ಬೆಂಗಳೂರು: ರಾಜ್ಯದಲ್ಲಿ ದೋಸ್ತಿ ಸರ್ಕಾರದ ಬಿಕ್ಕಟ್ಟು ಶಮನವಾದಂತೆ ಕಾಣುತ್ತಿಲ್ಲ. ಅತೃಪ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಉದ್ದೇಶದ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸಂಧಾನ ಸಭೆ ಕೂಡ ಫಲ ನೀಡಿಲ್ಲ. ಆದರೆ ಬಿಜೆಪಿ ನಾಯಕರು ಕಾಂಗ್ರೆಸಿನ ಅತೃಪ್ತ ಶಾಸಕರಿಗೆ ಬಿಗ್ ಆಫರ್ ನೀಡಿರುವುದು ಮಾತ್ರ ಗೊತ್ತಾಗಿದೆ. ತಮ್ಮ ಆಪ್ತರೊಂದಿಗೆ ಬಿಜೆಪಿಗೆ ಬಂದರೆ ಡಿಸಿಎಂ ಹುದ್ದೆ ನೀಡೋದಾಗಿ ರಮೇಶ್ ಜಾರಕಿಹೊಳಿಗೆ ಬಿಜೆಪಿ ನಾಯಕರು ಭರವಸೆ ನೀಡಿದ್ದಾರಂತೆ...
ಹೌದು, ಈ ವಿಷಯವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಕರೆಯಲಾಗಿದ್ದ ಸಂಧಾನ ಸಭೆಯಲ್ಲಿ ಖುದ್ದು ರಮೇಶ್ ಜಾರಕಿಹೊಳಿ ಅವರೇ ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ. ಸಿದ್ದರಾಮಯ್ಯ ಜೊತೆ ಚರ್ಚೆ ವೇಳೆ ಆಪರೇಶನ್ ಕಮಲದ ಆಫರ್ ಬಗ್ಗೆ ಬಾಯ್ಬಿಟ್ಟ ರಮೇಶ ಜಾರಕಿಹೊಳಿ, ನನಗೆ ಬಿಜೆಪಿ ಮುಖಂಡರು ಡಿಸಿಎಂ ಹುದ್ದೆ ನೀಡೋ ಭರವಸೆ ನೀಡಿದ್ದಾರೆ. ಬಿಜೆಪಿ ಜೊತೆ ಕೈ ಜೋಡಿಸಿದರೆ 'ವಾಲ್ಮಿಕಿ ಸಮುದಾಯ'ಕ್ಕೆ ಡಿಸಿಎಂ ಸ್ಥಾನ ಸಿಗುತ್ತೆ. ಅಹಿಂದ ಪರವಾಗಿರೋ ನೀವು ನಮಗೆ ಬೆಂಬಲ ನೀಡಿ ಅಥವಾ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ನನ್ನನ್ನು ಡಿಸಿಎಂ ಮಾಡಿ ಎಂದು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗುತ್ತಿದೆ.
ಮೈತ್ರಿ ಸರ್ಕಾರದಲ್ಲಿ ಅಹಿಂದ ವರ್ಗಕ್ಕೆ ಯಾವುದೇ ಲಾಭವಿಲ್ಲ:
ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿ, ಪರಮೇಶ್ವರ್ ಹಾಗೂ ಡಿಕೆ ಶಿವಕುಮಾರ್ ಹೊರತುಪಡಿಸಿ ಇನ್ನಾರಿಗೂ ಲಾಭವಿಲ್ಲ, ಅಹಿಂದ ವರ್ಗಕ್ಕೂ ಯಾವುದೇ ಲಾಭವಿಲ್ಲ ಎಂದು ಸಿದ್ದರಾಮಯ್ಯಗೆ ಹೇಳಿರುವ ರಮೇಶ್ ಜಾರಕಿಹೊಳಿ, ಅಹಿಂದ ನಾಯಕರಾಗಿ ನೀವು ನಮ್ಮನ್ನ ಕಟ್ಟಿ ಹಾಕಬೇಡಿ. ನನ್ನ ಜೊತೆಗಿನ ಅಹಿಂದ ಶಾಸಕರದ್ದು ಇದೇ ಮಾತು. ನಿಮ್ಮ ಸಪೋರ್ಟ್ ನಮಗೆ ಬೇಕು ಎಂದು ಚರ್ಚೆ ವೇಳೆ ಅಹಿಂದ ಕಾರ್ಡ್ ತೇಲಿ ಬಿಟ್ಟಿರುವುದಲ್ಲದೆ, ಮುಕ್ತವಾಗಿ ನಮಗೆ ನಮ್ಮ ನಿರ್ಧಾರ ತೆಗೆದುಕೊಳ್ಳಲು ಅವಕಾಶ ನೀಡಿ ಎಂದಿದ್ದಾರೆ.
ರಮೇಶ್ ಜಾರಕಿಹೊಳಿ ಮಾತುಗಳನ್ನಾಲಿಸಿದ ಸಿದ್ದರಾಮಯ್ಯ, ಎಲ್ಲದಕ್ಕೂ ಅವಸರ ಬೇಡ ಹೈಕಮಾಂಡ್ ಜೊತೆ ಚರ್ಚೆಯಾಗಲಿ ಎಂದು ಸಲಹೆ ನೀಡಿದ್ದಾರೆ ಎನ್ನಲಾಗಿದೆ.