)
ಚಾಮರಾಜನಗರ: ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟನೆ ಹನೂರು ತಾಲೂಕಿನ ಕುರುಬರದೊಡ್ಡಿ ಗ್ರಾಮದಲ್ಲಿ ಜರುಗಿದೆ.
ಹನೂರು ಪಟ್ಟಣದ ಆರ್ ಎಸ್ ದೊಡ್ಡಿ ಬಡಾವಣೆಯ ಕುಮಾರಸ್ವಾಮಿ ಎಂಬವರ ಮಕ್ಕಳಾದ ಯೋಗೀಶ್( 9) ಸಂಜಯ್ (7) ಮೃತರು. ಕುರುಬರದೊಡ್ಡಿ ಗ್ರಾಮದ ಮುಖ್ಯ ರಸ್ತೆಯ ನರ್ಸರಿ ಸಮೀಪದಲ್ಲಿರುವ ಕೃಷಿ ಕೃಷಿಹೊಂಡದ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ದಸರಾ ರಜೆ ಇದ್ದ ಕಾರಣ ಹನೂರು ಪಟ್ಟಣದ ಆರ್ ಎಸ್ ದೊಡ್ಡಿ ಇಂದ ಅಜ್ಜಿ ಮನೆಯಾದ ಕುರುಬರ ದೊಡ್ಡಿ ಗ್ರಾಮಕ್ಕೆ ಮಕ್ಕಳಿಬ್ಬರು ಬಂದಿದ್ದರು. ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿರುವ ನರ್ಸರಿ ಸಮೀಪದ ಕೃಷಿ ಹೊಂಡದತ್ತ ತೆರಳಿದಾಗ ಮಕ್ಕಳಿಬ್ಬರು ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಆರ್ ಎಸ್ ದೊಡ್ಡಿ ಕುಮಾರಸ್ವಾಮಿ ಪಟ್ಟಣದ ಖಾಸಗಿ ಜವಳಿ ಅಂಗಡಿಯಲ್ಲಿ ನೌಕರನಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಮಕ್ಕಳ ಶ*ವಗಳ ಮುಂದೆ ಕುಟುಂಬಸ್ಥರ ರೋದನೆ ಮುಗಿಲು ಮುಟ್ಟುತ್ತಿತ್ತು.
ಬಾಲಕರು ಮೃತಪಟ್ಟ ಮಾಹಿತಿ ತಿಳಿದು ಸ್ಥಳಕ್ಕೆ ರಾಮಪುರ ಠಾಣೆ ಇನ್ಸ್ಪೆಕ್ಟರ್ ಚಿಕ್ಕರಾಜ ಶೆಟ್ಟಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.