ಕೊರೊನಾ ವಿರುದ್ಧದ ಹೋರಾಟದಲ್ಲಿ ಸೈ ಎನಿಸಿಕೊಂಡ ಮಹಿಳಾ ಪಡೆ

ತೊಟ್ಟಿಲು ತೂಗುವ ಕೈ ಜಗತ್ತನ್ನೇ ತೂಗಬಲ್ಲದು. ಮಹಿಳೆ ಅಬಲೆಯಲ್ಲ, ಆಕೆ ಪುರುಷನಷ್ಟೇ ಸಬಲಳು ಎಂಬುದನ್ನು ಧಾರವಾಡ ಜಿಲ್ಲೆಯ ಐವರು ಮಹಿಳಾ ವೈದ್ಯಾಧಿಕಾರಿಗಳು ಸಾಬೀತುಪಡಿಸಿದ್ದಾರೆ. 

Last Updated : Jun 30, 2020, 05:45 PM IST
ಕೊರೊನಾ ವಿರುದ್ಧದ ಹೋರಾಟದಲ್ಲಿ ಸೈ ಎನಿಸಿಕೊಂಡ ಮಹಿಳಾ ಪಡೆ title=

ಬೆಂಗಳೂರು : ತೊಟ್ಟಿಲು ತೂಗುವ ಕೈ ಜಗತ್ತನ್ನೇ ತೂಗಬಲ್ಲದು. ಮಹಿಳೆ ಅಬಲೆಯಲ್ಲ, ಆಕೆ ಪುರುಷನಷ್ಟೇ ಸಬಲಳು ಎಂಬುದನ್ನು ಧಾರವಾಡ ಜಿಲ್ಲೆಯ ಐವರು ಮಹಿಳಾ ವೈದ್ಯಾಧಿಕಾರಿಗಳು ಸಾಬೀತುಪಡಿಸಿದ್ದಾರೆ. ನಿರ್ಗಮಿತ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರ ಮಾರ್ಗದರ್ಶನದಲ್ಲಿ ಕಳೆದ ಸುಮಾರು ಮೂರುವರೆ ತಿಂಗಳಿನಿಂದ ಕೋವಿಡ್ ನಿಯಂತ್ರಣಕ್ಕೆ ಸರ್ಕಾರದ ಎಲ್ಲ ಮಾರ್ಗಸೂಚಿಗಳನ್ನು ಜಿಲ್ಲೆಯಲ್ಲಿ ಸಮರ್ಥವಾಗಿ ಅನುಷ್ಠಾನಗೊಳಿಸುತ್ತಿದ್ದಾರೆ.

ಜಗತ್ತನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಾಣು ಎಂತಹ ಜಗಜಟ್ಟಿಗಳನ್ನೂ ಕೂಡಾ ನಡುಗಿಸಿದೆ. ಕೊರೊನಾ ವಿರುದ್ಧದ ಈ ಹೋರಾಟದಲ್ಲಿ ಕೊಂಚವೂ ಹಿಂಜರಿಯದೇ ಮುನ್ನುಗ್ಗಿರುವ ಮಹಿಳಾ ಕೊರೊನಾ ಸೇನಾಪಡೆಯೊಂದು ಧಾರವಾಡ ಜಿಲ್ಲೆಯಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ.

ನಿಕಟಪೂರ್ವ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರ ಸಮರ್ಥ ನಾಯಕತ್ವ ಹಾಗೂ ಪ್ರೋತ್ಸಾಹದೊಂದಿಗೆ ಈ ತಂಡವು ಕೋವಿಡ್ ಸೋಂಕಿತರ ಪತ್ತೆ, ಚಿಕಿತ್ಸೆ, ಕ್ವಾರಂಟೈನ್ ಕೇಂದ್ರಗಳ ನಿರ್ವಹಣೆ, ವೈರಾಲಜಿ ಪ್ರಯೋಗಾಲಯ, ಕೆಪಿಎಂಇ ನೋಂದಾಯಿತ ಆಸ್ಪತ್ರೆಗಳಲ್ಲಿ ವರದಿಯಾಗುವ ತೀವ್ರ ಉಸಿರಾಟದ ತೊಂದರೆ ಹಾಗೂ ನೆಗಡಿ, ಕೆಮ್ಮು ಮತ್ತು ಜ್ವರ ಲಕ್ಷಣಗಳಿರುವ ವ್ಯಕ್ತಿಗಳ ಆರೋಗ್ಯ ತಪಾಸಣೆ ಹಾಗೂ ಕಂಟೈನ್‍ಮೆಂಟ್ ವಲಯಗಳ ಜನರ ಆರೋಗ್ಯ ಸಮೀಕ್ಷೆ ಕಾರ್ಯಗಳನ್ನು ಪ್ರತಿನಿತ್ಯ ಜಾಗರೂಕತೆಯಿಂದ ನಿರ್ವಹಿಸುತ್ತಿದೆ.

ಜಿಲ್ಲಾ ಸರ್ವೇಕ್ಷಣಾಧಿಕಾರಿಯಾಗಿರುವ ಡಾ: ಸುಜಾತಾ ಹಸವೀಮಠ ಅವರು ಇಡೀ ಕೊರೊನಾ ನಿಯಂತ್ರಣದ ಹೋರಾಟದ ಪ್ರಮುಖ ಸೇನಾನಿಯಾಗಿದ್ದಾರೆ. ಕಳೆದ ಜನವರಿಯಿಂದಲೇ ಈ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಮಾರ್ಗದರ್ಶನದಲ್ಲಿ ಸಾಂಕ್ರಾಮಿಕ ರೋಗಗಳನ್ನು ತಡೆಯುವ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆ 1897 ಹಾಗೂ ಕರ್ನಾಟಕ ಸಾಂಕ್ರಾಮಿಕ ರೋಗಗಳ (ಕೋವಿಡ್) ನಿಯಂತ್ರಣ ಕಾಯ್ದೆಯಡಿ ಸರ್ಕಾರ ಕಾಲಕಾಲಕ್ಕೆ ಹೊರಡಿಸುವ ಎಲ್ಲ ನಿರ್ದೇಶನಗಳನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸುವಲ್ಲಿ ಇವರ ಪಾತ್ರ ಪ್ರಮುಖವಾಗಿದೆ. ಕೋವಿಡ್ ಸೋಂಕಿತರು, ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಂಪರ್ಕ ಹೊಂದಿದವರನ್ನು ಗುರುತಿಸಿ ತಪಾಸಣೆ ಮತ್ತು ಚಿಕಿತ್ಸೆಗೆ ಒಳಪಡಿಸುವ ಮಹತ್ವದ ಕಾರ್ಯವನ್ನು ಅವಿರತವಾಗಿ ಹಾಗೂ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ.

ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿಯಾಗಿರುವ ಡಾ: ಶಶಿ ಪಾಟೀಲ ಅವರು ಕೋವಿಡ್ ಸೋಂಕಿತರ ಸಂಪರ್ಕ ಹೊಂದಿದವರು, ಹೊರರಾಜ್ಯಗಳಿಂದ ಆಗಮಿಸಿದ ಜನರು ಸೇರಿದಂತೆ ಕ್ವಾರಂಟೈನ್ ಅಗತ್ಯವಿರುವ ವ್ಯಕ್ತಿಗಳನ್ನು ಗುರುತಿಸಿ ಕ್ವಾರಂಟೈನ್ ಕೇಂದ್ರಗಳಲ್ಲಿ ಅವರನ್ನು ಪ್ರತ್ಯೇಕವಾಗಿ ಇರಿಸುವ ಕಾರ್ಯ ಮಾಡುತ್ತಿದ್ದಾರೆ. ಕ್ವಾರಂಟೈನ್ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ವೈದ್ಯಕೀಯ ಮತ್ತು ಅರೆವೈದ್ಯಕೀಯ ಹಾಗೂ ಸಹಾಯಕ ಸಿಬ್ಬಂದಿಗೆ ತರಬೇತಿ ಕೂಡಾ ನೀಡುತ್ತಿದ್ದಾರೆ. ಇದೀಗ ಹೊಸ ಮಾರ್ಗಸೂಚಿಗಳಂತೆ ಗುರುತಿಸಲಾಗಿರುವ ಕೋವಿಡ್ ಕೇರ್ ಸೆಂಟರ್‍ಗಳಲ್ಲಿ ಅಗತ್ಯ ಸೌಲಭ್ಯ ವೈದ್ಯಕೀಯ ಏರ್ಪಾಡುಗಳನ್ನು ನಿರ್ಮಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಕಿಮ್ಸ್‍ನ ಮೈಕ್ರೋಬಯೋಲಾಜಿ ವಿಭಾಗದ ಮುಖ್ಯಸ್ಥೆಯಾಗಿರುವ ಡಾ: ಆಶಾ ಪಾಟೀಲ ಅವರು ಈ ಭಾಗದಲ್ಲಿ ಮೊದಲ ಕೋವಿಡ್ ಪ್ರಯೋಗಾಲಯ ಸ್ಥಾಪಿಸಲು ವಿಶೇಷ ಮುತುವರ್ಜಿ ವಹಿಸಿ ಕಿಮ್ಸ್‍ನಲ್ಲಿ ಪ್ರಯೋಗಾಲಯ ಸ್ಥಾಪನೆಗೆ ಐಸಿಎಂಆರ್ ಅನುಮೋದನೆ ಪಡೆಯಲು ಶ್ರಮಿಸಿದ್ದಾರೆ. ವೈರಾಲಜಿ ಪ್ರಯೋಗಾಲಯದ ತಾಂತ್ರಿಕ ಸಿದ್ಧತೆ ಹಾಗೂ ಮಾನವ ಸಂಪನ್ಮೂಲ ನಿರ್ವಹಣೆಯಂತಹ ಸವಾಲಿನ ಕಾರ್ಯಗಳನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕುಟುಂಬ ಕಲ್ಯಾಣಾಧಿಕಾರಿಯಾಗಿರುವ ಡಾ: ಶಶಿಕಲಾ ನಿಂಬಣ್ಣವರ ಅವರು ಕೆಪಿಎಂಇ ಅಡಿ ನೋಂದಣಿಯಾಗಿರುವ ಆಸ್ಪತ್ರೆಗಳಲ್ಲಿ ಪ್ರತಿನಿತ್ಯ ವರದಿಯಾಗುವ ತೀವ್ರ ಉಸಿರಾಟದ ತೊಂದರೆ ಮತ್ತು ನೆಗಡಿ, ಕೆಮ್ಮು ಹಾಗೂ ಜ್ವರದ ಲಕ್ಷಣಗಳಿರುವ ವ್ಯಕ್ತಿಗಳ ಪರಿಶೀಲನೆ ಮಾಡಿ ಕೋವಿಡ್ ತಪಾಸಣೆಗೆ ಒಳಪಡಿಸುವ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.

ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಯಾಗಿರುವ ಡಾ: ತನುಜಾ ಕೆ.ಎನ್. ಅವರು ಜಿಲ್ಲೆಯ ಕಂಟೈನ್‍ಮೆಂಟ್ ವಲಯಗಳಲ್ಲಿ ವಾಸಿಸುವ ವ್ಯಕ್ತಿಗಳ ಆರೋಗ್ಯ ಸಮೀಕ್ಷೆ ಹಾಗೂ ಜಿಲ್ಲೆಯಾದ್ಯಂತ ಇರುವ ಗರ್ಭಿಣಿಯರು, ಬಾಣಂತಿಯರ, ಮಕ್ಕಳು, ಮಧುಮೇಹ, ರಕ್ತದೊತ್ತಡ, ಕುಷ್ಠರೋಗ, ಕ್ಷಯರೋಗ, ಹೆಚ್‍ಐವಿ ಏಡ್ಸ್, ಕ್ಯಾನ್ಸರ್, ಪಾಶ್ರ್ವವಾಯು ಮತ್ತಿತರ ದುರ್ಬಲ ಆರೋಗ್ಯ ಹೊಂದಿರುವ ಜನರ ಆರೋಗ್ಯ ಸಮೀಕ್ಷೆ ನಡೆಸಿ ಅವರಿಗೆ ಅಗತ್ಯ ಚಿಕಿತ್ಸೆಗಳು ಲಭ್ಯವಾಗುವಂತೆ ಎಚ್ಚರ ವಹಿಸುತ್ತಿದ್ದಾರೆ.

ನಿರ್ಗಮಿತ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರ ನಾಯಕತ್ವದಲ್ಲಿ ಇದುವರೆಗೆ ಸಮರ್ಥವಾಗಿ ಕರ್ತವ್ಯ ನಿರ್ವಹಿಸಿರುವ ಈ ಮಹಿಳಾ ಕೊರೊನಾ ಸೇನಾನಿಗಳ ತಂಡ ಇದೀಗ ನೂತನ ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ ಅವರ ಮಾರ್ಗದರ್ಶನದಲ್ಲಿ ತಮ್ಮ ಕಾರ್ಯ ಮುಂದುವರೆಸಲು ಉತ್ಸುಕರಾಗಿದ್ದಾರೆ.

Trending News