ಬೆಂಗಳೂರು: ಕನ್ನಡನಾಡಿನ ಪ್ರತಿಭಾನ್ವಿತ ನಟ, ನಿರ್ದೇಶಕ ಶಂಕರ್ ನಾಗ್ ಅವರು ಚಿತ್ರಿಸಿರುವ 'ಮಾಲ್ಗುಡಿ ಡೇಸ್' ಧಾರವಾಹಿಯನ್ನು ಕನ್ನಡಕ್ಕೆ ಡಬ್ ಮಾಡಬೇಕೆಂದು ಒತ್ತಾಯಿಸಿ ಕನ್ನಡ ಗ್ರಾಹಕ ಕೂಟ ಕರೆ ನೀಡಿದ್ದ ಟ್ವಿಟ್ಟರ್ ಅಭಿಯಾನಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದ್ದು, #MalgudiDaysInKannada ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ನಲ್ಲಿದೆ.
ಕನ್ನಡದವರೇ ನಿರ್ದೇಶಿಸಿ, ಕನ್ನಡದವರೇ ಅಭಿನಯಿಸಿ, ಕರ್ನಾಟಕದಲ್ಲೇ ಚಿತ್ರೀಕರಿಸಿರುವ ಆರ್.ಕೆ.ನಾರಾಯಣ್ ಅವರ 'ಮಾಲ್ಗುಡಿ ಡೇಸ್' ಧಾರವಾಹಿ ಎಲ್ಲಾ ಭಾಷೆಗಳಲ್ಲಿ ಡಬ್ ಆಗಿದ್ದು, ಈ ಧಾರಾವಾಹಿಯನ್ನು ಕನ್ನಡಕ್ಕೆ ಡಬ್ ಮಾಡಬೇಕು ಎಂಬ ಕೂಗು ಬಹಳ ದಿನಗಳಿಂದ ಕೇಳಿಬರುತ್ತಿದೆ. ಹೀಗಾಗಿ ಕನ್ನಡ ಗ್ರಾಹಕರ ಕೂಟ ಆಗಸ್ಟ್ 8 ರಂದು ಬೆಳಿಗ್ಗೆ 6 ರಿಂದ ಸಂಜೆ 8 ಗಂಟೆಯವರೆಗೆ 'ಮಾಲ್ಗುಡಿ ಡೇಸ್ ಕನ್ನಡಕ್ಕೆ ಡಬ್ ಆಗಿ ಬರಲಿ' ಎಂಬ ಟ್ವಿಟರ್ ಅಭಿಯಾನಕ್ಕೆ ಮಂಗಳವಾರ ಕರೆ ನೀಡಿತ್ತು.
ಮಾಲ್ಗುಡಿ ಡೇಸ್ ಕನ್ನಡಕ್ಕೆ ಡಬ್ ಆಗಿ ಬರಬೇಕು .#MalgudiDaysInKannada ಟ್ವಿಟ್ಟರ್ ಅಭಿಯಾನ ಇದೇ ಬುಧವಾರ ಸಂಜೆ 6 ರಿಂದ. ನಿಮ್ಮ ಪಾಲ್ಗೊಳ್ಳುವಿಕೆಯನ್ನು ಇಲ್ಲಿ ಖಚಿತಪಡಿಸಿ.https://t.co/n7mVBJ9nxu pic.twitter.com/fchSTPDS05
— KGK (@KannadaGrahaka) August 6, 2018
ಈ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆಯಿಂದ ಸಾವಿರಾರು ಮಂದಿ #MalgudiDaysInKannada ಎಂಬ ಹ್ಯಾಶ್ ಟ್ಯಾಗ್ ಜೊತೆ ಕನ್ನಡದಲ್ಲಿ ಮಾಲ್ಗುಡಿ ಡೇಸ್ ತರಲು ಒತ್ತಾಯಿಸಿ, ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದುವರೆಗೂ 3,500ಕ್ಕೂ ಹೆಚ್ಚು ಮಂದಿ ಈ ವಿಷಯವಾಗಿ ಟ್ವೀಟ್ ಮಾಡಿದ್ದಾರೆ.
ಆರ್.ಕೆ.ನಾರಾಯಣ್ ಅವರ 'ಸ್ವಾಮಿ ಅಂಡ್ ಹಿಸ್ ಫ್ರೆಂಡ್ಸ್' ಕಾದಂಬರಿ ಆಧಾರಿತ ಕಥೆಯನ್ನು ಕನ್ನಡದ ಪ್ರತಿಭಾನ್ವಿತ ನಟ ದಿವಂಗತ ಶಂಕರ್ನಾಗ್ ಅವರು ‘ಮಾಲ್ಗುಡಿ ಡೇಸ್’ ಹೆಸರಿನಲ್ಲಿ ಧಾರವಾಹಿಯಾಗಿ ನಿರ್ದೇಶಿಸಿದ್ದರು. ಕರ್ನಾಟಕದ ಆಗುಂಬೆಯಲ್ಲಿ ಚಿತ್ರೀಕರಣಗೊಂಡಿರುವ ಮಾಲ್ಗುಡಿ ಡೇಸ್ ಧಾರಾವಾಹಿ 1986ರಲ್ಲಿ ಟಿ.ಎಸ್.ನರಸಿಂಹನ್ ನಿರ್ಮಾಣದಲ್ಲಿ ಅನಂತ್ ನಾಗ್ ಪ್ರಮುಖ ಪಾತ್ರದಲ್ಲಿ ದೂರದರ್ಶನದಲ್ಲಿ ಮೊದಲ ಬಾರಿಗೆ ಪ್ರಸಾರವಾಗಿತ್ತು.
ಕನ್ನಡ ನಟರಾದ ರಮೇಶ್ ಭಟ್, ಲೋಕನಾಥ್, ವೈಶಾಲಿ ಕಾಸರವಳ್ಳಿ, ಮನದೀಪ್ ರಾಯ್, ಮಾಸ್ಟರ್ ಮಂಜುನಾಥ್, ಗಿರೀಶ್ ಕಾರ್ನಾಡ್ ಮುಂತಾದವರು ಈ ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ. ಈ ಧಾರಾವಾಹಿಗೆ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿಗಳು ಲಭಿಸಿದ್ದು, ಹಲವು ಭಾಷೆಗಳಿಗೆ ಈಗಾಗಲೇ ಡಬ್ ಆಗಿದೆ.