close

News WrapGet Handpicked Stories from our editors directly to your mailbox

ಡಿಕೆಶಿಗೆ ಸಿಗುತ್ತಾ ಬೇಲ್? ಜಾಮೀನು ಸಿಕ್ಕರೆ ಮನೆಗೆ, ಸಿಗದಿದ್ದರೆ ತಿಹಾರ್ ಜೈಲಿಗೆ ಟ್ರಬಲ್ ಶೂಟರ್!

ರಕ್ತದೊತ್ತಡ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ್ ಅವರಿಗೆ ದೆಹಲಿಯ ಡಾ. ರಾಮಮನೋಹರ ಲೋಹಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Yashaswini V Yashaswini V | Updated: Sep 19, 2019 , 09:43 AM IST
ಡಿಕೆಶಿಗೆ ಸಿಗುತ್ತಾ ಬೇಲ್? ಜಾಮೀನು ಸಿಕ್ಕರೆ ಮನೆಗೆ, ಸಿಗದಿದ್ದರೆ ತಿಹಾರ್ ಜೈಲಿಗೆ ಟ್ರಬಲ್ ಶೂಟರ್!
File Image

ನವದೆಹಲಿ: ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಜಾರಿ ನಿರ್ದೇಶನಾಲಯದ ತನಿಖೆ ಎದುರಿಸುತ್ತಿದ್ದು ಸದ್ಯ ಅನಾರೋಗ್ಯದ ಹಿನ್ನೆಲೆಯಲ್ಲಿ ದೆಹಲಿಯ ಡಾ. ರಾಮಮನೋಹರ ಲೋಹಿಯಾ ಆಸ್ಪತ್ರೆಯಲ್ಲಿರುವ ರಾಜ್ಯ ಕಾಂಗ್ರೆಸ್ ಪಕ್ಷದ ಪ್ರಭಾವಿ ಮುಖಂಡ ಹಾಗೂ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದ್ದು, ಡಿಕೆಶಿ ಅವರಿಗೆ ಜಾಮೀನು ಸಿಗುತ್ತದೆಯೇ ಎಂಬ ಕುತೂಹಲ ಹೆಚ್ಚಾಗಿದೆ.

ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಡಿ.ಕೆ. ಶಿವಕುಮಾರ್ ಅವಿಗೆ ರಕ್ತದೊತ್ತಡ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ದೆಹಲಿಯ ಡಾ. ರಾಮಮನೋಹರ ಲೋಹಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ರಾತ್ರಿ ಅವರಿಗೆ 'ಆಂಜಿಯೋಗ್ರಫಿ' ಮಾಡಿಸಲಾಗಿದೆ ಎಂದು ಹೇಳಲಾಗಿದೆ. ಇಂದಿನ ವಿಚಾರಣೆ ಬಳಿಕ ಟ್ರಬಲ್ ಶೂಟರ್ ಗೆ ಜಾಮೀನು ದೊರೆತರೆ ಅವರು ಇಂದೇ ಮನೆಗೆ ತೆರಳಲಿದ್ದಾರೆ. ಒಂದೊಮ್ಮೆ ಡಿಕೆಶಿಗೆ ಜಾಮೀನು ಸಿಗದೇ ಇದ್ದರೆ ತಿಹಾರ್ ಜೈಲಿಗೆ ಹೋಗಬೇಕಾಗುತ್ತದೆ.

ಒಂದೊಮ್ಮೆ ರೋಸ್ ಅವೆನ್ಯೂ ಕೋರ್ಟ್​ನಲ್ಲಿ ಡಿಕೆಶಿವಕುಮಾರ್ ಅವರಿಗೆ ಜಾಮೀನು ಸಿಗದಿದ್ದರೆ, ಮುಂದಿನ ನಡೆ ಬಗ್ಗೆ ಈಗಾಗಲೇ ಚಿಂತನೆ ನಡೆಸಿರುವ ಡಿ.ಕೆ. ಶಿವಕುಮಾರ್ ಪರ ವಕೀಲರು ಹೈಕೋರ್ಟ್, ಇಲ್ಲವೇ ಸುಪ್ರೀಂಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಡಿ.ಕೆ‌. ಶಿವಕುಮಾರ್ ಅವರಿಗೆ ಯಾವ ಕಾರಣಕ್ಕೂ ಜಾಮೀನು ನೀಡಬಾರದು:
ಡಿ.ಕೆ. ಶಿವಕುಮಾರ್ ಜಾರಿ ನಿರ್ದೇಶನಾಲಯದ ವಶದಲ್ಲಿ ವಿಚಾರಣೆಗೆ ಸರಿಯಾಗಿ ಸ್ಪಂದಿಸಿಲ್ಲ.‌ ಎರಡನೇ ಬಾರಿ ವಶಕ್ಕೆ ಪಡೆದಾಗಲೂ ವಿಚಾರಣೆ ಸಾಧ್ಯವಾಗಿಲ್ಲ. ಅನಾರೋಗ್ಯದ ಕಾರಣದಿಂದ ಡಾ. ರಾಮಮನೋಹರ ಲೋಹಿಯಾ ಆಸ್ಪತ್ರೆಗೆ ದಾಖಲಾಗಿಸಿತ್ತು. ಡಿ.ಕೆ. ಶಿವಕುಮಾರ್ ಅವರನ್ನು‌ ಮತ್ತೆ ವಿಚಾರಣೆ ನಡೆಸಬೇಕಾದ ಪ್ರಮೇಯ ಬರುತ್ತದೆ.‌ ಆಗ ನ್ಯಾಯಾಲಯದ ಅನುಮತಿ ಪಡೆದು ವಿಚಾರಣೆ ನಡೆಸುತ್ತೇವೆ. ಡಿ.ಕೆ. ಶಿವಕುಮಾರ್ ಪ್ರಭಾವಿ ಆಗಿರುವುದರಿಂದ ಸಾಕ್ಷ್ಯ ನಾಶ ಮಾಡುವ ಮತ್ತು ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ತಿರುಚುವ ಸಂಭವವಿದೆ‌. ಪ್ರಕರಣದ ಇತರೆ ಆರೋಪಿಗಳು ಮತ್ತು ಸಾಕ್ಷಿಗಳನ್ನು ತಮ್ಮ ಪರ ನಿಲ್ಲುವಂತೆ ಬೆದರಿಸಲಿದ್ದಾರೆ.‌ ತನಿಖೆಯ ದೃಷ್ಟಿಯಿಂದ ಡಿ.ಕೆ. ಶಿವಕುಮಾರ್ ಅವರನ್ನು ಹೊರಗಡೆ ಬಿಡುವುದು ಸಾಧುವಲ್ಲ. ನ್ಯಾಯಾಂಗ ಬಂಧನಕ್ಕೆ ಕಳುಹಿಸಿ ಸೋಮವಾರ(ಸೆ.16) ಜಾರಿ ನಿರ್ದೇಶನಾಲಯದ ಪರ ವಕೀಲರು ತಮ್ಮ ಆಕ್ಷೇಪಣಾ ಅರ್ಜಿಯಲ್ಲಿ ತಿಳಿಸಿದ್ದಾರೆ.

ಈ ಕುರಿತು ಜಾರಿ ನಿರ್ದೇಶನಾಲಯದ ಪರವಾಗಿ ವಾದ ಮಂಡಿಸಿದ ಕೆ.ಎಂ.ನಟರಾಜ್ ಅವರು, ಡಿಕೆ ಶಿವಕುಮಾರ್ ಅವರ ಆರೋಗ್ಯ ಸರಿ ಇಲ್ಲದ ಕಾರಣ ಅವರನ್ನು ಸರಿಯಾಗಿ ವಿಚಾರಣೆ ಮಾಡಲು ಸಾಧ್ಯವಾಗಿಲ್ಲ. ಹಾಗಾಗಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬೇಕು ಹಾಗೂ ಅವರ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಬೇಕು. ನ್ಯಾಯಾಂಗ ಬಂಧನದ ಸಂದರ್ಭದಲ್ಲಿ ಇಡಿ ವಿಚಾರಣೆಗೆ ಅವಕಾಶ ಮಾಡಿಕೊಡಬೇಕು. ಅವರ ಆರೋಗ್ಯದ ಬಗ್ಗೆ ನಾವು ಕಾಳಜಿ ವಹಿಸುತ್ತೇವೆ ಎಂದು ಹೇಳಿದ್ದರು.

ಡಿಕೆಶಿ ಪರ ವಾದ ಮಂಡಿಸಿದ್ದ ಹಿರಿಯ ವಕೀಲರಾದ ಅಭಿಷೇಕ್ ಮನು ಸಿಂಘ್ವಿ, ಡಿ.ಕೆ. ಶಿವಕುಮಾರ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬೇಕು ಎಂಬ ಇಡಿ ಪರ ವಕೀಲರ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರಲ್ಲದೆ,  ಡಿ.ಕೆ.ಶಿವಕುಮಾರ್ ಅವರ ಆರೋಗ್ಯ ನಿರಂತರವಾಗಿ ಹದಗೆಡುತ್ತಿದೆ. ಈಗಾಗಲೇ ಅವರನ್ನು ಮೂರು ಬಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ಎದೆ ನೋವಿನ ಸಮಸ್ಯೆ ಸಹ ಹೆಚ್ಚಾಗಿದೆ. ಕಳೆದ ಬಾರಿ ಸಹ ಅವರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಇಡಿ ವಶಕ್ಕೆ ನೀಡಬಾರದು ಎಂದು ಮನವಿ ಮಾಡಲಾಗಿತ್ತು. ಆದರೂ ಇಡಿ ವಶಕ್ಕೆ ಒಪ್ಪಿಸಲಾಯಿತು. ಇದೀಗ ಇಡಿ ವಶದ 15 ದಿನಗಳ ಅವಧಿ ಪೂರ್ಣಗೊಂಡಿದ್ದರೂ ಸಹ ವಿಚಾರಣೆ ಪೂರ್ಣಗೊಂಡಿಲ್ಲ ಎಂದು ಹೇಳುತ್ತಿದ್ದಾರೆ. ಡಿಕೆಶಿ ಅವರ ಹೆಸರು ಹಾಳು ಕೆಡಿಸುವುದೇ ಇಡಿ ಉದ್ದೇಶ. ಇದ್ಯಾವುದಕ್ಕೂ ನ್ಯಾಯಾಲಯ ಆಸ್ಪದ ಕೊಡದೆ ಡಿಕೆಶಿ ಅವರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಜಾಮೀನು ಮಂಜೂರು ಮಾಡಬೇಕೆಂದು ಮನವಿ ಮಾಡಿದ್ದರು.

ಸ್ವಲ್ಪ ಉದಾಸೀನ ಮಾಡಿದ್ದರೂ ಡಿಕೆಶಿಗೆ ಹಾರ್ಟ್ ಅಟ್ಯಾಕ್ ಆಗುತ್ತಿತ್ತು: ಸಿಂಘ್ವಿ

ಡಿಕೆಶಿ ಪರ ವಾದ ಮಂಡಿಸಿದ್ದ ಮತ್ತೋರ್ವ ಹಿರಿಯ ವಕೀಲರಾದ ಮುಕುಲ್ ರೋಹ್ಟಗಿ, ಡಿ.ಕೆ.ಶಿವಕುಮಾರ್ ಏಳು ಬಾರಿ ಶಾಸಕರಾಗಿದ್ದಾರೆ. ತಮ್ಮ ಜೀವನದುದ್ದಕ್ಕೂ ಸಾರ್ವಜನಿಕ ಸೇವೆ ಮಾಡಿದ್ದಾರೆ. ಅವರ ಮನೆಯಲ್ಲಿ 41 ಲಕ್ಷ ರೂ. ಮಾತ್ರ ಜಪ್ತಿ ಮಾಡಲಾಗಿದೆ. ಅಲ್ಲದೆ, ಅವರು ಎಲ್ಲದಕ್ಕೂ ತೆರಿಗೆ ಪಾವತಿಸಿದ್ದಾರೆ. ಡಿಕೆಶಿ ವಿರುದ್ಧ ಪಿಎಂಎಎಲ್ ಕೇಸ್ ಯಾಕೆ ಹಾಕಿದ್ದಾರೆಂದು ತಿಳಿಯುತ್ತಿಲ್ಲ. ಇದು ಕೇಂದ್ರ ಸರ್ಕಾರ ರದ್ದು ಮಾಡಿರುವ ಕಾಯ್ದೆ. ಆದರೂ ಇದನ್ನು ಸಿಂಧು ಮಾಡಲು ಪ್ರಯತ್ನಿಸಲಾಗುತ್ತಿದೆ. ನಾವು ನಮ್ಮ ಕಕ್ಷಿದಾರರ ಪಾಸ್ಪೋರ್ಟ್ ಸಲ್ಲಿಸಲು ಸಿದ್ದರಿದ್ದೇವೆ. ಅವರನ್ನು ಅನಾರೋಗ್ಯದ ಆಧಾರದ ಮೇಲೆ ಜಾಮೀನು ನೀಡಿ ಬಿಡುಗಡೆ ಮಾಡಿ ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.

ವಾದ-ಪ್ರತಿವಾದ ಆಲಿಸಿದ್ದ ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯದ ನ್ಯಾಯಾಧೀಶ ಅಜಯ್ ಕುಮಾರ್ ಕುಹಾರ್, ನ್ಯಾಯಾಲಯದ ಕಲಾಪದ ಸಮಯ ಮುಗಿದ ಹಿನ್ನೆಲೆಯಲ್ಲಿ ಜಾಮೀನು ಅರ್ಜಿ ವಿಚಾರಣೆಯನ್ನು ಸೆ.18ಕ್ಕೆ ಮುಂದೂಡಿದ್ದರು. 

ನಿನ್ನೆ(ಸೆ.18) ಜಾರಿ ನಿರ್ದೇಶನಾಲಯದ ಪರ ವಾದ ಮಾಡಬೇಕಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜ್ ನಿಗದಿತ (ಮಧ್ಯಾಹ್ನ 3.30) ಸಮಯಕ್ಕೆ ಆಗಮಿಸಿದ ಕಾರಣ ಸ್ವಲ್ಪ ತಡವಾಗಿಯೇ ವಿಚಾರಣೆ ಆರಂಭಿಸಲಾಯಿತು. ಕೆ.ಎಂ. ನಟರಾಜ್ ಸುಪ್ರೀಂ ಕೋರ್ಟಿನಲ್ಲಿ ಮತ್ತೊಂದು ಪ್ರಕರಣದ ಬ್ಯುಸಿಯಲ್ಲಿದ್ದಾರೆ ಎಂದು ವಿನಂತಿಸಿಕೊಂಡ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅಜಯ್ ಕುಮಾರ್ ಕುಹರ್, ಡಿ.ಕೆ. ಶಿವಕುಮಾರ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರಿಗೆ ವಾದ ಮಂಡಿಸುವಂತೆ ಹೇಳಿದರು. 

ಜಾರಿ‌ ನಿರ್ದೇಶನಾಲಯ ಇರುವುದು ಚುನಾವಣಾ ಆಯೋಗಕ್ಕೆ ನೀಡಿರುವ ಮಾಹಿತಿಗಳನ್ನು ತನಿಖೆ ಮಾಡುವುದಕ್ಕಾಗಿಯೇ? ಈ ಪ್ರಕರಣದಲ್ಲಿ ಇನ್ನೂ ಹೆಚ್ಚಿನ ವಿಚಾರಣೆ ಮಾಡುವ ಅಗತ್ಯವಾದರೂ ಏನಿದೆ?

ಅಭಿಷೇಕ್ ಮನು ಸಿಂಘ್ವಿ ವಾದ ಮಂಡನೆಯ ನಡುವೆಯೇ ಮತ್ತೊಮ್ಮೆ ಕಿರಿಯ ವಕೀಲರೊಬ್ಬರು 'ಕೆ.ಎಂ. ನಟರಾಜ್ ಈಗಲೂ ಬ್ಯುಸಿಯಾಗಿದ್ದಾರೆ. ಅವರು ಬರಲು ಸಾಧ್ಯವಾಗುತ್ತಿಲ್ಲ' ಎಂದು ನಿವೇದಿಸಿಕೊಂಡರು. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರು ವಿಚಾರಣೆಯನ್ನು ಗುರುವಾರಕ್ಕೆ ಮುಂದೂದಿದ್ದಾರೆ. ಇಡಿ ಪರ ವಕೀಲರು ಇಂದೂ ಸಹ ತಮ್ಮ ವಾದ ಮಂಡಿಸಲಿದ್ದಾರೆ. ಡಿಕೆಶಿ ಪರ ವಕೀಲರೂ ಸಹ ಅವರು ಜಾರಿ ನಿರ್ದೇಶನಾಲಯದ ವಿಚಾರಣೆಗೆ ಸಂಪೂರ್ಣ ಸಹಕಾರ ನೀಡಿದ್ದಾರೆ. ಅವರ ಆರೋಗ್ಯ ದಿನೇ-ದಿನೇ ಕ್ಷೀಣಿಸುತ್ತಿದೆ. ಇಡಿ ಅಧಿಕಾರಿಗಳ ವಿಚಾರಣೆಗೆ ಮುಂದೆಯೂ ಅವರು ಸಂಪೂರ್ಣ ಸಹಕಾರ ನೀಡಲಿದ್ದಾರೆ ಈ ಹಿನ್ನೆಲೆಯಲ್ಲಿ ಅವರಿಗೆ ಜಾಮೀನು ನೀಡುವಂತೆ ಮನವಿ ಮಾಡಲಿದ್ದಾರೆ. ವಾದ-ಪ್ರತಿವಾದ ಆಲಿಸಲಿರುವ ಜಾರಿ ನಿರ್ದೇಶನಾಲಯದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅಜಯ್ ಕುಮಾರ್ ಕುಹಾರ್, ಡಿ.ಕೆ. ಶಿವಕುಮಾರ್ ಅವರಿಗೆ ಜಾಮೀನು ನೀಡುತ್ತಾರೋ ಅಥವಾ ಜೈಲಿಗೆ ಕಳುಹಿಸುತ್ತಾರೋ ಎಂಬುದನ್ನು ಕಾದುನೋಡಬೇಕಾಗಿದೆ.