)
Dharmasthala Devotees: ಧರ್ಮಸ್ಥಳ ಕ್ಷೇತ್ರ ಹಾಗೂ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅಪಪ್ರಚಾರ ವಿರುದ್ಧ ಭಕ್ತರು ಸಿಡಿದೆದ್ದು ಇಂದು ಚಾಮರಾಜನಗರದಲ್ಲಿ ಧರ್ಮಸ್ಥಳ ಭಕ್ತರು ಪ್ರತಿಭಟನೆ ನಡೆಸಿದರು. ಶ್ರೀ ಧರ್ಮಸ್ಥಳ ಅಭಿಮಾನಿಗಳ ವೇದಿಕೆಯಡಿ ಅಭಿಮಾನಿಗಳು, ಧರ್ಮಸ್ಥಳ ಸ್ವಸಹಾಯ ಸಂಘದ ಸದಸ್ಯರು, ಹಿಂದೂ ಸಂಘಟನೆ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.
ಚಾಮರಾಜನಗರದ ಚಾಮರಾಜೇಶ್ವರ ದೇವಾಲಯದಿಂದ ಪ್ಲೆಕಾರ್ಡ್ ಹಿಡಿದು ಡಿಸಿ ಕಚೇರಿವರೆಗೆ ಜನಾಗ್ರಹ ಜಾಥಾ ನಡೆಸಿದ ಭಕ್ತರು- ಯೂಟ್ಯೂಬರ್ ಗಳು, ಮಹೇಶ್ ತಿಮ್ಮರೋಡಿ, ಗಿರೀಶ್ ಮಟ್ಟಣ್ಣನವರ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.
ಭುವನೇಶ್ವರಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಧರ್ಮಸ್ಥಳದ ಅಪಪ್ರಚಾರದ ಹಿಂದೆ ವ್ಯವಸ್ಥಿತ ಜಾಲ ಇದೆಯೆಂದು ಆರೋಪಿಸಿ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಪರ ನಾವಿದ್ದೇವೆ ಎಂದು ಘೋಷಣೆ ಕೂಗಿದರು.
ಧರ್ಮಸ್ಥಳದ ಭಕ್ತೆಯಾದ ಕೊತ್ತಲವಾಡಿ ಗ್ರಾಮದ ಗಂಗಾ ಎಂಬವರು ಮಾತನಾಡಿ, ಧರ್ಮಸ್ಥಳ ಎಂಬುದು ಅತಿ ಹೆಚ್ಚು ಮಂದಿ ಭಕ್ತರು ಭೇಟಿ ಕೊಡುವ ಶ್ರದ್ಧಾಕೇಂದ್ರವಾಗಿದೆ. ಮುಸುಕುದಾರಿ ವ್ಯಕ್ತಿಯು ಹಿಂದೂ ನಂಬಿಕೆಗಳಿಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾನೆ. ಇದೇ ರೀತಿ ಅಗೆಯುತ್ತಾ ಹೋದರೇ ಯಾವಾಗ ಕೊನೆ ಎಂದು ಪ್ರಶ್ನಿಸಿದರು.
ಚಂದ್ರಮ್ಮ ಎಂಬವರು ಮಾತನಾಡಿ, ಗುಂಡಿ ತೆಗೆಯುತ್ತೇವೆಂದು 20 ಅಡಿ ಆಳ ತೆಗೆದರು ಯಾವುದೇ ಕಳೇಬರ ಪತ್ತೆಯಾಗಿಲ್ಲ. ತಪ್ಪಿತಸ್ಥರು ಯಾರೇ ಇದ್ದರು ಶಿಕ್ಷೆಯಾಗಲಿ. ಆದರೆ, ಧಾರ್ಮಿಕ ಕೇಂದ್ರಕ್ಕೆ ಕಳಂಕ ತರಲು ಹೊರಟಿರುವುದು ಸರಿಯಲ್ಲ, ತನಿಖೆ ತ್ವರಿತವಾಗಿ ಕೈಗೊಂಡು ಎಲ್ಲದ್ದಕ್ಕೂ ಇತಿಶ್ರೀ ಹಾಡಬೇಕು ಎಂದು ಒತ್ತಾಯಿಸಿದರು.