ಚಾಮರಾಜನಗರ: ತೆಂಗಿನಕಾಯಿ ಕೀಳಲು ತೆರಳಿದ್ದ ಇಬ್ಬರು ವಿದ್ಯುತ್ ಪ್ರವಹಿಸಿ ಅಸುನೀಗಿದ ಧಾರುಣ ಘಟನೆ ಚಾಮರಾಜನಗರ ತಾಲೂಕಿನ ಕೊತ್ತಲವಾಡಿ ಸಮೀಪದ ಸಾಸುವೆಹಳ್ಳದ ಜಮೀನೊಂದರಲ್ಲಿ ಮಂಗಳವಾರ (ಅ.14) ನಡೆದಿದೆ. ಚಾಮರಾಜನಗರ ಜಿಲ್ಲೆಯ ಕೊತ್ತಲವಾಡಿ ಗ್ರಾಮದಲ್ಲಿನ ಪ್ರಕಾಶ್ ಎಂಬುವವರ ಜಮೀನಿನಲ್ಲಿ ಈ ದುರ್ಘಟನೆ ನಡೆದಿದೆ.
ಮೃತರನ್ನು ಕೊತ್ತಲವಾಡಿಯ 52ವಯಸ್ಸಿನ ಸ್ವಾಮಿ ಹಾಗೂ 50ವರ್ಷ ವಯಸ್ಸಿನ ಕೃಷ್ಣಶೆಟ್ಟಿ ಎಂದು ಗುರುತಿಸಲಾಗಿದೆ. ಈ ಇಬ್ಬರು ಜಮೀನಿಗೆ ತೆಂಗಿನಕಾಯಿ ಕೀಳಲು ತೆರಳಿದ್ದಾಗ ವಿದ್ಯುತ್ ಪ್ರವಾಹಿಸಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.
ಜಮೀನಿನ ಮಾಲೀಕರಾದ ಪ್ರಕಾಶ್ ತಮ್ಮ ಜಮೀನನ್ನು ಕೇರಳ ಮೂಲದ ವ್ಯಕ್ತಿಗೆ ಗುತ್ತಿಗೆ ಕೊಟ್ಟಿದ್ದರು. ಕೇರಳದ ವ್ಯಕ್ತಿ ಜಮೀನಿನಲ್ಲಿ ಮೆಕ್ಕೆಜೋಳ ಸೇರಿದಂತೆ ಇತರೆ ಬೆಳೆಗಳನ್ನು ಹಾಕಿದ್ದು ಪ್ರಾಣಿಗಳಿಂದ ಬೆಳೆಗಳ ರಕ್ಷಣೆಗಾಗಿ ಅಕ್ರಮವಾಗಿ ವಿದ್ಯುತ್ ಹರಿಸಿದ್ದ ಎನ್ನಲಾಗಿದೆ.
ಇದನ್ನರಿಯದೆ ಇಂದು ಬೆಳಿಗ್ಗೆ ತೆಂಗಿನಕಾಯಿ ಕೀಳಲು ಹೋದ ಇವರಿಬ್ಬರಿಗೆ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಅಸುನೀಗಿದ್ದಾರೆ ಎಂದು ಹೇಳಲಾಗಿದೆ.
ಚಾಮರಾಜನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ಅವಘಡ ನಡೆದಿದ್ದು ಸ್ಥಳಕ್ಕೆ ಚಾಮರಾಜನಗರ ಎಸ್ಪಿ ಡಾ.ಬಿ.ಟಿ.ಕವಿತಾ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಗುತ್ತಿಗೆ ಪಡೆದ ಕೇರಳ ವ್ಯಕ್ತಿ ಸದ್ಯ ತಲೆ ಮರೆಸಿಕೊಂಡಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ- ನಿರುದ್ಯೋಗ ಸಮಸ್ಯೆ ನಿವಾರಿಸಲು ರಾಜ್ಯ ಸರ್ಕಾರದ ಕ್ರಮ 'ಬೃಹತ್ ಉದ್ಯೋಗ ಮೇಳ': ಸಚಿವ ಡಾ. ಶರಣಪ್ರಕಾಶ್ ಆರ್ ಪಾಟೀಲ್
ಇದನ್ನೂ ಓದಿ- KSRTC ಪ್ರಯಾಣಿಕರಿಗೆ ಗುಡ್ ನ್ಯೂಸ್: ದೀಪಾವಳಿ ಹಬ್ಬಕ್ಕೆ 2500 ಹೆಚ್ಚುವರಿ ಬಸ್ ವ್ಯವಸ್ಥೆ: 5-10% ರಿಯಾಯ್ತಿಯೂ ಲಭ್ಯ









