)
Tiger Leopard: ಹುಲಿ ಸೆರೆ ಹಿಡಿಯಲು ಅರಣ್ಯ ಇಲಾಖೆ ವಿಫಲವಾದ ಹಿನ್ನೆಲೆ ಸುಮಾರು 12ಕ್ಕೂ ಅಧಿಕ ಮಂದಿ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿಗಳನ್ನು ರೈತರು ಬೋನಿಗೆ ಕೂಡಿ ಹಾಕಿ, ದಿಗ್ಬಂಧನ ವಿಧಿಸಿದ ಅಪರೂಪದ ಪ್ರಸಂಗ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅಭಯಾರಣ್ಯದ ಬಫರ್ ಜೋನ್ ವಲಯ ವ್ಯಾಪ್ತಿಯ ಬೊಮ್ಮಲಾಪುರ ಗ್ರಾಮದಲ್ಲಿ ಮಂಗಳವಾರ(ಸೆ.09) ನಡೆದಿದೆ.
ಬೊಮ್ಮಲಾಪುರ ಗ್ರಾಮದ ಕೆಇಬಿ ಪಕ್ಕದ ಗಂಗಪ್ಪ ಎಂಬ ರೈತನ ಜಮೀನಿನನ ಸುತ್ತಮುತ್ತಲು ಕೆಲ ತಿಂಗಳಿಗಳಿಂದ ಹುಲಿ-ಚಿರತೆ ಉಪಟಳ ಹೆಚ್ಚಿದ್ದು, ಜಾನುವಾರುಗಳ ಮೇಲೆ ನಿರಂತರವಾಗಿ ದಾಳಿ ಮಾಡಿಕೊಂದು ಹಾಕಿತ್ತು. ಈ ಹಿನ್ನಲೆ ರೈತರ ಒತ್ತಾಯದ ಮೇರೆಗೆ ಅರಣ್ಯ ಇಲಾಖೆ ಗಂಗಪ್ಪ ಜಮೀನಿನಲ್ಲಿ ಬೋನ್ ಇರಿಸಿತ್ತು. ನಂತರ ಅರಣ್ಯಾಧಿಕಾರಿಗಳು ಇತ್ತ ಸುಳಿದಿರಲಿಲ್ಲ. ಕಳೆದ ಮೂರು ದಿನಗಳ ಹಿಂದೆ ಕರುವೊಂದರ ಮೇಲೆ ಹುಲಿ ದಾಳಿ ನಡೆಸಿ ಕೊಂದು ಹಾಕಿತ್ತು. ಇದರ ಮಾಹಿತಿ ನೀಡಿದ್ದರೂ ಕೂಡ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬಾರದೆ ನಿರ್ಲಕ್ಷ್ಯ ವಹಿಸಿದ್ದರು.
ಮಂಗಳವಾರ(ಸೆ.09) ಬೆಳಗ್ಗೆ ಬೊಮ್ಮಲಾಪುರ ಗ್ರಾಮದ ಕೆಇಬಿ ಪಕ್ಕದ ಗಂಗಪ್ಪ ಜಮೀನಿನ ಆಸುಪಾಸು ಹುಲಿ ಓಡಾಟ ನಡೆಸಿದ್ದು, ಇದನ್ನು ಕಂಡ ರೈತರು ಆತಂಕಗೊಂಡು ಅರಣ್ಯಾಧಿಕಾರಿಗಳಿಗೆ ತಿಳಿಸಿದ್ದಾರೆ. ನಿಗದಿತ ಸಮಯಕ್ಕೆ ಅರಣ್ಯ ಇಲಾಖೆಯವರು ಬಾರದ ತಡವಾಗಿ ಆಗಮಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ರೈತರು ಸುಮಾರು 12ಕ್ಕೂ ಅಧಿಕ ಮಂದಿ ಅರಣ್ಯ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಬೋನಿನಲ್ಲಿ ಕೂಡಿ ದಿಗ್ಬಂಧನ ಹಾಕಿ ಆಕ್ರೋಶ ಭರಿತರಾದರು.
ಹುಲಿಗೆ ಕೂಂಬಿಂಗ್: ಮಾಹಿತಿ ಅರಿತ ಗುಂಡ್ಲುಪೇಟೆ ಎಸಿಎಫ್ ಸುರೇಶ್ ಹಾಗೂ ಬಂಡೀಪುರ ಎಸಿಎಫ್ ನವೀನ್ ಕುಮಾರ್, ಡಿಆರ್ಎಫ್ಓ ಸ್ಥಳಕ್ಕೆ ಭೇಟಿ ಆಗಮಿಸಿ ರೈತರ ಮನವೊಲಿಸಿ, ಕೂಡಲೇ ಸಾಕಾನೆ ಬಳಕೆ ಮಾಡಿಕೊಂಡು ಹುಲಿ ಸೆರೆಗೆ ಕೂಂಬಿಂಗ್ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.
ರೈತ ಸಂಘಟನೆ ಆಕ್ರೋಶ: ಸಾಮೂಹಿಕ ನಾಯಕತ್ವದ ರೈತ ಸಂಘದ ಹೊನ್ನೂರು ಪ್ರಕಾಶ್ ಸೇರಿದಂತೆ ಹಲವು ಮಂದಿ ರೈತರು ಅರಣ್ಥ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿ, ಕೂಡಲೇ ಹುಲಿ ಸೆರೆಗೆ ಕ್ರಮ ವಹಿಸಬೇಕು. ಇಲ್ಲವಾದಲ್ಲಿ ಗ್ರಾಮಸ್ಥರೆಲ್ಲರೂ ಸೇರಿ ಅರಣ್ಯ ಇಲಾಖೆಯ ಕಚೇರಿಗೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದ್ದಾರೆ.