)
Onam: ಬಾಗಲಕೋಟೆ ನಗರದಲ್ಲಿಂದು ಕೇರಳ ಮೂಲದ ವಿದ್ಯಾರ್ಥಿಗಳಿಂದ ಆಚರಣೆಗೊಂಡ ಕೇರಳಿಯನ್ನರ ಓಣಂ ಹಬ್ಬ ಎಲ್ಲರ ಗಮನ ಸೆಳೆಯಿತು. ಕನ್ನಡದ ನೆಲದಲ್ಲಿ ಓಣಂ ಹಬ್ಬ ಆಚರಿಸುವ ಮೂಲಕ ದೇಶೀಯ ಐಕ್ಯತೆಗೆ ವಿದ್ಯಾರ್ಥಿಗಳು ಸಾಕ್ಷಿಯಾದರು.
ಬಾಗಲಕೋಟೆ ನಗರದ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ಅನಾವರಣಗೊಂಡ ಓಣಂ ಹಬ್ಬಕ್ಕೆ ಮಾಜಿ ಶಾಸಕರೂ ಆಗಿಸರುವ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಅವರು ಚಾಲನೆ ನೀಡಿದರು.
ಕೇರಳದ 500ಕ್ಕೂ ಅಧಿಕ ವಿದ್ಯಾರ್ಥಿ, ವಿದ್ಯಾರ್ಥಿಗಳಿಂದ ಆಯೋಜನೆಗೊಂಡ ಹಬ್ಬದ ಆಚರಣೆಯಲ್ಲಿ ಕೇರಳದ ಸಂಸ್ಕೃತಿ ಅನಾವರಣಗೊಂಡಿತು.
ಬಸವೇಶ್ವರ ಸಂಘದ ಸಜ್ಜಲಶ್ರೀ ನರ್ಸಿಂಗ್ ಕಾಲೇಜ್ ನಲ್ಲಿ ಓದುತ್ತಿರುವ ಕೇರಳ ಮೂಲದ ವಿದ್ಯಾರ್ಥಿಗಳು ಕೇರಳದ ಸಾಂಪ್ರದಾಯಿಕ ಉಡುಗೆತೊಡುಗೆ ತೊಟ್ಟು ಎಲ್ಲರ ಗಮನ ಸೆಳೆದರು.
ಮೆರವಣಿಗೆಯಲ್ಲಿ ಕೇರಳದ ಸಾಂಪ್ರದಾಯಿಕ ಚಂಡಿಮೇಳ, ಕಥಕ್ಕಳಿ, ಪುಲಿಕಳಿ, ಕಾವಾಡಿ ದ್ರುವಂ, ಕವಸ್ಮತಿ ತಂಡಗಳ ವೈಭವ ನೋಡುಗರ ಮೈ ನವಿರೇಳಿಸುವಂತೆ ಮಾಡಿತು. ಇನ್ನು ಓಣಂ ಉತ್ಸವದಲ್ಲಿ 20 ಖಾದ್ಯಗಳ ಕೇರಳ ಮಾದರಿಯ ಊಟೋಪಚಾರದ ವ್ಯವಸ್ಥೆ ಮಾಡಲಾಗಿತ್ತು.
ಕೇರಳ ಮೂಲದ ವಿದ್ಯಾರ್ಥಿಗಳ ಜೊತೆ ಕರ್ನಾಟಕದ ವಿದ್ಯಾರ್ಥಿಗಳು ಕೂಡ ಹಬ್ಬದಲ್ಲಿ ಭಾಗಿಯಾಗಿ ಹಬ್ಬದ ಸಂತೋಷವನ್ನ ಇಮ್ಮಡಿಗೊಳಿಸಿದರು.