)
Women Protest Demand For Drinking Water: ಕಳೆದ ಹಲವಾರು ದಿನಗಳಿಂದ ಕುಡಿಯುವ ನೀರು ಸಮಸ್ಯೆ ತಲೆದೂರಿದ ಹಿನ್ನೆಲೆ ಗ್ರಾಪಂ ಕಚೇರಿ ಮುಂಭಾಗ ಖಾಲಿ ಬಿಂದಿಗೆ ಹಿಡಿದ ಮಹಿಳೆಯರು ಆಕ್ರೋಶ ಹೊರಹಾಕಿದ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಾರ್ಟಳ್ಳಿಯಲ್ಲಿ ನಡೆದಿದೆ.
ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಪಂ ವ್ಯಾಪ್ತಿಯ ಹಳೇ ಮಾರ್ಟಳ್ಳಿ, ಕಂದಮೇಡು ಸುತ್ತಮುತ್ತಲು ನೀರಿನ ಬವಣೆ ಎದುರಾಗಿದ್ದು ಸಮರ್ಪಕ ನೀರು ಪೂರೈಕೆ ಆಗದ ಹಿನ್ನೆಲೆ ಮಹಿಳೆಯರು, ಮಕ್ಕಳು ಖಾಲಿ ಬಿಂದಿಗೆ ಹಿಡಿದು ಗ್ರಾಮದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ರಸ್ತೆ ತಡೆ ನಡೆಸಿ ಆಕ್ರೋಶ ಹೊರಹಾಕಿದರು.
ಬಳಿಕ ಗ್ರಾಪಂ ಕಚೇರಿ ಮುಂಭಾಗ ಖಾಲಿ ಬಿಂದಿಗೆ ಹಿಡಿದು ಜಮಾಯಿಸಿದ ಮಹಿಳೆಯರು, ಧಿಕ್ಕಾರದ ಘೋಷಣೆ ಕೂಗಿ ನೀರು ಪೂರೈಕೆ ಮಾಡದಿರುವುದಕ್ಕೆ ಕಿಡಿಕಾರಿದರು. ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೂರತ್ತಲೇ ಇದ್ದು ಶಾಶ್ವತ ಪರಿಹಾರಕ್ಕೆ ಆಡಳಿತ ಮುಂದಾಗಬೇಕಿದೆ ಎಂದವರು ಆಗ್ರಹಿಸಿದರು.
ಇನ್ನು, ಗುಂಡ್ಲುಪೇಟೆ ತಾಲೂಕಿನಲ್ಲಿ ಕೆರೆಗಳಿಗೆ ನೀರು ತುಂಬಿಸಬೇಕೆಂದು ಆಗ್ರಹಿಸಿರುವ ರೈತ ಸಂಘ ಇದೇ ಅಕ್ಟೋಬರ್ 13ರಂದು ಅಹೋರಾತ್ರಿ ಧರಣಿ ನಡೆಸಲು ಮುಂದಾಗಿದೆ.
ಕೆರೆಗೆ ನೀರು ತುಂಬಿಸುವ 4ನೇ ಹಂತದ ಹುತ್ತೂರು ಕೆರೆಯಿಂದ ಮುಂದಿನ ಕೆರೆಗಳಿಗೆ ನೀರು ತುಂಬಿಸುವುದು ಹಾಗೂ ಗಾಂಧಿ ಗ್ರಾಮ ಯೋಜನೆಯಲ್ಲಿ ಕಸಬಾ ಮತ್ತು ಬೇಗೂರು ಹೋಬಳಿಯ ಭಾಗದ ಕೆರೆಗಳಿಗೆ ನೀರು ತುಂಬಿಸುವುದು, 110 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಶೀಘ್ರದಲ್ಲೆ ಪ್ರಾರಂಭ ಮಾಡಿ ಎಲ್ಲಾ ಕೆರೆಗಳಿಗೆ ನೀರು ತುಂಬಿಸಬೇಕೆಂದು ಶಿವಪುರ ಮಹಾದೇವಪ್ಪ ನೇತೃತ್ವದಲ್ಲಿ ರೈತರು ಧರಣಿ ನಡೆಸಲಿದ್ದಾರೆ.