ತಲೆಗೇ ಭಾರವೆನಿಸುವ ಹೆಲ್ಮೆಟ್‌ ಬರುವಾಗಲೇ ಭಾರವಾಗಿತ್ತು..!

Last Updated : Mar 23, 2022, 08:41 PM IST
  • ಬ್ರಿಟನ್ನಿನ ಪ್ರಸಿದ್ಧ ರಾಷ್ಟ್ರೀಯ ನಾಯಕ ಟಿ.ಇ. ಲಾರೆನ್ಸ್, ಅಕಾ 'ಲಾರೆನ್ಸ್ ಆಫ್ ಅರೇಬಿಯಾ' ದುರಂತವಾಗಿ ಮರಣ ಹೊಂದಿದ್ದು ದೊಡ್ಡ ಜಾಗೃತಿ ತಿರುವಿಗೆ ಕಾರಣವಾಯಿತು.
  • 1964 ರಲ್ಲಿ, USDOT ಮೊಟ್ಟಮೊದಲ ಸುರಕ್ಷತಾ ಮಾನದಂಡಗಳನ್ನು ರಚಿಸಿತು.
  • ಆ ಮೂಲಕ ಮೋಟಾರ್‌ಸೈಕಲ್ (Motorcycle) ಹೆಲ್ಮೆಟ್‌ಗಳು ನಿಯಮಗಳಿಗೆ ಬದ್ಧವಾಗಿರಬೇಕು ಎಂಬ ಅಂಶಗಳನ್ನು ಇದು ಹೊರಹಾಕಿತು.
ತಲೆಗೇ ಭಾರವೆನಿಸುವ ಹೆಲ್ಮೆಟ್‌ ಬರುವಾಗಲೇ ಭಾರವಾಗಿತ್ತು..!  title=

"ಯಪ್ಪಾ, ಅದೆಂಥಾ ಆಕ್ಸಿಡೆಂಟ್‌, ಹೆಲ್ಮೆಟ್‌ ಹಾಕಿಲ್ಲದೇ ಹೋಗಿದ್ದರೆ ತಲೆಗೆ ಸರಿಯಾಗಿ ಏಟು ಬೀಳುತ್ತಿತ್ತುʼʼ ಅಂತ ಅವತ್ತೊಂದು ದಿನ ಸಹದ್ಯೋಗಿ ಶರತ್‌ ಬಂದು ಹೇಳುತ್ತಿದ್ದಾಗ ಮನಸ್ಸೊಳಗೇಕೋ ಮರುಕದ ನಡುವೆಯೂ ಹೆಲ್ಮೆಟ್‌ಗೊಂದು ಥ್ಯಾಂಕ್ಸ್‌ ಹೇಳಬೇಕು ಅಂತನ್ನಿಸಿತ್ತು. ಆದರೆ ಇವತ್ತು ಮತ್ತೆ ಅದೇ ಶರತ್‌ ʼʼಹೆಲ್ಮೆಟ್‌ ಯಾರ್‌ ಕಂಡು ಹಿಡಿದ್ನೋ, ಯಾಕಾದ್ರೂ ಇದು ಬೇಕಿತ್ತೋʼʼ ಅಂತ ತಲೆ ಚಚ್ಚಿಕೊಂಡು ಹೇಳಿದಾಗ ನಗು ತಡೆಯಲಾಗಲಿಲ್ಲ. ಇಲ್ಲೇ ಸರ್ಕಲ್‌ ಸಮೀಪ ಸಿಕ್ಕಿದ್ದ ಸರ್ಕಲ್‌ ಇನ್ಸ್‌ಪೆಕ್ಟರ್‌ ಹೆಲ್ಮೆಟ್‌ ಹಾಕದ ನಮ್‌ ಹುಡುಗನಿಗೆ ಫೈನ್‌ ಹಾಕಿ ಕಳ್ಸಿದ್ರು ಅನ್ನೋ ವಾಸನೆ ಸಿಗೋದಕ್ಕೆ ಹೆಚ್ಚು ಸಮಯ ಹಿಡಿಯಲಿಲ್ಲ.

ಇದೆಲ್ಲದರ ನಡುವೆ ನನಗೆ ತುಂಬಾ ಕಾಡಿ ಹುಡುಕಾಡಿದ್ದು ಈ ಹೆಲ್ಮೆಟ್‌ ಕಂಡು ಹಿಡಿದ ಅಸಾಮಿ ಯಾರಿರಬಹುದೆನ್ನುವ ಕುತೂಹಲ. ಸ್ಟೈಲಾಗಿ ಗಡ್ಡ-ಕೂದಲು ಬಿಟ್ಟು ಒಂದ್ರೌಂಡ್‌ ಹೋಗಿ ಬರೋಣ ಅಂತ ಹೊರಡೋ ಹಲವು ಪಡ್ಡೆ ಹುಡುಗರನ್ನು ಲಗಾಮು ಹಾಕಿ ಹಿಡಿದೆಳೆಯೋ ಹೆಲ್ಮೆಟ್‌ ಹುಟ್ಟಿದ್ದಾದರೂ ಹೇಗೆನ್ನುವ ಪ್ರಶ್ನೆಗೆ ಉತ್ತರವೆಂಬಂತೆ ಸಿಕ್ಕಿದ್ದು ಬ್ರಿಟಿಷ್‌ ವೈದ್ಯ ಡಾ. ಎರಿಕ್‌ ಗಾರ್ಡ್ನರ್‌. ಆತನೇ ಈ ಮೊದಲ ಶಿರಣಾಸ್ತ್ರ ಕಂಡು ಹಿಡಿದ, ಎಲ್ಲರ ಬೈಗುಳ ತಿನ್ನುವ ಮಹಾತ್ಮ.

ಇದನ್ನೂ ಓದಿ-'ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ:ಮೂರು ತಿಂಗಳು ಹಿಂದೆಯೇ ಇದನ್ನ ಭವಿಷ್ಯ ನುಡಿದಿದ್ದೆ!'

1900ರ ದಶಕದಲ್ಲಿ ಮೋಟಾರು ಸೈಕಲ್‌ ಬಂದ ಆರಂಭದಲ್ಲಿ ಅವು ಕೇವಲ ಮೋಟಾರ್‌ ಹೊಂದಿದ ಬೈಸಿಕಲ್‌ ಆಗಿದ್ದವಷ್ಟೆ. ಮೊದಲ ಬಾರಿಗೆ ಗೇರ್‌, ಬ್ರೇಕ್‌ ಎನ್ನುವ ಕಲ್ಪನೆ ಹುಟ್ಟಿಕೊಳ್ಳುವ ಮೊದಲೇ ಮೋಟಾರ್‌ ಸೈಕಲ್‌ ರೋಡಿಗಿಳಿದು ಆಗಿನ ಕೆಂಪು ರೋಡಿನಲ್ಲಿ ಧೂಳೆಬ್ಬಿಸಿಬಿಟ್ಟಿದ್ದವು. ಹಾಗೆ ಧೂಳೆಬ್ಬಿಸಿ ಸುಮ್ಮನಾಗಿದ್ದರೆ ಪರವಾಗಿರಲಿಲ್ಲ. ಮೋಟಾರ್‌ ಸೈಕಲ್‌ಗಳ ನಡುವೆ ವೇಗದ ಓಟ ಶುರುವಾದವು. ಇದರಿಂದಲೇ ಒಂದಿಷ್ಟು ರೇಸಿಂಗ್‌ ಶುರುವಾದವು. ಅನೇಕ ಸವಾರರು ಬಿದ್ದು ಏಟು ಮಾಡಿಕೊಂಡು ತಲೆಗೆ ಏಟು ಮಾಡಿಕೊಂಡಿದ್ದೂ ನಡೆದಿತ್ತು.

ಹೀಗೆ ತನ್ನ ಬಳಿಗೆ ಬಿದ್ದು ಗಾಯ ಮಾಡಿಕೊಂಡು ಬರುತ್ತಿದ್ದ ಸವಾರರನ್ನು ಮತ್ತು ತಲೆಗೆ ಏಟು ಮಾಡಿಕೊಂಡು ಶಾಶ್ವತ ನಿದ್ರೆಗೆ ಜಾರಿದ ಸವಾರರನ್ನು ಗಮನದಲ್ಲಿರಿಸಿಕೊಂಡು 1914 ರಲ್ಲಿ ಮೊದಲ ಬಾರಿಗೆ ಬ್ರಿಟಿಷ್ ವೈದ್ಯ ಡಾ. ಎರಿಕ್ ಗಾರ್ಡ್ನರ್  ಶೆಲ್ಕ್ ಕ್ಯಾನ್ವಾಸ್ ಅನ್ನು ಸಿದ್ದಪಡಿಸಿದರು. ಸವಾರನ ತಲೆಯನ್ನು ರಕ್ಷಿಸಲು ಮಾಡಿದ ಶೆಲ್ಕ್ ಕ್ಯಾನ್ವಾಸ್ ಜಗತ್ತಿನ ಮೊದಲ ಮೋಟಾರ್‌ ಸೈಕಲ್‌ ಶಿರಣಾಸ್ತ್ರ. ಹೀಗೆ ಶಿರಣಾಸ್ತ್ರ ಕಂಡು ಹಿಡಿದ ಡಾ. ಎರಿಕ್ ಗಾರ್ಡ್ನರ್ ಪ್ರಧಾನ ಮೋಟಾರ್‌ಸೈಕಲ್ ರೇಸ್‌ನಲ್ಲಿ ಅದರ ಬಳಕೆಗೆ ಒತ್ತಾಯಿಸಿದರು. ಗಾರ್ಡ್ನರ್ ಅದೃಷ್ಟ ಚೆನ್ನಾಗಿತ್ತು. ಓಟದ ಸಂಘಟಕರು ಈ ತಲೆಯ ರಕ್ಷಣಾ ಸಾಧನವನ್ನು ಕಡ್ಡಾಯಗೊಳಿಸಿದರು. 

ಆದರೆ ಇದು ಜನರನ್ನು ಆಕರ್ಷಿಸಲಿಲ್ಲ, ಜನ ನೆಚ್ಚಿಕೊಳ್ಳಲಿಲ್ಲ, ಹೆಚ್ಚಿನವರು ತಮ್ಮ ಶೋಕಿಗಾಗಿ ಸವಾರಿ ಆರಂಭಿಸಿದವರು. ತಲೆಯ ಮೇಲೆ ಚಿಪ್ಪಿನಂತಹ ಈ ರಚನೆಯನ್ನು ಹೊರುವುದು ದೊಡ್ಡ ತಲೆನೋವೆಂದೇ ಜನ ಭಾವಿಸಿದರು. ಸವಾರಿ ಮಾಡುವಾಗ ಉತ್ತಮವಾಗಿ ಕಾಣಬೇಕೆಂದು ಜನ ಆರಿಸಿಕೊಂಡಿದ್ದು ಪ್ಯಾಡ್ಡ್ ಲೆದರ್ ಕ್ಯಾಪ್‌ಗಳನ್ನು. ಇಷ್ಟೆಲ್ಲಾ ಆದ ಬಳಿಕವೂ ಹೆಲ್ಮೆಟ್‌ ಜನರ ಮನಸ್ಸು ಗೆಲ್ಲಲು ಆ ಒಂದು ದುರಂತ ನಡೆಯಲೇ ಬೇಕಿತ್ತು. 

ಬ್ರಿಟನ್ನಿನ ಪ್ರಸಿದ್ಧ ರಾಷ್ಟ್ರೀಯ ನಾಯಕ ಟಿ.ಇ. ಲಾರೆನ್ಸ್, ಅಕಾ 'ಲಾರೆನ್ಸ್ ಆಫ್ ಅರೇಬಿಯಾ' ದುರಂತವಾಗಿ ಮರಣ ಹೊಂದಿದ್ದು ದೊಡ್ಡ ಜಾಗೃತಿ ತಿರುವಿಗೆ ಕಾರಣವಾಯಿತು. ಅಂದ್ಹಾಗೆ ಈ ನಾಯಕ ಸಾವಿಗೀಡಾಗಿದ್ದು ಯಾವುದೇ ಯುದ್ಧ ಅಥವಾ ಮಿಲಿಟರಿ ಕಾರ್ಯಾಚರಣೆಯಲ್ಲಿ ಅಲ್ಲ, ಬದಲಾಗಿ ಅವರ ವಾಸದ ಮನೆಯಿಂದ ಕೆಲವೇ ಕೆಲವು ಮೈಲುಗಳಷ್ಟು ದೂರದಲ್ಲಿ ನಡೆದ ರಸ್ತೆ ಅಪಘಾತದಲ್ಲಿ. ಈ ದುರಂತ ಮೋಟಾರ್‌ಸೈಕಲ್ ಸವಾರಿಯ ಅಪಾಯಗಳನ್ನು ಮತ್ತು ಮುಂದಿನ ಅಪಘಾತಗಳನ್ನು ಹೇಗೆ ತಡೆಯುವುದು ಎಂಬುದರ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಿತ್ತೆಂದೇ ಹೇಳಬಹುದು.

ಆಸ್ಪತ್ರೆಯಲ್ಲಿ ಲಾರೆನ್ಸ್‌ಗೆ ಕೊನೆಯದಾಗಿ ಚಿಕಿತ್ಸೆ ನೀಡಿದ ಬ್ರಿಟಿಷ್ ವೈದ್ಯ ಡಾ. ಹಗ್ ಕೇರ್ನ್ಸ್, ಈ ದುರಂತ ಘಟನೆಯಿಂದ ಆಳವಾಗಿ ಪ್ರಭಾವಿತರಾದರು. ಮೋಟಾರ್‌ಸೈಕಲ್ ಅಪಘಾತಗಳು ಮತ್ತು ತಲೆಗೆ ಗಾಯಗಳ ನಡುವಿನ ಪರಸ್ಪರ ಸಂಬಂಧದ ಬಗ್ಗೆ ಸಂಶೋಧನೆ ಮಾಡಲು ಶುರುವಿಟ್ಟ ಕೇರ್ನ್ಸ್‌ ನಂತರ ಬ್ರಿಟಿಷ್ ವೈದ್ಯಕೀಯ ಜರ್ನಲ್‌ನಲ್ಲಿ ಈ ವಿಷಯದ ಬಗ್ಗೆ ವರದಿಯನ್ನು ಪ್ರಕಟಿಸಿದ ಮೊದಲ ವೈದ್ಯ ಎನಿಸಿಕೊಂಡರು. ಅವರ ಈ ಸಂಶೋಧನೆ ಬ್ರಿಟಿಷ್ ಸೈನ್ಯಕ್ಕೆ ಹೆಲ್ಮೆಟ್‌ಗಳನ್ನು ಪರಿಚಯಿಸಲು ಸಹಾಯ ಮಾಡಿತು. ಆ ದಿನಗಳಲ್ಲಿ ಮೋಟಾರು ಸೈಕಲ್ ಮೌಂಟೆಡ್ 'ಡಿಸ್ಪಾಚ್ ರೈಡರ್ಸ್' ಅನ್ನು ವಿಚಕ್ಷಣ ಮತ್ತು ಸಂವಹನಕ್ಕಾಗಿ ವ್ಯಾಪಕವಾಗಿ ಬಳಸಲಾಗುತ್ತಿತ್ತು. ಡಾ. ಕೇರ್ನ್ಸ್ ಅವರ ಸತತ ಪ್ರಯತ್ನದ ಫಲವಾಗಿ ಬ್ರಿಟಿಷ್‌ ಸೈನ್ಯವು ತನ್ನ ಎಲ್ಲಾ ಮಿಲಿಟರಿ ಸವಾರರಿಗೆ ರಬ್ಬರ್ ಮತ್ತು ಕಾರ್ಕ್‌ನಿಂದ ಮಾಡಿದ ಹೆಲ್ಮೆಟ್‌ಗಳನ್ನು ಧರಿಸಲು ಆದೇಶವನ್ನು ನೀಡಿತು. ಹೆಲ್ಮೆಟ್‌ ಬಳಕೆಗೆ ವ್ಯಾಪಕ ಪ್ರಚಾರ ಸಿಕ್ಕಿದ್ದು ಇಲ್ಲಿಂದಲೇ.

ಆಧುನಿಕ ಮೋಟಾರ್ ಸೈಕಲ್ ಹೆಲ್ಮೆಟ್ ಬಂದಿದ್ದು ಹೇಗೆ? 

ಮೋಟಾರ್‌ಸೈಕಲ್‌ಗಳು ವೇಗವಾಗಿ ಸಾಗುತ್ತಾ ಹೋದಂತೆ ಬಳಕೆದಾರರು ಅಷ್ಟೇ ಪ್ರೀತಿಯಿಂದ ಹೆಲ್ಮೆಟ್‌ ಬಳಕೆಯನ್ನು ಆಸ್ವಾಧಿಸಿಕೊಳ್ಳಲಿಲ್ಲ. 1953 ರಲ್ಲಿ ನಡೆದ ಕ್ರಾಂತಿಕಾರಿ ಆವಿಷ್ಕಾರ ಅದರ ಪ್ರಾಮುಖ್ಯತೆಯನ್ನು ಮತ್ತು ಜನರಿಗೆ ಅದರ ಬಳಕೆಯನ್ನು ಪ್ರೇರೇಪಿಸಿತು. 1953ರಲ್ಲಿ ಸಿ.ಎಫ್. USC ಯ ಪ್ರಾಧ್ಯಾಪಕ ಲೊಂಬಾರ್ಡ್ ಆಧುನಿಕ ಹೆಲ್ಮೆಟ್ ಅನ್ನು ಅಭಿವೃದ್ಧಿಪಡಿಸಿದರು. ಈ ನವೀನ ಹೆಲ್ಮೆಟ್ ಮೂರು ಪದರಗಳನ್ನು ಹೊಂದಿದ್ದು, ಗಟ್ಟಿಯಾದ ಫೈಬರ್ಗ್ಲಾಸ್ ಹೊರ ಕವಚ, ಮಧ್ಯದ ಪದರದಲ್ಲಿ ಪ್ರಭಾವ-ಹೀರಿಕೊಳ್ಳುವ ಫೋಮ್ ಮತ್ತು ಸೌಕರ್ಯಕ್ಕಾಗಿ ಪ್ಯಾಡ್ಡ್ ಒಳಗಿನ ಲೈನರ್ ಬಳಕೆದಾರನಿಗೆ ಕೊಂಚ ರಿಲ್ಯಾಕ್ಸ್‌ ಫೀಲ್‌ ಕೊಡುವಂತೆ ರಚಿತವಾಯ್ತು.

ಇದನ್ನೂ ಓದಿ-ಅನಾವಶ್ಯಕವಾಗಿ ಥಿಯೇಟರ್ ನಿಂದ ಜೇಮ್ಸ್ ಸಿನಿಮಾ ತೆಗೆಯುವಂತಿಲ್ಲ-ಬೊಮ್ಮಾಯಿ ಖಡಕ್ ವಾರ್ನಿಂಗ್

ರಾಯ್ ರಿಕ್ಟರ್ ಎಂಬ ಮಾಜಿ ರೇಸ್ ಕಾರ್ ಡ್ರೈವರ್ ಮತ್ತು ಬೆಲ್ ಹೆಲ್ಮೆಟ್‌ಗಳ ಸಂಸ್ಥಾಪಕ ಲೊಂಬಾರ್ಡ್‌ನ ವಿನ್ಯಾಸವನ್ನು ಎತ್ತಿಕೊಂಡು ಬೆಲ್ 500 ಮಾದರಿಯನ್ನು ರಚಿಸಿದರು. ಪರಿಣಾಮವಾಗಿ, ಬೆಲ್ 500 ಆಧುನಿಕ ಮೋಟಾರ್‌ಸೈಕಲ್ ಹೆಲ್ಮೆಟ್‌ಗಳ ಯುಗದ ಆರಂಭವನ್ನು ಗುರುತಿಸುವ ತ್ವರಿತ ಯಶಸ್ಸನ್ನು ಕಂಡಿತು. ಇದು ಶೀಘ್ರದಲ್ಲೇ ರೇಸಿಂಗ್‌ಗೆ ಪ್ರಮಾಣಿತ ಸಾಧನವಾಯಿತು ಮತ್ತು ನಿಧಾನವಾಗಿ, 1960 ರ ಹೊತ್ತಿಗೆ, ಹೆಚ್ಚು ಹೆಚ್ಚು ನಾಗರಿಕರು ಹೆಲ್ಮೆಟ್‌ಗಳನ್ನು ಬಳಸಲು ಪ್ರಾರಂಭಿಸಿದರು. 1963 ರಲ್ಲಿ, ಬೆಲ್ ತಯಾರಿಸಿದ ಮೊದಲ ಪೂರ್ಣ-ಮುಖ ಮೋಟಾರ್‌ಸೈಕಲ್ ಹೆಲ್ಮೆಟ್‌ಗಳೊಂದಿಗೆ ಬೆಲ್ ಸ್ಟಾರ್ ಎಂದು ಕರೆಯಲ್ಪಡುವ ಮಾರುಕಟ್ಟೆಯಲ್ಲಿ ಕ್ರಾಂತಿಯನ್ನುಂಟು ಮಾಡಿತು. ಇದು ದುಬಾರಿಯಾಗಿತ್ತು. ಆದರೆ ಯುಎಸ್ ಮಿಲಿಟರಿ ಮತ್ತು ನಾಸಾದ ಗಗನಯಾತ್ರಿಗಳ ಹಾರಾಟದ ಹೆಲ್ಮೆಟ್‌ಗಳಲ್ಲಿ ಕಂಡುಬರುವ ತಂತ್ರಜ್ಞಾನ ಮತ್ತು ವಸ್ತುಗಳನ್ನು ಬಳಸಿಕೊಂಡು ಗರಿಷ್ಠ ರಕ್ಷಣೆಯನ್ನು ಇದು ಕೊಟ್ಟಿತ್ತು. 

1964 ರಲ್ಲಿ, USDOT ಮೊಟ್ಟಮೊದಲ ಸುರಕ್ಷತಾ ಮಾನದಂಡಗಳನ್ನು ರಚಿಸಿತು, ಆ ಮೂಲಕ ಮೋಟಾರ್‌ಸೈಕಲ್ (Motorcycle) ಹೆಲ್ಮೆಟ್‌ಗಳು ನಿಯಮಗಳಿಗೆ ಬದ್ಧವಾಗಿರಬೇಕು ಎಂಬ ಅಂಶಗಳನ್ನು ಇದು ಹೊರಹಾಕಿತು. 1966 ರಲ್ಲಿ, ಕಾಂಗ್ರೆಸ್ US ಹೈವೇ ಸೇಫ್ಟಿ ಆಕ್ಟ್ ಅನ್ನು ಅಂಗೀಕರಿಸಿತು. ಇದು ಹೆದ್ದಾರಿ ಅಭಿವೃದ್ಧಿಗಾಗಿ ಫೆಡರಲ್ ಸರ್ಕಾರದಿಂದ ಹಣವನ್ನು ಪಡೆಯಲು ರಾಜ್ಯಗಳು ಹೆಲ್ಮೆಟ್ ಕಾನೂನುಗಳನ್ನು ಹೊಂದಿರಬೇಕು ಎಂದು ಸ್ಪಷ್ಟಪಡಿಸಿತು. ನಿಧಾನವಾಗಿ, ಮುಂದಿನ ವರ್ಷದಲ್ಲಿ ವಿವಿಧ ರಾಜ್ಯಗಳು 47 ಹೆಲ್ಮೆಟ್ ಕಾನೂನುಗಳನ್ನು ಅನುಸರಿಸಿದವು. ಆದಾಗ್ಯೂ, 1968 ರ ಹೊತ್ತಿಗೆ ಅನೇಕ ರಾಜ್ಯಗಳು ಕಾನೂನನ್ನು ರದ್ದುಗೊಳಿಸಿದವು ಆದರೆ ಹೆಲ್ಮೆಟ್‌ಗಳು ತುಂಬಾ ಜನಪ್ರಿಯವಾಗಿದ್ದವು ಮತ್ತು ಸವಾರರಲ್ಲಿ ಸಾಮಾನ್ಯವಾಗಿತ್ತು. 1970 ಮತ್ತು 1980 ರ ಹೊತ್ತಿಗೆ, ಪೂರ್ಣ ಮುಖದ ಹೆಲ್ಮೆಟ್‌ಗಳು ಫ್ಲಿಪ್-ಅಪ್ ಮತ್ತು ಟಿಂಟೆಡ್ ವೈಸರ್‌ಗಳೊಂದಿಗೆ ಇನ್ನಷ್ಟು ಮಾರ್ಪಾಡುಗಳೊಂದಿಗೆ ಬಂದವು ಮತ್ತು ಪೂರ್ಣ ಮುಖದ ಹೆಲ್ಮೆಟ್‌ನೊಂದಿಗೆ ಓಪನ್ ಫೇಸ್ ಹೆಲ್ಮೆಟ್‌ನ ಅನುಕೂಲತೆಯನ್ನು ಸಂಯೋಜಿಸುವ ಮಾಡ್ಯುಲರ್ ಹೆಲ್ಮೆಟ್‌ಗಳ ಪರಿಚಯವಾಯಿತು.

ಹೆಲ್ಮೆಟ್‌ಗಳು ಅಭಿವೃದ್ಧಿಗೊಂಡಂತೆ, ಅವುಗಳ ಶೈಲಿ ಮತ್ತು ವಿನ್ಯಾಸಗಳು ಕೂಡ ಹೆಚ್ಚಾಯಿತು. ಹೀಗೆ ಹೆಲ್ಮೆಟ್‌ ಜಗತ್ತಿನಲ್ಲಿ ಅತೀ ಮುಖ್ಯ ಬಳಕೆಯ ವಸ್ತುಗಳಲ್ಲಿ ಒಂದಾಯಿತು. ಓದುಗರಾಗಿ ನೀವೂ ಅಷ್ಟೆ ಉತ್ತಮ ಗುಣಮಟ್ಟದ ಹೆಲ್ಮೆಟ್‌ ಬಳಸಿ, ಗುಣಮಟ್ಟದೊಂದಿಗೆ ಎಂದಿಗೂ ರಾಜಿ ಬೇಡ. ನಿಯಮಗಳನ್ನು ಪಾಲಿಸಿ ಅಪಾಯದಿಂದ ಪಾರಾಗಿ ಎಂಬುದನ್ನು ನಿಮಗೂ ಹೇಳುತ್ತಾ ಶರತ್‌ಗೂ ಹೇಳುವುದಕ್ಕೆ ಕಾಯುತ್ತಿದ್ದೇನೆ. 

-ಸ್ವಸ್ತಿಕ್‌ ಕನ್ಯಾಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News