)
ಚಾಮರಾಜನಗರ: ಒಂದೇ ಥರನಾಗಿ ನಡೆದ ಎರಡು ಅಪಘಾತದಲ್ಲಿ ಬಾಲಕಿ ಸೇರಿ ಮೂವರು ಮೃತಪಟ್ಟ ಧಾರುಣ ಘಟನೆ ಚಾಮರಾಜನಗರ ಜಿಲ್ಲೆಯ ಮಾಂಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಿಂತಿದ್ದ ಲಾರಿಗೆ ಹಿಂಬದಿಯಿಂದ ಆಟೋ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಇಬ್ಬರು ಮೃತಪಟ್ಟ ಧಾರುಣ ಘಟನೆ ಚಾಮರಾಜನಗರ ಜಿಲ್ಲೆಯ ಎಳೆ ಪಿಳ್ಳಾರಿ ದೇವಾಲಯ ಸಮೀಪ ಇಂದು ಮುಂಜಾನೆ ನಡೆದಿದೆ.
ಚಾಮರಾಜನಗರ ತಾಲೂಕಿನ ಉಮ್ಮತ್ತೂರು ಗ್ರಾಮದ ಮನೋಜ್(22) ನಿತಿನ್(16) ಮೃತ ದುರ್ದೈವಿಗಳು. ಟೊಮೊಟೊ ತುಂಬಿಕೊಂಡಿದ್ದು ಕೊಳ್ಳೇಗಾಲಕ್ಕೆ ತೆರಳುತ್ತಿದ್ದಾಗ ನಿಂತಿದ್ದ ಲಾರಿಗೆ ಆಟೋ ಡಿಕ್ಕಿಯಾಗಿ ಈ ಅವಘಡ ಉಂಟಾಗಿದೆ. ಡಿಕ್ಕಿ ರಭಸಕ್ಕೆ ಆಟೋ ಜಖಂ ಆಗಿ ದೇಹಗಳು ಸಂಪೂರ್ಣ ನಜ್ಜುಗುಜ್ಜಾಗಿತ್ತು.
ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಕೇಸ್ ದಾಖಲಾಗಿದೆ.
ಬಾಲಕಿ ಸಾವು- ದಂಪತಿಗೆ ಗಾಯ:
ನಿಂತಿದ್ದ ಟ್ರ್ಯಾಕ್ಟರ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ನಾಲ್ಕು ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಚಿಲಕವಾಡಿ ಬಳಿ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಗುಂಡೇಗಾಲ ಗ್ರಾಮದ ನಂಜುಂಡಸ್ವಾಮಿ,ಕಾವ್ಯ ದಂಪತಿಯು ಮಗಳ ಜೊತೆಗೆ ಮೈಸೂರಿಗೆ ಹೋಗುತ್ತಿದ್ದರು. ಎದುರಿಗೆ ನಿಂತಿದ್ದ ಟ್ರ್ಯಾಕ್ಟರ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿ ಮುಂದೆ ಕುಳಿತಿದ್ದ ಹರ್ಷಿತಾಳಿಗೆ ತೀವ್ರತರ ಪೆಟ್ಟಾಗಿ ಆಸ್ಪತ್ರೆಗೆ ರವಾನಿಸುವಾಗ ಮೃತಪಟ್ಟಿದ್ದಾಳೆ.
ಚಿಲಕವಾಡಿ ಬಳಿ ನಡೆದ ರಸ್ತೆ ಅಪಘಾತ ಮಾಂಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.