)
Grey Hair Remedy: ಇತ್ತೀಚಿನ ದಿನಗಳಲ್ಲಿ ಕಡಿಮೆ ವಯಸ್ಸಿನಲ್ಲೇ ಬಿಳಿ ಕೂದಲಿನ ಸಮಸ್ಯೆ ಹೆಚ್ಚಾಗುತ್ತಿದೆ. ಒತ್ತಡ, ಆಹಾರ ಪದ್ಧತಿ, ನಿದ್ರಾಹೀನತೆ ಹಾಗೂ ಮಾಲಿನ್ಯದಿಂದ ಯುವಕರಲ್ಲೂ ಕೂದಲು ಬೇಗನೆ ಬಿಳಿಯಾಗುತ್ತಿದೆ. ಇದಕ್ಕಾಗಿ ಅನೇಕರು ಹೇರ್ ಡೈ ಹಾಗೂ ರಾಸಾಯನಿಕ ಉತ್ಪನ್ನಗಳ ಮೊರೆ ಹೋಗುತ್ತಿದ್ದಾರೆ. ಆದರೆ ಇದೀಗ ನೈಸರ್ಗಿಕ ವಿಧಾನದಿಂದ ಬಿಳಿ ಕೂದಲನ್ನ ಕಪ್ಪಾಗಿಸಲು “ನಂದಿವರ್ಧನ” ಹೂ ಬಳಕೆ ಮಾಡುವ ಮನೆಮದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಆಯುರ್ವೇದ ತಜ್ಞರ ಪ್ರಕಾರ, ನಂದಿವರ್ಧನ ಹೂನಲ್ಲಿ ಕೂದಲಿನ ಆರೋಗ್ಯಕ್ಕೆ ಸಹಕಾರಿ ಗುಣಗಳಿದ್ದು, ನಿಯಮಿತವಾಗಿ ಬಳಸಿದರೆ ಕೂದಲು ಕಪ್ಪಾಗಲು ಹಾಗೂ ಬಲವಾಗಲು ಸಹಾಯವಾಗಬಹುದು. ವಿಶೇಷವಾಗಿ ಈ ಹೂವನ್ನ ತೆಂಗಿನೆಣ್ಣೆ ಅಥವಾ ಕರಿಬೇವು ಜೊತೆ ಮಿಶ್ರಣ ಮಾಡಿ ತಯಾರಿಸುವ ಎಣ್ಣೆ ಕೂದಲಿನ ಬೇರುಗಳಿಗೆ ಪೋಷಣೆ ನೀಡುತ್ತದೆ ಎಂದು ಹೇಳಲಾಗಿದೆ.
ಇದರ ಮನೆಮದ್ದಿನ ತಯಾರಿಕಾ ವಿಧಾನವೂ ಬಹಳ ಸರಳವಾಗಿದೆ. ಕೆಲವು ನಂದಿವರ್ಧನ ಹೂಗಳನ್ನ ತೆಗೆದು ಚೆನ್ನಾಗಿ ರುಬ್ಬಿ, ಅದಕ್ಕೆ ತೆಂಗಿನೆಣ್ಣೆ ಸೇರಿಸಿ ನಿಧಾನ ಉರಿಯಲ್ಲಿ ಕುದಿಸಬೇಕು. ನಂತರ ತಣ್ಣಗಾದ ಬಳಿಕ ಆ ಎಣ್ಣೆಯನ್ನ ತಲೆ ಕೂದಲಿಗೆ ಹಚ್ಚಿ ಒಂದು ಗಂಟೆ ಬಳಿಕ ತೊಳೆಯಬೇಕು. ವಾರದಲ್ಲಿ ಎರಡು ಅಥವಾ ಮೂರು ಬಾರಿ ಈ ವಿಧಾನ ಅನುಸರಿಸಿದರೆ ಕೂದಲಿನ ಹೊಳಪು ಹೆಚ್ಚುವುದು ಹಾಗೂ ಬಿಳಿ ಕೂದಲು ಕಡಿಮೆಯಾಗಲು ಸಹಾಯವಾಗಬಹುದು ಎಂದು ತಿಳಿಸಲಾಗಿದೆ.
ನಂದಿವರ್ಧನ ಹೂನಲ್ಲಿ ಆಂಟಿ-ಆಕ್ಸಿಡೆಂಟ್ ಮತ್ತು ಪೋಷಕಾಂಶಗಳು ಇರುವುದರಿಂದ ತಲೆಚರ್ಮದ ಆರೋಗ್ಯ ಕಾಪಾಡಲು ಸಹ ಇದು ನೆರವಾಗುತ್ತದೆ ಎನ್ನಲಾಗಿದೆ. ಕೂದಲು ಉದುರುವಿಕೆ, ತಲೆಹೊಟ್ಟು ಹಾಗೂ ಒಣ ಕೂದಲು ಸಮಸ್ಯೆಗಳನ್ನ ಕಡಿಮೆ ಮಾಡಲು ಸಹಕಾರಿ ಎಂದು ಕೆಲವು ನೈಸರ್ಗಿಕ ಚಿಕಿತ್ಸಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ರಾಸಾಯನಿಕ ಡೈಗಳಿಗಿಂತ ಈ ವಿಧಾನ ಸುರಕ್ಷಿತ ಎನ್ನಲಾಗುತ್ತಿದೆ.
ಆದರೆ ವೈದ್ಯರು ಒಂದು ಪ್ರಮುಖ ಎಚ್ಚರಿಕೆ ನೀಡಿದ್ದಾರೆ. ಎಲ್ಲರ ಕೂದಲು ಹಾಗೂ ಚರ್ಮದ ಸ್ವಭಾವ ಒಂದೇ ರೀತಿಯಲ್ಲಿರದು. ಆದ್ದರಿಂದ ಯಾವುದೇ ಮನೆಮದ್ದು ಬಳಸುವ ಮೊದಲು ಸಣ್ಣ ಪ್ರಮಾಣದಲ್ಲಿ ಪರೀಕ್ಷೆ ಮಾಡಿಕೊಳ್ಳಬೇಕು. ಅಲರ್ಜಿ ಅಥವಾ ಚರ್ಮದ ಸಮಸ್ಯೆ ಕಂಡುಬಂದರೆ ತಕ್ಷಣ ಬಳಕೆ ನಿಲ್ಲಿಸಿ ವೈದ್ಯರ ಸಲಹೆ ಪಡೆಯಬೇಕೆಂದು ತಿಳಿಸಿದ್ದಾರೆ.
ಇದೇ ವೇಳೆ ಸಮತೋಲನ ಆಹಾರ, ಸಾಕಷ್ಟು ನೀರು, ಉತ್ತಮ ನಿದ್ರೆ ಹಾಗೂ ಒತ್ತಡ ಕಡಿಮೆ ಮಾಡುವ ಜೀವನಶೈಲಿ ಕೂಡ ಕೂದಲಿನ ಆರೋಗ್ಯಕ್ಕೆ ಮುಖ್ಯವೆಂದು ತಜ್ಞರು ಸಲಹೆ ನೀಡಿದ್ದಾರೆ. ನೈಸರ್ಗಿಕ ವಿಧಾನಗಳನ್ನ ಸರಿಯಾಗಿ ಪಾಲಿಸಿದರೆ ಕೂದಲಿನ ಆರೋಗ್ಯ ಉತ್ತಮವಾಗಿರಬಹುದೆಂಬ ಅಭಿಪ್ರಾಯ ವ್ಯಕ್ತವಾಗಿದೆ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ತಜ್ಞ ಮೂಲಗಳ ಮಾಹಿತಿಯನ್ನ ಆಧರಿಸಿದೆ. ಇದನ್ನ Zee Kannada News ದೃಢಪಡಿಸುವುದಿಲ್ಲ. ಇಲ್ಲಿನ ಸಲಹೆಗಳನ್ನ ಪಾಲಿಸುವ ಮುನ್ನ ತಜ್ಞರ ಸಲಹೆ ಪಡೆಯುವುದು ಉತ್ತಮ.)