)
Human Washing Machine: ಇತ್ತೀಚೆಗೆ ಜಪಾನ್ ಹೊಸ ಅವಿಷ್ಕಾರವೊಂದನ್ನು ಮಾಡಿದೆ. ಅದೇನೆಂದರೆ ಬಟ್ಟೆ ತೊಳೆಯುವ ಮಷಿನ್ನಂತೆಯೇ ಮನುಷ್ಯರನ್ನು ಸ್ನಾನ ಮಾಡಿಸುವ ನೂತನ ಯಂತ್ರವೊಂದನ್ನು ಕಂಡುಹಿಡಿದೆ. ಇದರ ವಿಶೇಷತೆಯ ಬಗ್ಗೆ ಹೆಚ್ಚಿನ ವಿವರಣೆ ಇಲ್ಲಿದೆ.
ಜಪಾನ್ ದೇಶ ತನ್ನ ಹೊಸ ಅವಿಷ್ಕಾರ ಮತ್ತು ನವೀನ ತಂತ್ರಜ್ಞಾನಗಳಿಗೆ ಹೆಸರುವಾಸಿಯಾಗಿದೆ. ಅಷ್ಟೇ ಅಲ್ಲ ಈ ದೇಶದ ವಿಜ್ಞಾನಿಗಳು ಕಂಡುಹಿಡಿಯುವ ವಸ್ತುಗಳು ನಮ್ಮ ಯೋಚನೆಗೂ ಮೀರಿದವೇ ಇರುತ್ತವೆ. ಅಂತಹದ್ದೇ ಹೊಸ ಸಂಶೋಧನೆಯೊಂದು ಇತ್ತೀಚೆಗೆ ಸಾಕಷ್ಟು ಸದ್ದು ಮಾಡುತ್ತಿದೆ.
ಜಪಾನ್ನ ಸೈನ್ಸ್ ಕಂಪನಿಯ ಎಂಜಿನಿಯರ್ಗಳು ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ವಿಭಿನ್ನ ಯಂತ್ರವನ್ನು ವಿನ್ಯಾಸಗೊಳಿಸಿದ್ದಾರೆ. ಇದು ಮಾನವರು ದಿನನಿತ್ಯ ಉಪಯೋಗಿಸಬಹುದಾದ ಉಪಕರಣವಾಗಿದೆ. ಏಕೆಂದರೆ ಈ ವಿಶೇಷ ಯಂತ್ರವು ನಿಮ್ಮ ಕೊಳಕು ಬಟ್ಟೆಗಳನ್ನು ಸ್ವಚ್ಛಗೊಳಿಸುವಂತೆ ಮನುಷ್ಯನ ದೇಹವನ್ನು ಕ್ಲೀನ್ ಮಾಡುತ್ತದೆ. ಈ ಯಂತ್ರದ ವಿಶೇಷತೆ ಹೀಗಿದೆ.... ಒಬ್ಬ ವ್ಯಕ್ತಿ ಈ ಯಂತ್ರದ ಫೈಟರ್ ಜೆಟ್ ಕಾಕ್ಪಿಟ್ನ ಆಕಾರದ ಪ್ಲಾಸ್ಟಿಕ್ ಪಾಡ್ಗೆ ಪ್ರವೇಶಿಸಿದಾಗ, ಅದು ತಕ್ಷಣವೇ ಬೆಚ್ಚಗಿನ ನೀರಿನಿಂದ ತುಂಬುತ್ತದೆ. ಒಳಗಿರುವ ಹೈ-ಸ್ಪೀಡ್ ಜೆಟ್ಗಳು ನೀರನ್ನು ವೇಗವಾಗಿ ನಿಮ್ಮ ದೇಹದ ಮೇಲೆ ಸಿಂಪಡಿಸುತ್ತವೆ. ವಿಶೇಷ ತಂತ್ರಜ್ಞಾನ ಬಳಸಿ ಮೂರು ಮೈಕ್ರೋಮೀಟರ್ ಗಾತ್ರದ ನೊರೆಯ ಗುಳ್ಳೆಗಳು ಸೃಷ್ಟಿಯಾಗುತ್ತವೆ. ಇವು ಒತ್ತಡವನ್ನು ಉಂಟುಮಾಡಿ ಮಾನವ ದೇಹದಿಂದ ಕೊಳೆಯನ್ನು ಸಂಪೂರ್ಣವಾಗಿ ತೆಗೆದುಹಾಕುತ್ತವೆ. ಈ ಪಾಡ್ನಲ್ಲಿ ಕೇವಲ ಸ್ನಾನ ಮಾತ್ರವಲ್ಲ, ಮನರಂಜನೆಗೂ ವ್ಯವಸ್ಥೆ ಇದೆ. ಇದರಲ್ಲಿ ಸ್ನಾನ ಮಾಡುವಾಗಲೇ ಸಂಗೀತವನ್ನು ಕೇಳುವ ಸೌಲಭ್ಯವನ್ನು ಕೂಡ ಒದಗಿಸಲಾಗಿದೆ. ಹೀಗಾಗಿ ಇದು ಹೈ-ಟೆಕ್ ಬಾಥ್ ಅನುಭವವನ್ನು ನೀಡಬಲ್ಲದು.
ಆಶ್ಚರ್ಯದ ಸಂಗತಿಯೇನಂದರೆ, ಈ ಮಾನವ ತೊಳೆಯುವ ಯಂತ್ರವನ್ನು ಇಂದಿನ ಎಂಜಿನಿಯರ್ಗಳು ಹೊಸ ಆವಿಷ್ಕಾರವನ್ನಾಗಿ ತೋರಿಸಿದರೂ, ಇದರ ಮೂಲ ಕಲ್ಪನೆ 50 ವರ್ಷಗಳ ಹಿಂದೆಯೇ ಹುಟ್ಟಿಕೊಂಡಿತ್ತು. ಮೊದಲ ಬಾರಿಗೆ 1970ರಲ್ಲಿ ಜಪಾನ್ನಲ್ಲಿರುವ ಸ್ಯಾನ್ಯೊ ಎಲೆಕ್ಟ್ರಿಕ್ (ಇಂದಿನ ಪ್ಯಾನಾಸೋನಿಕ್) ಈ ಯಂತ್ರವನ್ನು ತಯಾರಿಸಿತ್ತು. ಆದರೆ ಆ ಆವೃತ್ತಿಗೆ ಹೋಲಿಸಿದರೆ, ಇಂದಿನ ತಂತ್ರಜ್ಞಾನ ಹೆಚ್ಚು ವೈಶಿಷ್ಟ್ಯಗಳನ್ನು ಹೊಂದಿದ್ದು, ಇನ್ನಷ್ಟು ಆರಾಮದಾಯಕ ಮತ್ತು ಆಕರ್ಷಕವಾಗಿದೆ.