2011ರ ನೇಮಕ ಅಸಿಂಧು; ಕೆಎಎಸ್ ಅಧಿಕಾರಿಗಳ ಅರ್ಜಿ ತಿರಸ್ಕರಿಸಿ ಹೈಕೋರ್ಟ್ ಆದೇಶ

ಕೆಎಎಸ್ ಅಭ್ಯರ್ಥಿಗಳು ಲಿಖಿತ ಪರೀಕ್ಷೆಯ ಉತ್ತರ ಪತ್ರಿಕೆಗಳ ಮರುಪರಿಶೀಲನೆ ಮತ್ತು ಮರು ಸಂದರ್ಶನ ನಡೆಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನೂ ಶುಕ್ರವಾರ ಹೈಕೋರ್ಟ್ ವಜಾಗೊಳಿಸಿದೆ

Last Updated : Jul 14, 2018, 11:16 AM IST
2011ರ ನೇಮಕ ಅಸಿಂಧು; ಕೆಎಎಸ್ ಅಧಿಕಾರಿಗಳ ಅರ್ಜಿ ತಿರಸ್ಕರಿಸಿ ಹೈಕೋರ್ಟ್ ಆದೇಶ title=

ಬೆಂಗಳೂರು: ಕರ್ನಾಟಕ ಲೋಕ ಸೇವಾ ಆಯೋಗದ 2011ರ ಕೆಎಎಸ್ ನೇಮಕಾತಿ ಯನ್ನು ರದ್ದುಗೊಳಿಸಿದ್ದ ಹೈಕೋರ್ಟ್, ಇದೀಗ ಅಭ್ಯರ್ಥಿಗಳು ಲಿಖಿತ ಪರೀಕ್ಷೆಯ ಉತ್ತರ ಪತ್ರಿಕೆಗಳ ಮರುಪರಿಶೀಲನೆ ಮತ್ತು ಮರು ಸಂದರ್ಶನ ನಡೆಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನೂ ಶುಕ್ರವಾರ ಹೈಕೋರ್ಟ್ ವಜಾಗೊಳಿಸಿದೆ. ಇದರಿಂದ 2011ನೇ ಸಾಲಿನ ಕೆಎಎಸ್ ಅಧಿಕಾರಿಗಳ ನೇಮಕಾತಿ ಅಸಿಂಧು ಎಂಬುದನ್ನು ಕೋರ್ಟ್ ಮತ್ತೆ ಎತ್ತಿಹಿಡಿದಿದೆ. 

ನ್ಯಾಯಾಧೀಶರಾದ ಹೆಚ್.ಜಿ.ರಮೇಶ್ ಮತ್ತು ಪಿ.ಎಸ್.ದಿನೇಶ್ ಕುಮಾರ್ ನೇತೃತ್ವದ ವಿಭಾಗಿಯ ಪೀಠ ಈ ಅರ್ಜಿಗಳನ್ನು ತಿರಸ್ಕರಿಸಿದ್ದು, "ಈಗಾಗಲೇ ನೇಮಕಾತಿ ಪ್ರಕ್ರಿಯೆ ಆರಂಭವಾಗಿ ಎಂಟು ವರ್ಷ ಕಳೆದಿವೆ. ಲಿಖೀತ ಪರೀಕ್ಷೆಗಳು ಮುಗಿದು ಐದೂವರೆ ವರ್ಷ ಆಗಿದೆ. ಇಷ್ಟು ವರ್ಷದ ನಂತರ ಉತ್ತರ ಪತ್ರಿಕೆಗಳನ್ನು ಮರುಮೌಲ್ಯಮಾಪನಕ್ಕೆ ಒಳಪಡಿಸಲು ಸಾಧ್ಯವಿಲ್ಲ. ಹಾಗಾಗಿ, ಉತ್ತರ ಪತ್ರಿಕೆಗಳ ಮರುಮೌಲ್ಯಮಾಪನಕ್ಕೆ ಆದೇಶಿಸಲು ಇದು ಅರ್ಹ ಪ್ರಕರಣವೂ ಅಲ್ಲ" ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ 2011ನೇ ಸಾಲಿನಲ್ಲಿ 362 "ಎ' ಮತ್ತು "ಬಿ' ವೃಂದದ ಹುದ್ದೆಗಳಿಗೆ ನೇಮಕಗೊಂಡಿದ್ದ ಅಭ್ಯರ್ಥಿಗಳಿಗಿದ್ದ ಕೊನೆಯ ಅವಕಾಶವೂ ಕೈತಪ್ಪಿದಂತಾಗಿದೆ.

ಕೆಎಎಸ್ ಅಧಿಕಾರಿಗಳ ನೇಮಕಕ್ಕೆ ಕೆಪಿಎಸ್‌ಸಿ 2014 ಮಾ.21ರಂದು ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲಾಗಿತ್ತು. ಈ ಅಂತಿಮ ಪಟ್ಟಿಯಲ್ಲಿ ಆಯ್ಕೆಯಾಗದ ಅಭ್ಯರ್ಥಿಗಳು ಕೂಡಾ ಪಟ್ಟಿ ಬಗ್ಗೆ ಸಂಶಯ ವ್ಯಕ್ತಪಡಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಅರ್ಜಿಗಳ ವಿಚಾರಣೆ ನಡೆಸಿದ್ದ ಹೈಕೋರ್ಟ್‌, ಕೆಎಟಿ ಆದೇಶ ರದ್ದುಗೊಳಿಸಿ 2018ರ ಮಾರ್ಚ್‌ 9ರಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಆಯ್ಕೆಯಾಗಿದ್ದ ಅಭ್ಯರ್ಥಿಗಳು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಪರಿಶೀಲಿಸಿ ಆದೇಶ ನೀಡುವಂತೆ ಸುಪ್ರೀಂ ಹೈಕೋರ್ಟ್'ಗೆ ಸೂಚನೆ ನೀಡಿತ್ತು.

Trending News