿದೆ. ಕೊನೆಗೆ ಒಂದು ದಿನ ನಿಂಗಪ್ಪನಿಗೆ ಮಕ್ಕಳಾಗುವ ಯೋಗವಿಲ್ಲ ಅನ್ನೋ ಸತ್ಯ ಸಂಗತಿ ಬಹಿರಂಗವಾಗಿತ್ತು.
ಇದೇ ವಿಚಾರಕ್ಕೆ ಗಂಡ ಹೆಂಡತಿ ಮಧ್ಯೆ ಹೊಂದಾಣಿಕೆ ಅನ್ನೋದೇ ಹಳ್ಳ ಹಿಡಿದು ಹೋಗಿತ್ತು. ಮತ್ತೊಂದೆಡೆ, ಪತಿ ಜೊತೆ ಅಡಿಕೆ ಕೆಲಸಕ್ಕೆ ಹೋಗುತ್ತಿದ್ದ ಲಕ್ಷ್ಮಿಗೆ, ತಿಪ್ಪೇಶ್ ನಾಯ್ಕ ಹಾಗೂ ಸಂತೋಷ್ ಅನ್ನೋರು ಪರಿಚಯವಾಗಿತ್ತು. ಈ ಪೈಕಿ ತಿಪ್ಪೇಶ್ ಜೊತೆಗಿನ ಪರಿಚಯ ಪ್ರೀತಿ, ಅತಿಯಾದ ಸಲುಗೆ ಅನೈತಿಕ ಸಂಬಂಧಕ್ಕೆ ತಿರುಗಿತ್ತು. ದಿನಕಳೆದಂತೆ ಲಕ್ಷ್ಮೀ ಮತ್ತು ತಿಪ್ಪೇಶ್ ನಡುವೀಣೆ ಸಂಬಂಧ ಗಟ್ಟಿಯಾಗುತ್ತಾ ಹೋಯಿತು.
ಇವರಿಬ್ಬರ ಪ್ರೀತಿ ಪ್ರೇಮ ಪ್ರಣಯದ ವಾಸನೆ ಗಂಡ ನಿಂಗಪ್ಪನ ಮೂಗಿಗೂ ಬಡಿಯಿತು. ಇತ್ತ ಲಕ್ಷ್ಮೀ ಗರ್ಭಿಣಿಯಾಗಿದ್ದಳು. ತನಗೆ ಮಕ್ಕಳು ಆಗುವುದಿಲ್ಲ ಎಂದು ತಿಳಿದಿದ್ದ ನಿಂಗಪ್ಪನಿಗೆ, ಪತ್ನಿ ಗರ್ಭಿಣಿಯಾಗಿದ್ದ ಸುದ್ದಿ ಅರಗಿಸಿಕೊಳ್ಳಲು ಆಗಲಿಲ್ಲ. ಸಿಟ್ಟಿಗೆದ್ದು ಆಕೆಯ ಹೊಟ್ಟೆಗೆ ಹೊಡೆದು, ಆಸ್ಪತ್ರೆಗೆ ಕರೆದೊಯ್ದು ಗರ್ಭಪಾತ ಮಾಡಿಸಿದ್ದ. ಪತಿಯ ವರ್ತನೆಗೆ ಕೋಪಗೊಂಡ ಲಕ್ಷ್ಮೀ ನಾನು ತಾಯಿಯಾಗುವ ಭಾಗ್ಯವನ್ನು ಹಾಳು ಮಾಡಿದ ಪತಿ ನಿಂಗಪ್ಪನಿಗೆ ಚಟ್ಟ ಕಟ್ಟಲು ಸಂಚು ರೂಪಿಸಿದ್ದಳು.
ಗಂಡನ ಮೇಲೆ ನಿಗಿ ನಿಗಿ ಅಂತಿದ್ದ ಲಕ್ಷ್ಮೀ ತನ್ನ ಪ್ರಿಯಕರ ತಿಪ್ಪೇಶ್ ನಾಯ್ಕಗೆ ತನ್ನ ಗಂಡನ ಕೊಲೆ ಮಾಡುವಂತೆ ಹೇಳಿದ್ದಾಳೆ. ಪ್ರಿಯತಮೆಯ ಆಜ್ಞೆಯಂತೆ , ನಿಂಗಪ್ಪನನ್ನು ಪಾರ್ಟಿ ಮಾಡಿಸುವ ನೆಪದಲ್ಲಿ ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮಕ್ಕೆ ತಿಪ್ಪೆಶ್ ನಾಯಕ್ ಮತ್ತು ಸತೀಶ್ ಅಲಿಯಾಸ್ ಡಾಂಪ ಇಬ್ಬರು ಸೇರಿ ಕರೆದುಕೊಂಡು ಹೋಗಿದ್ದಾರೆ. ಮೈಮರೆಯುವಂತೆ ಮದ್ಯ ಕುಡಿಸಿದ್ದಾರೆ. ಕೊನೆಗೆ ನಶೆಯಲ್ಲಿದ್ದ ನಿಂಗಪ್ಪನನ್ನು ಬಸವಾಪುರ ಗ್ರಾಮದ ಬಳಿಯ ಭದ್ರಾ ನಾಲೆಗೆ ತಳಿದ್ದಾರೆ. ಇದಾದ ಬಳಿಕ ಲಕ್ಷ್ಮೀ 2024 ರ ಜನವರಿ 18 ರಂದು ನಿಂಗಪ್ಪ ಬಸವಾಪುರ ಗ್ರಾಮದ ಬಳಿ ಇರುವ ಭದ್ರಾ ನಾಲೆಯಲ್ಲಿ ಕಾಲು ಜಾರಿ ಬಿದ್ದಿದ್ದಾರೆ ಎಂದು ಚನ್ನಗಿರಿ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಭದ್ರಾ ನಾಲೆಯಲ್ಲಿ ಎಷ್ಟೇ ಶೋಧ ಕಾರ್ಯ ನಡೆಸಿದರೂ ನಿಂಗಪ್ಪನ ಮೃತ ದೇಹ ಪತ್ತೆಯಾಗಿರಲಿಲ್ಲ.
ಇದನ್ನೂ ಓದಿ : ಬಿತ್ತಿದ ಬೀಜಗಳಿಗೆ ರಸಗೊಬ್ಬರವಿಲ್ಲದೆ ಅನ್ನದಾತ ಕಂಗಾಲು
ಇದಾದ ಬಳಿಕ ಲಕ್ಷ್ಮೀ ತವರು ಮನೆ ಸೇರಿದಂತೆ ತಿಪ್ಪೇಶ್ ನಾಯ್ಕ ಕೆಲಸ ಮಾಡಲೆಂದು ಕೇರಳಕ್ಕೆ ಹೋಗಿ ಅಲ್ಲಿ ಕೆಲಸಕ್ಕೆ ಸೇರಿದ್ದಾನೆ. ಬಳಿಕ ಅಲ್ಲಿಗೆ ಲಕ್ಷ್ಮೀಯನ್ನು ಕರೆಸಿಕೊಂಡಿದ್ದಾನೆ. ಲಕ್ಷ್ಮೀ ತನ್ನ ಪಾಲಕರಿಗೆ ಹೇಳದೇ ಕೇರಳಕ್ಕೆ ಹೋಗಿದ್ದರಿಂದ ಪಾಲಕರು ಲಕ್ಷ್ಮೀ ಕಾಣೆಯಾಗಿದ್ದಾಳೆ ಎಂದು ಚನ್ನಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಲಕ್ಷ್ಮೀ ವರ್ತನೆಯಿಂದ ಅನುಮಾನಗೊಂಡ ಪೊಲೀಸರು ತಿಪ್ಪೇಶ್ ನಾಯ್ಕನ ಸ್ನೇಹಿತ ಸಂತೋಷ್ ನನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಎಲ್ಲಾ ಸತ್ಯ ಹೊರ ಬಂದಿದೆ. ಬಳಿಕ ಕೇರಳದಲ್ಲಿದ್ದ ಲಕ್ಷ್ಮೀ ಹಾಗೂ ತಿಪ್ಪೇಶ್ ನಾಯ್ಕ ಅವರನ್ನು ಚನ್ನಗಿರಿ ಪೊಲೀಸರು ಬಂಧಿಸಿ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಧೀಶರ ಮುಂದೆ ಲಕ್ಷ್ಮೀ, ತಿಪ್ಪೇಶ್ ನಾಯ್ಕ ಹಾಗೂ ಸಂತೋಷ್ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.
ಒಟ್ಟಿನಲ್ಲಿ ಒಂದು ವರ್ಷದ ಹಿಂದೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ನಾಪತ್ತೆ ಪ್ರಕರಣ ಕೊಲೆ ಎಂದು ದೃಢಪಟ್ಟಿದ್ದು ಆರೋಪಿಗಳು ಮಾಡಿದ ತಪ್ಪಿಗೆ ಜೈಲು ಸೇರಿದ್ದಾರೆ. ಇನ್ನೂ ಪತ್ತೆಯಾಗದ ನಿಂಗಪ್ಪನ ಮೃತ ದೇಹದ ಶೋಧಕ್ಕೆ ಪೊಲೀಸರು ಮುಂದಾಗಿದ್ದಾರೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.