)
ದಕ್ಷಿಣ ಕನ್ನಡ : ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ED ತನಿಖೆ ನಡೆಸಿ ಅಕೌಂಟ್ ಗಳನ್ನು ಸೀಜ್ ಮಾಡಿದೆ. ಮತ್ತೊಂದು ಕಡೇ ಉಗ್ರರು ಪುಣ್ಯಕ್ಷೇತ್ರವನ್ನು ಟಾರ್ಗೆಟ್ ಮಾಡಿದ್ರು ಎಂಬುದು ಗೊತ್ತಾಗಿದೆ. ಹಾಗಾದ್ರೆ ಕುಕ್ಕರ್ ಬಾಂಬ್ ಬ್ಲಾಸ್ಟ್ ಕೇಸಲ್ಲಿ ಏನೆಲ್ಲಾ ಅಪ್ಡೇಟ್ ಆಗಿದೆ ಎಂಬುದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
2022ರ ನವೆಂಬರ್ 19 ರಂದು ಮಂಗಳೂರಿನ ಕಂಕನಾಡಿ ಬಳಿ ಆಟೋರಿಕ್ಷಾದಲ್ಲಿ ತೆರಳುತ್ತಿದ್ದಾಗ ಕುಕ್ಕರ್ ನಲ್ಲಿ ಐಇಡಿ ಬಾಂಬ್ ಸ್ಪೋಟಿಸಲಾಗಿತ್ತು. ಈ ಬಗ್ಗೆ ಮಂಗಳೂರಿನ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಆಗಿತ್ತು. ಆಟೋರಿಕ್ಷಾ ಚಾಲಕ ಪುರುಷೋತ್ತಮ ನೀಡಿದ ದೂರಿನನ್ವಯ ಎಫ್ಐಆರ್ ಆಗಿತ್ತು. ಪ್ರಕರಣವನ್ನ ಎಕ್ಸ್ಪ್ಲೋಸಿವ್ ಸಬ್ಸ್ಟಾನ್ಸ್ ಆಕ್ಟ್ ಅಡಿ ಎನ್ಐಎ ಕೈಗೆತ್ತಿಕೊಂಡು ತನಿಖೆ ನಡೆಸಿತ್ತು. ಪಿಎಂಎಲ್ಎ ಕಾಯ್ದೆಯಡಿ ಜಾರಿ ನಿರ್ದೇಶನಾಲಯ ತನಿಖೆ ಕೈಗೊಂಡಿತ್ತು.
ಮಂಗಳೂರಿನಲ್ಲಿ ಆಟೋರಿಕ್ಷಾ ಬ್ಲಾಸ್ಟ್ ಮಾಡೋದು ಐಸಿಸ್ ಉಗ್ರ ಸಂಘಟನೆಯ ಪ್ಲಾನ್ ಆಗಿತ್ತು. ಉಗ್ರ ಸಂಘಟನೆಯನ್ನ ಭಾರತದಾದ್ಯಂತ ವಿಸ್ತರಿಸುವುದು, ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತರುವುದು ಐಸಿಸ್ ಸಂಘಟನೆ ಗುರಿಯಾಗಿತ್ತು.ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಸೈಯದ್ ಯಾಸಿನ್ನ ಬ್ಯಾಂಕ್ ಖಾತೆಯಲ್ಲಿದ್ದ 29 ಸಾವಿರ ರೂಪಾಯಿ ಹಣವನ್ನು ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಪ್ರಮುಖ ಆರೋಪಿ ಮೊಹಮ್ಮದ್ ಶಾರಿಕ್ ಈ ಬಾಂಬ್ ಅನ್ನು ಧರ್ಮಸ್ಥಳದ ಮಂಜುನಾಥಸ್ವಾಮಿ ದೇವಾಲಯದಲ್ಲಿ ಇರಿಸಿ ಸ್ಫೋಟಿಸಲು ಸಂಚು ರೂಪಿಸಿದ್ದ. ಬಾಂಬ್ ಟೈಮರ್ ಅನ್ನು 90 ನಿಮಿಷಗಳ ಬದಲು 9 ಸೆಕೆಂಡ್ಗೆ ನಿಗದಿ ಮಾಡಿದ್ದ ಪರಿಣಾಮ ಅದು ಮಾರ್ಗ ಮಧ್ಯೆಯೇ ಆಟೋರಿಕ್ಷಾದೊಳಗೆ ಸ್ಫೋಟವಾಗಿತ್ತು. ಐಸಿಸ್ ಆನ್ಲೈನ್ ಹ್ಯಾಂಡ್ಲರ್ ಕರ್ನಲ್ ಕಳುಹಿಸುತ್ತಿದ್ದ ಹಣವನ್ನು ಆರೋಪಿ ಮೊಹಮ್ಮದ್ ಶಾರೀಕ್ ಸ್ವೀಕರಿಸಲು ಮತ್ತೊಬ್ಬ ಆರೋಪಿ ಮಾಜ್ ಮುನೀರ್ ಈ ಅನಧಿಕೃತ ಬ್ಯಾಂಕ್ ಖಾತೆಗಳ ಮಾಹಿತಿ ನೀಡುತ್ತಿದ್ದ ವಿಚಾರವೂ ಇಡಿ ತನಿಖೆಯಲ್ಲಿ ಬಯಲಾಗಿದೆ.
ಇದನ್ನೂ ಓದಿ: ಒಳಮೀಸಲಾತಿ ವರದಿ ಅಂಗೀಕಾರಕ್ಕೆ ಸ್ವಾಮೀಜಿ ವಿರೋಧ
ಇನ್ನೂ ಐಸಿಸ್ ಆನ್ಲೈನ್ ಹ್ಯಾಂಡ್ಲರ್ ‘ಕರ್ನಲ್’ ಎಂಬಾತ ಪ್ರಮುಖ ಆರೋಪಿ ಮೊಹಮ್ಮದ್ ಶಾರಿಕ್ ಅಲಿಯಾಸ್ ಪ್ರೇಮ್ ರಾಜ್ ಮತ್ತು ಇತರೆ ಆರೋಪಿಗಳಿಗೆ ವಿಕರ್ ಆ್ಯಪ್/ಟೆಲಿಗ್ರಾಮ್ ಇತ್ಯಾದಿ ಆ್ಯಪ್ಗಳ ಮುಖಾಂತರ ಸುಧಾರಿತ ಸ್ಫೋಟಕ ಸಾಧನ ತಯಾರಿಸಲು ತರಬೇತಿ ನೀಡಿರುವುದು ಮತ್ತು ಆರೋಪಿಗಳಿಗೆ ಅನಧಿಕೃತ ಬ್ಯಾಂಕ್ ಖಾತೆ ಮತ್ತು ಕ್ರಿಪ್ಟೋ ಕರೆನ್ಸಿಗಳ ಮುಖಾಂತರ ಹಣಕಾಸು ನೆರವು ನೀಡಿರುವುದು ಬೆಳಕಿಗೆ ಬಂದಿತ್ತು.
ಈ ಹಣವನ್ನು ಪ್ರಮುಖ ಆರೋಪಿಗಳಾದ ಸೈಯದ್ ಯಾಸಿನ್ ಮತ್ತು ಮೊಹಮ್ಮದ್ ಶಾರಿಕ್ ಪಾಯಿಂಟ್ ಆಫ್ ಸೇಲ್ ಏಜೆಂಟ್ಗಳಿಗೆ ಕಮಿಷನ್ ನೀಡಿ ನಗದು ರೂಪದಲ್ಲಿ ಹಣ ಪಡೆಯುತ್ತಿದ್ದರು. ಈ ರೀತಿ ಆರೋಪಿಗಳಿಗೆ ಸುಮಾರು 2.86 ಲಕ್ಷ ರೂ. ಹಣ ರವಾನೆಯಾಗಿತ್ತು. ಈ ಹಣವನ್ನು ಆರೋಪಿಗಳು ಐಇಡಿ ಬಾಂಬ್ ತಯಾರಿಸಲು ಆನ್ಲೈನ್ಲ್ಲಿ ವಸ್ತುಗಳ ಖರೀದಿ, ಮೈಸೂರು ನಗರ ಮತ್ತು ಇತರೆ ಸ್ಥಳಗಳಲ್ಲಿ ಮನೆ ಬಾಡಿಗೆ ಪಡೆಯಲು ಹಾಗೂ ತಮಿಳುನಾಡು, ಕೇರಳ ಮತ್ತು ಕರ್ನಾಟಕದ ವಿವಿಧ ಸ್ಥಳಗಳಲ್ಲಿ ಭಯೋತ್ಪಾದನಾ ಚಟುವಟಿಕೆ ನಡೆಸುವ ಸಂಬಂಧ ಸಮೀಕ್ಷೆಗೆ ಬಳಸಿಕೊಂಡಿದ್ದರು ಎಂಬುದು ತನಿಖೆಯಲ್ಲಿ ಬಯಲಾಗಿದೆ.
ಆಟೋರಿಕ್ಷಾದಲ್ಲಿ ಬಾಂಬ್ ಸ್ಫೋಟದ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಆರೋಪಿ ಮೊಹಮ್ಮದ್ ಶಾರಿಕ್ನ ಬ್ಯಾಗ್ನಲ್ಲಿ ಪತ್ತೆಯಾಗಿದ್ದ 39 ಸಾವಿರ ರೂ ಹಣವನ್ನು ಎನ್ಐಎ ಜಪ್ತಿ ಮಾಡಿದೆ. ಈ ಪ್ರಕರಣದ ಬಂಧಿತರಾಗಿರುವ ಪ್ರಮುಖ ಆರೋಪಿಗಳಾದ ಮೊಹಮ್ಮದ್ ಶಾರಿಕ್, ಸೈಯದ್ ಯಾಸಿನ್, ಮಾಜ್ ಮುನೀರ್ ನ್ಯಾಯಾಂಗ ಬಂಧನದಲ್ಲಿದ್ದು, ತನಿಖೆ ಮುಂದುವರೆದಿದೆ ಎಂದು ಇ.ಡಿ. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಒಟ್ಟಾರೆ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ ಧರ್ಮಸ್ಥಳದ ಮಂಜುನಾಥೇಶ್ವರ ದೇವಾಲಯ ಸ್ಪೋಟಿಸುವ ತನಕ ಹೋಗಿತ್ತು ಎಂಬ ಶಾಂಕಿಗ್ ವಿಚಾರ ಬಯಲಾಗಿದ್ದು, ಮುಂದೆ ಯಾವೆಲ್ಲಾ ವಿಷಯಗಳು ಹೊರಗೆ ಬರುತ್ತೆ ಎಂಬುದನ್ನು ಕಾದು ನೋಡಬೇಕಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.