)
Annabhagya Akki Sale: ಅಕ್ರಮವಾಗಿ ಪಡಿತರ ಅಕ್ಕಿಯನ್ನು ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಚಿಕ್ಕಿಂದುವಾಡಿ ಸಮೀಪ ನಡೆದಿದೆ. ಹನೂರು ತಾಲೂಕಿನ ಎಲ್ಲೆಮಾಳ ಗ್ರಾಮದ ಸಮೀವುಲ್ಲಾ ಮತ್ತು ಮಳವಳ್ಳಿ ಪಟ್ಟಣದ ಮಹೇಶ್ ಬಂಧಿತರು.
ಗ್ರಾಮಾಂತರ ಪ್ರದೇಶಗಳಿಂದ ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ಸಾಗಾಟ ನಡೆಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿ 451 ಕೆಜಿ ಅಕ್ಕಿ, 69 ಕೆಜಿ ರಾಗಿಯನ್ನು ವಶ ಪಡಿಸಿಕೊಂಡಿದ್ದಾರೆ.
ಬಂಧಿತರಿಂದ ಪಡಿತರ ಅಕ್ಕಿ, ರಾಗಿ ಹಾಗೂ ಸಾಗಾಟಕ್ಕೆ ಬಳಿಸಿದ್ದ ವ್ಯಾನ್ ಜಪ್ತಿ ಮಾಡಿರುವ ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪೊಲೀಸರು ಈ ಸಂಬಂಧ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಕೊಳ್ಳೇಗಾಲ ಪಟ್ಟಣ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಪಡಿತರ ಸಂಗ್ರಹಿಸಿ ಸಾಗಿಸುತ್ತಿದ್ದ ಕೊಳ್ಳೇಗಾಲ ಸಾಮಂತಗೇರಿಯ ಮುಕ್ತಾರ್ ಪಾಷಾ ಎಂಬಾತನನ್ನು ಬಂಧಿಸಿ 361 ಕೆಜಿ ಅಕ್ಕಿ, ಸಾಗಾಟಕ್ಕೆ ಬಳಸಿದ್ದ ಬೈಕ್ ನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.