ಹಿಂದೂ ಧರ್ಮದವರ ಪ್ರತೀ ಮನೆಯಲ್ಲೂ ತುಳಸಿ ಗಿಡ ಇರುತ್ತದೆ. ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಆದರೆ ಕೆಲವು ಮನೆಯಲ್ಲಿ ತುಳಸಿ ಗಿಡ ಸರಿಯಾಗಿ ಬೆಳೆಯುವುದಿಲ್ಲ ಅಥವಾ ತುಳಸಿ ಗಿಡ ಮತ್ತೆ ಮತ್ತೆ ಒಣಗುತ್ತಲೇ ಇರುತ್ತದೆ. ತುಳಸಿಗೆ ಧಾರ್ಮಿಕ ಪ್ರಾಮುಖ್ಯತೆಯೂ ಇರುವುದರಿಂದ, ತುಳಸಿ ಗಿಡ ಒಣಗುವುದು ಶುಭವೆಂದು ಪರಿಗಣಿಸಲಾಗುವುದಿಲ್ಲ.
ಆಯುರ್ವೇದವು ತುಳಸಿಯನ್ನು ಉತ್ತಮ ಔಷಧವೆಂದು ವಿವರಿಸುತ್ತದೆಯಾದರೂ, ಪುರಾಣಗಳಲ್ಲಿಯೂ ಅದರ ಮಹತ್ವವನ್ನು ಬಹಳವಾಗಿ ಗುರುತಿಸಲಾಗಿದೆ. ಕೆಲವೊಮ್ಮೆ ತುಳಸಿ ಗಿಡ ಸರಿಯಾಗಿ ಬೆಳೆಯದೆ ಒಣಗಿ ಹೋಗುತ್ತದೆ ಅಥವಾ ಕೊಳೆಯಲು ಪ್ರಾರಂಭಿಸುತ್ತದೆ. ನೀವು ಕೂಡ ಈ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಈ ಸಲಹೆಗಳು ನಿಮಗೆ ಪ್ರಯೋಜನಕಾರಿಯಾಗಬಹುದು.
ತುಳಸಿ ಗಿಡವನ್ನು ನೆಡುವಾಗ, ಅತಿಯಾದ ನೀರು ಹಾಕುವುದರಿಂದ ಅದರ ಬೇರುಗಳಲ್ಲಿ ಶಿಲೀಂಧ್ರ ಬೆಳೆಯುತ್ತದೆ . ಇದೇ ಕಾರಣಕ್ಕೆ ತುಳಸಿ ಗಿಡವನ್ನು ನೆಡುವಾಗ, ಅದನ್ನು ಕೇವಲ ಮಣ್ಣಿನಲ್ಲಿ ನೆಡದೆ, 70% ಮಣ್ಣು ಮತ್ತು 30% ಮರಳನ್ನು ಬಳಸುವಂತೆ ನೋಡಿಕೊಳ್ಳಬೇಕು.
ಭಾರತದಲ್ಲಿ ಹಸುವಿಗೆ ಅಪಾರ ಪ್ರಾಮುಖ್ಯತೆ ಇದೆ ಮತ್ತು ಹಸುವಿನ ಸಗಣಿ ಉತ್ತಮ ಗೊಬ್ಬರವಾಗಿ ಕಾರ್ಯನಿರ್ವಹಿಸುತ್ತದೆ. ಇನ್ನು ಹಸುವಿನ ಸೆಗಣಿ ಒಣಗಿದ ನಂತರ, ಅದರ ಪುಡಿ ರೂಪವನ್ನು ಮಣ್ಣಿನಲ್ಲಿ ಹಾಕಬೇಕು. ಇದು ನೈಸರ್ಗಿಕ ಗೊಬ್ಬರವಾಗಿ ಕೆಲಸ ಮಾಡುತ್ತದೆ. ತುಳಸಿ ಬೇಗನೆ ಬೆಳೆಯಲು ಸಹಾಯ ಮಾಡುತ್ತದೆ.
ಮಡಕೆ ಸ್ವಲ್ಪ ಆಳ ಮತ್ತು ಅಗಲವಾಗಿರಬೇಕು. ಅದರ ಕೆಳಭಾಗದಲ್ಲಿ ಎರಡು ದೊಡ್ಡ ರಂಧ್ರಗಳಿರಬೇಕು. ತುಳಸಿ ನೆಡುವಾಗ ಕೆಳಭಾಗದಲ್ಲಿ ಒಂದು ಕಾಗದವನ್ನು ಇರಿಸಿ . ಅದರಲ್ಲಿ ಮೇಲೆ ತಿಳಿಸಲಾದ ಗೊಬ್ಬರದ ಮಣ್ಣನ್ನು ಮಿಶ್ರಣ ಮಾಡಿ. ಇದರಲ್ಲಿ ತುಳಸಿ ಗಿಡವನ್ನು ನೆಡಬೇಕು. ಇನ್ನು ಮೊದಲ ಬಾರಿಗೆ ತುಳಸಿ ಗಿಡಕ್ಕೆ ಸರಿಯಾಗಿ ನೀರು ಹಾಕಿ. ನಂತರ, ಮಣ್ಣು ತೇವವಾಗಿರುವವರೆಗೆ ಬಿಡಿ. ಚಳಿಗಾಲದಲ್ಲಿ, 4-5 ದಿನಗಳಿಗೊಮ್ಮೆ ಸಸ್ಯಕ್ಕೆ ನೀರು ಹಾಕಬಹುದು.
ತುಳಸಿ ಗಿಡವನ್ನು ಚಿವುಟುವುದು ಬಹಳ ಮುಖ್ಯ. ಅಂದರೆ, ನೆಟ್ಟು ಒಂದು ವಾರವಾದಾಗ, ಮೇಲಿನ ಎಲೆಗಳನ್ನು ಕೀಳಬೇಕು. ಇದು ಸಸ್ಯವು ಮೇಲಿನಿಂದ ಮಾತ್ರ ಬೆಳೆಯುವುದಿಲ್ಲ, ಬದಲಾಗಿ ಅದರ ಇತರ ಎಲೆಗಳಿಂದಲೂ ಬೆಳೆಯಲು ಕಾರಣವಾಗುತ್ತದೆ. ಅಂದಹಾಗೆ ತುಳಸಿ ಬೀಜಗಳು ಸಸ್ಯದ ಮೇಲೆ ಕಾಣಿಸಿಕೊಳ್ಳಲು ಪ್ರಾರಂಭಿಸಿದ್ದರೆ, ಅವುಗಳನ್ನು ತೆಗೆದುಹಾಕಬೇಕು. ಇದು ಗಿಡದ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ.
ಇನ್ನೊಂದು ಸುಲಭ ವಿಧಾನವೆಂದರೆ, ಸಾಮಾನ್ಯವಾಗಿ ಮುಂಜಾನೆ ತಿಂಡಿ ತಯಾರಿಕೆಗೆ ಬೆಳ್ತಿಗೆ ಅಕ್ಕಿ ಬಳಸಲಾಗುತ್ತದೆ. ಇದನ್ನು ತೊಳೆದ ನೀರನ್ನು ತುಳಸಿಗೆ ಹಾಕಿದರೆ ಸೊಂಪಾಗಿ ದಟ್ಟವಾಗಿ ಬೆಳೆಯುತ್ತದೆ. ಮೊದಲ ಸಲ ತೊಳೆದ ನೀರನ್ನಷ್ಟೆ ಬಳಕೆ ಮಾಡಬೇಕು.
ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.