ಬೆಂಗಳೂರು: ಇಸ್ರೇಲ್ ರಾಯಭಾರಿ ಡಾ|| ರಾನ್ ಮಲ್ಕಾ ಅವರ ನೇತೃತ್ವದ ತಂಡ ಗುರುವಾರ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಗೃಹ ಕಚೇರಿ ಕೃಷ್ಣಾ ದಲ್ಲಿ ಭೇಟಿ ಮಾಡಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಇಸ್ರೇಲ್ ಮಾದರಿ ಕೃಷಿ ಪದ್ಧತಿಯು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾಗಿದ್ದು, ಇಸ್ರೇಲ್ ಸಹಭಾಗಿತ್ವದಲ್ಲಿ ಇದನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಲು ಎಲ್ಲ ಸಹಕಾರವನ್ನು ನೀಡುವುದಾಗಿ ತಿಳಿಸಿದರು.
ಕೃಷಿ ಕ್ಷೇತ್ರಕ್ಕೆ ಈ ಬಾರಿಯ ಆಯವ್ಯಯದಲ್ಲಿ 450 ಕೋಟಿ ರೂ.ಗಳ ಅನುದಾನವನ್ನು ಮೀಸಲಿರಿಸಿದ್ದು, ನಮ್ಮ ಕೃಷಿಕ ಸಮುದಾಯಕ್ಕೆ ಈ ಬಗ್ಗೆ ಅರಿವು ಮೂಡಿಸಲು ಇಸ್ರೇಲ್ ಕೃಷಿ ತಜ್ಞರ ಅಗತ್ಯವಿದೆ. ಈ ಯೋಜನೆಯನ್ನು ಕಾಲಮಿತಿಯಲ್ಲಿ ಅನುಷ್ಠಾನಗೊಳಿಸುವ ಸರ್ಕಾರದ ಉದ್ದೇಶಕ್ಕೆ ಇಸ್ರೇಲ್ ಸಹಕಾರ ನೀಡಬೇಕೆಂದರು.
ಇಸ್ರೇಲ್ ರಾಯಭಾರಿ ಡಾ|| ರಾನ್ ಮಲ್ಕಾ ಅವರು ಮಾತನಾಡಿ, ಭಾರತ ಮತ್ತು ಇಸ್ರೇಲ್ನ ನಡುವೆ ಸ್ನೇಹ ಬಾಂಧವ್ಯವಿದ್ದು, ಕರ್ನಾಟಕದಲ್ಲಿ ಇಸ್ರೇಲ್ ಈಗಾಗಲೇ ಸ್ಟಾರ್ಟ್ ಅಪ್ ಕಂಪನಿಗಳನ್ನು ಹೊಂದಿದೆ ಎಂದರು.
ಕರ್ನಾಟಕದ ಮೂಲಭೂತ ಸೌಕರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಕರ್ನಾಟಕ – ಇಸ್ರೇಲ್ ಜಂಟಿ ಸಂಶೋಧನೆ ಮತ್ತು ಅಭಿವೃದ್ಧಿ ನಿಧಿಯಡಿ ತಂತ್ರಜ್ಞಾನ, ಕೃಷಿ ಜೈವಿಕ ತಂತ್ರಜ್ಞಾನ, ಏವಿಯಾನಿಕ್ಸ್ ಸೇರಿದಂತೆ ಅನೇಕ ಯೋಜನೆಗಳನ್ನು ಕೈಗೊಳ್ಳಲಾಗಿದೆ.
ಕರ್ನಾಟಕದ ಪ್ರವಾಸೋದ್ಯಮದ ಸಾಧ್ಯತೆಗಳ ಸದ್ಬಳಕೆ , ಜ್ಞಾನ ಹಂಚಿಕೆ ಹಾಗೂ ಜಲ ನಿರ್ವಹಣೆಗೆ ಸಂಬಂಧಿಸಿದಂತೆ , ಇಸ್ರೇಲ್ ಬಳಸುತ್ತಿರುವ ತಂತ್ರಜ್ಞಾನವನ್ನು ಕರ್ನಾಟಕದೊಂದಿಗೆ ಹಂಚಿಕೊಳ್ಳಲು ಸಿದ್ಧವಿರುವುದಾಗಿ ತಿಳಿಸಿದರು.
ಇಂಡೋ ಇಸ್ರೇಲ್ ಸಹಭಾಗಿತ್ವದಲ್ಲಿ ಉತ್ಕ್ರುಷ್ಟ ಕೇಂದ್ರ ( centres of excellence)ಗಳನ್ನು ಸಹ ಸ್ಥಾಪಿಸಲಾಗಿದೆ. ಈ ಎಲ್ಲ ಯೋಜನೆಗಳನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಇಸ್ರೇಲ್ ಮತ್ತು ಕರ್ನಾಟಕ ಒಟ್ಟಾಗಿ ಕಾರ್ಯನಿರ್ವಹಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ಇಸ್ರೇಲ್ನ ದಕ್ಷಿಣ ಭಾರತದ ಕೌನ್ಸಲ್ ಜನರಲ್ ಡಾನಾ ಖುರ್ಷ್, ಇಸ್ರೇಲ್ ರಾಯಭಾರಿ ಕಚೇರಿಯ ಉಪ ರಾಯಭಾರಿ ಮಾಯಾ ಕದೋಷ್, ಕೃಷಿ ಸಚಿವ ಎನ್.ಹೆಚ್.ಶಿವಶಂಕರರೆಡ್ಡಿ, ತೋಟಗಾರಿಕಾ ಸಚಿವ ಎಂ.ಸಿ.ಮನಗೂಳಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ ಗುಪ್ತಾ , ರೇಷ್ಮೆ ಮತ್ತು ತೋಟಗಾರಿಕೆ ಇಲಾಖೆ ಕಾರ್ಯದರ್ಶಿ ಮಹೇಶ್ವರ ರಾವ್ , ಉಪಸ್ಥಿತರಿದ್ದರು.