ಭಾರತೀಯ ಚಿತ್ರರಂಗದ ಮಹಾನ್ ನಿರ್ದೇಶಕ, ನಿರ್ಮಾಪಕ ಮತ್ತು ನಟ ವಿದ್ಯಾಧರ ಶಾಂತಾರಾಂ ವಣಕುದುರೆ (ವಿ. ಶಾಂತಾರಾಂ) ಅವರ ಸಾಧನೆಗಳು ಇಂದಿಗೂ ಸ್ಮರಣೀಯವಾಗಿವೆ. 1901ರಲ್ಲಿ ಬಿಜಾಪುರದ ಇಂಡಿಯಲ್ಲಿ ಜನಿಸಿದ ಶಾಂತಾರಾಂ, ತಮ್ಮ ಆರಂಭಿಕ ಜೀವನವನ್ನು ಹುಬ್ಬಳ್ಳಿಯ ದುರ್ಗದ ಬೈಲಿನಲ್ಲಿ ಕಳೆದರು. ಅವರ ಅಜ್ಜಿಯವರ ಮಸಾಲೆದಾರ್ ಮಿಸಳ್ ತಿಂಡಿಗಳು ಸ್ಥಳೀಯವಾಗಿ ಜನಪ್ರಿಯವಾಗಿದ್ದವು.
ಭಾರತೀಯ ಚಿತ್ರರಂಗದಲ್ಲಿ ಮಹಾನ್ ನಿರ್ದೇಶಕ, ನಿರ್ಮಾಪಕ, ನಟರಾಗಿ ವಿಶಿಷ್ಟ ಛಾಪು ಮೂಡಿಸಿದವರು ಶಾಂತಾರಾಂ. ಟಾಕಿ ಸಿನಿಮಾದಿಂದ ಆರಂಭವಾದ ಅವರ ಸಿನಿ ಪಯಣವು ಮುಂದೆ 60, 70 ರ ದಶಕದವರೆಗೆ ಸಾಗಿತು. ಅವರ ಝಣಕ್ ಝಣಕ್ ಪ್ಹಾಯಲ್ ಭಾಜೆ,ಗೀತ್ ಗಾಯೋ ಪತ್ತರೋನೆ, ಅಮರ್ ಭೂಪಾಲಿ, ನವರಂಗ್,ಡಾ. ಕೊಟ್ನಿಸ್ ಕೀ ಅಮರ್ ಕಹಾನಿಯಂತಹ ಚಿತ್ರಗಳು ಅವರಿಗೆ ಸಾಕಷ್ಟು ಹೆಸರನ್ನು ತಂದುಕೊಟ್ಟವು.
ಶಾಂತಾರಾಂ ವಣಕುದುರೆ ಅವರು 1901ರ ನವಂಬರ್ 18 ರಂದು ಬಿಜಾಪುರದ ಇಂಡಿಯಲ್ಲಿ ಜೈನ್ ಧರ್ಮದ ಕುಟುಂಬದಲ್ಲಿ ಜನಿಸಿದರು. ಅವರು ತಮ್ಮ ಆರಂಭದ ಕೆಲವು ಕಾಲವನ್ನು ಹುಬ್ಬಳ್ಳಿಯಲ್ಲಿ ಕಳೆದಿದ್ದಾರೆ.ನಗರದಲ್ಲಿನ ಡೆಕ್ಕನ್ ಟಾಕೀಸ್ ನಲ್ಲಿ ಗೇಟ್ ಕೀಪರ್ ಆಗಿದ್ದು,ಹಾಗೂ ರೈಲ್ವೆ ಕಾರ್ಯಾಗಾರದಲ್ಲಿ ಕೆಲಸ ಮಾಡಿದ್ದು,ಇವೆಲ್ಲವೂ ಕೂಡ ಹುಬ್ಬಳ್ಳಿಯಲ್ಲಿನ ಅವರ ಸ್ಮರಣಿಯ ನೆನಪುಗಳಾಗಿವೆ.
ಇನ್ನು ದುರ್ಗದ ಬೈಲ್ ನಲ್ಲಿ ಅವರ ಅಜ್ಜಿ ಮಾಡುತ್ತಿದ್ದ ಮಿಸಳ್ ಬಗ್ಗೆಯೂ ಕೂಡ ಹಲವು ಕಥೆಗಳಿವೆ. ಹುಬ್ಬಳ್ಳಿಯ ಮುಖ್ಯ ಭಾಗದಲ್ಲಿರುವ ದುರ್ಗದ ಬೈಲಿನಲ್ಲಿ ಅವರ ಅಜ್ಜಿ ಹೋಟೆಲ್ ವೊಂದನ್ನು ನಡೆಸುತ್ತಿದ್ದರಂತೆ. ಸಾಯಂಕಾಲದ ವೇಳೆ ಬಜ್ಜಿ, ಮಂಡಕ್ಕಿ, ಜೊತೆಗೆ ತಯಾರಿಸುತ್ತಿದ್ದ 'ಮಸಾಲೇದಾರ್' ತಿಂಡಿ 'ಮಿಸಳ್' ಇಡೀ ಹುಬ್ಬಳ್ಳಿಗೆ ಚಿರಪರಿಚಿತವಾಗಿತ್ತು ಎಂದು ಹೇಳಲಾಗುತ್ತದೆ.
ಒಮ್ಮೆ ಮಹಾರಾಷ್ಟ್ರ ಫಿಲ್ಮ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅವರ ಸೋದರ ಸಂಬಂಧಿ ಬಾಬುರಾವ್ ಪೆಂಧರ್ಕರ್, ಹುಬ್ಬಳ್ಳಿಗೆ ಸೈರಂಧ್ರಿ (1920) ಪ್ರಿಂಟ್ ನೊಂದಿಗೆ ಆಗಮಿಸಿರುತ್ತಾರೆ, ಆಗ ಈ ಚಿತ್ರದಿಂದ ಪ್ರೇರಿತರಾದ ಶಾಂತಾರಾಂ ಅವರು ಮುಂದೆ ಅದೇ ಕಂಪನಿಯಲ್ಲಿ ಕೆಲಸಕ್ಕೆ ಸೇರುತ್ತಾರೆ. 1933 ರಲ್ಲಿ ಇದೇ ಚಿತ್ರವನ್ನು ಅವರು ಪ್ರಭಾತ್ ಫಿಲಂ ಕಂಪನಿ ಮೂಲಕ ಹಿಂದಿಯಿಂದ ಮರಾಠಿಗೆ ರಿಮೇಕ್ ಮಾಡುತ್ತಾರೆ. 19 ನೇ ವಯಸ್ಸಿನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಶಾಂತಾರಾಮ್ ಮೂಕಿ ಸಿನೆಮಾ ಯುಗದಲ್ಲಿ ಬಾಬುರಾವ್ ಪೇಂಟರ್‌ನ ಸಹಾಯಕರಾಗಿ ಮತ್ತು ಸುರೇಖಾ ಹರನ್ (1921) ದಲ್ಲಿ ನಟನಾಗಿ ಸಿನಿಮಾ ವೃತ್ತಿ ಜೀವನಕ್ಕೆ ಕಾಲಿಟ್ಟರು.
ಮುಂದೆ ಅವರು 1927 ರಲ್ಲಿ ಇದೇ ಕಂಪನಿಯಿಂದ ನೇತಾಜಿ ಪಾಲ್ಕರ್ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಸಿನಿಮಾ ಪ್ರಪಂಚಕ್ಕೆ ಕಾಲಿಟ್ಟರು.ಇದಾದ ನಂತರ 1929ರಲ್ಲಿ ಶಾಂತಾರಾಂ ತಮ್ಮ ಸ್ನೇಹಿತರ ಮೂಲಕ ಕೊಲ್ಲಾಪುರದಲ್ಲಿ ಪ್ರಭಾತ್ ಫಿಲ್ಮ್ ಕಂಪನಿಯನ್ನು ಆರಂಭಿಸಿದರು.1933 ರಲ್ಲಿ ಅವರು ಪುಣೆಗೆ ಸ್ಥಳಾಂತರಗೊಂಡ ನಂತರ ಮರಾಠಿಯ ಮೊದಲ ಟಾಕಿ ಅಯೋಧ್ಯೆಚಾ ರಾಜಾ (1932) ಸಿನಿಮಾವನ್ನು ನಿರ್ದೇಶಿಸಿದರು.ಅವರ ಅಮೃತ್ ಮಂತನ್ (1934) ಸಿನಿಮಾ ಅವರಿಗೆ ಸಾಕಷ್ಟು ಹೆಸರನ್ನು ತಂದುಕೊಟ್ಟಿತು.
ಆರು ದಶಕಗಳ ಕಾಲ ತಮ್ಮ ವಿಶಿಷ್ಟ ಚಿತ್ರಗಳ ಮೂಲಕ ಚಿತ್ರರಂಗವನ್ನು ಶ್ರೀಮಂತಗೊಳಿಸಿದ ಶಾಂತಾರಾಂ ಅವರಿಗೆ ದಾದಾಸಾಹೇಬ್ ಫಾಲ್ಕೆ ಪುರಸ್ಕಾರ, ಪದ್ಮವಿಭೂಷಣ ಮತ್ತು ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳು ಲಭಿಸಿದವು. ಮಹಾರಾಷ್ಟ್ರ ಸರ್ಕಾರವು ಅವರ ಹೆಸರಿನಲ್ಲಿ ಪ್ರಶಸ್ತಿಯನ್ನು ಸ್ಥಾಪಿಸಿತು. 1990ರ ಅಕ್ಟೋಬರ್ 30ರಂದು ಮುಂಬೈನಲ್ಲಿ ಅವರು ನಿಧನರಾದರೂ, ಅವರ ಕೊಡುಗೆಗಳು ಭಾರತೀಯ ಚಿತ್ರರಂಗದಲ್ಲಿ ಶಾಶ್ವತವಾಗಿವೆ.