Girls Education facts : ಅಧ್ಯಯನ ವಿಚಾರ ಬಂದಾಗ ಪ್ರತಿ ವರ್ಷ ಹೆಣ್ಣು ಮಕ್ಕಳದ್ದೇ ಮೇಲುಗೈ ಇರುತ್ತದೆ. ಹೆಚ್ಚಿನ ಅಂಕ ಪಡೆದ ಪಟ್ಟಿಯಲ್ಲಿ ಯುವತಿಯರ ಹೆಸರು ಹೆಚ್ಚು ಕೇಳಿ ಬರುತ್ತದೆ. ಈ ಕುರಿತು ಸಂಶೋಧನೆಯನ್ನು ನಡೆಸಲಾಗಿದ್ದು, ಅದರಲ್ಲಿ ಹುಡುಗಿಯರು ನಿಜವಾಗಿಯೂ ಹುಡುಗರಿಗಿಂತ ಅಧ್ಯಯನದಲ್ಲಿ ಬುದ್ಧಿವಂತರೇ ಎಂದು ತಿಳಿಯಲು ಪ್ರಯತ್ನಿಸಲಾಗಿದೆ?
ಶಾಲೆ ಮತ್ತು ಕಾಲೇಜಿನಲ್ಲಿ ಹುಡುಗಿಯರು ಹುಡುಗರಿಗಿಂತ ಉತ್ತಮ ಅಂಕಗಳನ್ನು ಏಕೆ ಪಡೆಯುತ್ತಾರೆ.. ನೀವು ಎಂದಾದರೂ ಈ ಬಗ್ಗೆ ಯೋಚಿಸಿದ್ದೀರಾ..? ಅನೇಕ ಪೋಷಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಹ ಈ ಪ್ರಶ್ನೆಯ ಬಗ್ಗೆ ತಲೆಕಡಿಸಿಕೊಂಡಿದ್ದಾರೆ.. ಇದೀಗ ರಾಜ್‌ಕೋಟ್‌ನ ಸೌರಾಷ್ಟ್ರ ವಿಶ್ವವಿದ್ಯಾಲಯ ಈ ಕುರಿತು ಆಳವಾದ ಅಧ್ಯಯನ ನಡೆಸಿದೆ.
ಈ ಸಂಶೋಧನೆಯು 2340 ವಿದ್ಯಾರ್ಥಿನಿಯರ ಅಧ್ಯಯನ, ಅಭ್ಯಾಸಗಳು ಮತ್ತು ಯಶಸ್ಸಿನ ಹಿಂದಿನ ಗುಪ್ತ ಕಾರಣಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿತ್ತು.. ಕೊನೆಗೆ ಸಂಶೋಧನೆಯಿಂದ ಬಂದ ವರದಿ ನೋಡಿದರೆ ನಿಮಗೂ ಆಶ್ಚರ್ಯವಾಗಬಹುದು. ಹುಡುಗಿಯರ ಯಶಸ್ಸು ಕೇವಲ ಕಾಕತಾಳೀಯವಲ್ಲ, ಅದರ ಹಿಂದೆ ಹಲವು ಮಾನಸಿಕ, ಸಾಮಾಜಿಕ ಮತ್ತು ವೈಜ್ಞಾನಿಕ ಕಾರಣಗಳಿವೆ.
ಹೌದು.. ಹುಡುಗಿಯರು ಹೆಚ್ಚು ಆತ್ಮವಿಶ್ವಾಸ ಹೊಂದಿರುತ್ತಾರೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ವಿದ್ಯಾರ್ಥಿನಿಯರಿಗೆ ತಮ್ಮ ಸಾಮರ್ಥ್ಯಗಳಲ್ಲಿ ಹೆಚ್ಚಿನ ವಿಶ್ವಾಸವಿರುತ್ತದೆ ಮತ್ತು ಅದಕ್ಕಾಗಿಯೇ ಅವರು ಅಧ್ಯಯನದಲ್ಲಿ ಉತ್ತಮರಾಗಿರುತ್ತಾರೆ. ಅಧ್ಯಯನದ ವಿಚಾರದಲ್ಲಿ ಎಂದಿಗೂ ಹಿಂದುಳಿಯಲು ಅವರು ಬಯಸುವುದಿಲ್ಲ.
ತಮ್ಮ ಅಧ್ಯಯನದಲ್ಲಿ ಹೆಚ್ಚು ಆತ್ಮವಿಶ್ವಾಸ ಹೊಂದಿರುತ್ತಾರೆ ಎಂದು ಶೇ. 91 ರಷ್ಟು ವಿದ್ಯಾರ್ಥಿನಿಯರು ಒಪ್ಪಿಕೊಂಡಿದ್ದಾರೆ ಎಂದು ಅಧ್ಯಯನವು ಬಹಿರಂಗಪಡಿಸಿದೆ. 81% ಹುಡುಗಿಯರು ತಮ್ಮ ಅಧ್ಯಯನಕ್ಕಾಗಿಯೇ ಹೆಚ್ಚು ಸಮಯ ನೀಡುವುದಾಗಿ ಹೇಳಿದ್ದಾರೆ. ವಾಸ್ತವವಾಗಿ, ಆತ್ಮವಿಶ್ವಾಸ ಮತ್ತು ಸಮರ್ಪಣೆ ಯಶಸ್ಸಿನ ಮೊದಲ ಹೆಜ್ಜೆಗಳಾಗಿವೆ. ಇದು ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ.
95.50% ವಿದ್ಯಾರ್ಥಿನಿಯರು ತಮ್ಮನ್ನು ತಾವು ಸಾಬೀತುಪಡಿಸಿಕೊಳ್ಳಲು ತಮ್ಮ ಅಧ್ಯಯನದಲ್ಲಿ ಉತ್ತಮ ಅಂಕಗಳನ್ನು ಪಡೆಯಲು ಬಯಸುತ್ತಾರೆ ಎಂದು ಒಪ್ಪಿಕೊಂಡಿದ್ದಾರೆ. ತಮ್ಮ ಕನಸುಗಳನ್ನು ನನಸಾಗಿಸಲು ಶಿಕ್ಷಣವೊಂದೇ ಏಕೈಕ ಮಾರ್ಗ ಎಂದು ಅವರು ಅರಿತುಕೊಂಡಿದ್ದಾರೆ.
ಈ ಸಂಶೋಧನೆಯಿಂದ ಹೊರಹೊಮ್ಮಿದ ಮತ್ತೊಂದು ಕುತೂಹಲಕಾರಿ ವಿಷಯವೆಂದರೆ ಹುಡುಗಿಯರು ಅಧ್ಯಯನದ ವಿಷಯಕ್ಕೆ ಬಂದಾಗ ಹೆಚ್ಚು ಗಂಭೀರ ಮತ್ತು ಸ್ಥಿರವಾಗಿರುತ್ತಾರೆ. ಶೇ. 88 ರಷ್ಟು ವಿದ್ಯಾರ್ಥಿನಿಯರು ತಮ್ಮ ಅಧ್ಯಯನದಲ್ಲಿ ಉತ್ತಮ ಅಂಕಗಳನ್ನು ಪಡೆಯಲು ದೃಢನಿಶ್ಚಯ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಹುಡುಗಿಯರು ಮಾನಸಿಕವಾಗಿ ಹೆಚ್ಚು ಸ್ಥಿರರು ಎಂದು ಶೇ. 92 ರಷ್ಟು ವಿದ್ಯಾರ್ಥಿಗಳು ನಂಬಿದ್ದಾರೆ. ಇದು ಅವರಿಗೆ ದೀರ್ಘಕಾಲದವರೆಗೆ ಗಮನಹರಿಸಲು ಅನುವು ಮಾಡಿಕೊಡುತ್ತದೆ. ಅವರು ವಿಷಯಗಳನ್ನು ಬೇಗನೆ ಅರ್ಥಮಾಡಿಕೊಳ್ಳಲು ಮತ್ತು ಅನೇಕ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಇದು ಒಂದು ದೊಡ್ಡ ಕಾರಣವಾಗಿದೆ.
72.90% ವಿದ್ಯಾರ್ಥಿನಿಯರು ಸಾಮಾಜಿಕ ಮತ್ತು ಕೌಟುಂಬಿಕ ನಿರೀಕ್ಷೆಗಳ ಒತ್ತಡದಲ್ಲಿ ತಮ್ಮ ಅಧ್ಯಯನದಲ್ಲಿ ಹೆಚ್ಚು ಶ್ರಮಿಸುವುದಾಗಿ ಒಪ್ಪಿಕೊಂಡಿದ್ದಾರೆ. 63.10% ವಿದ್ಯಾರ್ಥಿನಿಯರು ತಮ್ಮ ಅಧ್ಯಯನದ ಬಗ್ಗೆ ಹೆಚ್ಚಿನ ಜವಾಬ್ದಾರಿ ಇರುವುದರಿಂದ ಅವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ಹೇಳಿದ್ದಾರೆ.
ವೈಜ್ಞಾನಿಕ ಕಾರಣ : ಈ ಸಂಶೋಧನೆಯು ಸಾಮಾಜಿಕ ಮತ್ತು ಮಾನಸಿಕ ಕಾರಣಗಳನ್ನು ಮಾತ್ರವಲ್ಲದೆ ವೈಜ್ಞಾನಿಕ ಅಂಶವನ್ನೂ ಬಹಿರಂಗ ಪಡಿಸಿದೆ. ಮಹಿಳೆಯರಲ್ಲಿ ಕೆಲವು ಹಾರ್ಮೋನುಗಳ ಬದಲಾವಣೆಗಳು ಅವರ ಸ್ಮರಣಶಕ್ತಿಯ ಮೇಲೆ ಪರಿಣಾಮ ಬೀರುತ್ತವೆ.
ಈಸ್ಟ್ರೊಜೆನ್ ಮತ್ತು ಆಕ್ಸಿಟೋಸಿನ್ ನಂತಹ ಹಾರ್ಮೋನುಗಳು ಅವರ ಮೆದುಳಿನ ಭಾಗಗಳನ್ನು ಸಕ್ರಿಯಗೊಳಿಸುತ್ತವೆ, ಇದು ಸ್ಮರಣಶಕ್ತಿ ಮತ್ತು ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇದಲ್ಲದೆ, ಮಹಿಳೆಯರ ಮೆದುಳಿನ ರಚನೆಯೂ ವಿಭಿನ್ನವಾಗಿದೆ ಎಂದು ವಿಜ್ಞಾನಿಗಳು ನಂಬುತ್ತಾರೆ. ಅವರ ಮೆದುಳಿನ ಹಿಪೊಕ್ಯಾಂಪಸ್ ಭಾಗವು ಪುರುಷರಿಗಿಂತ ಹೆಚ್ಚು ಅಭಿವೃದ್ಧಿ ಹೊಂದಿದ್ದು, ಇದು ಸ್ಮರಣಶಕ್ತಿಯನ್ನು ಹೆಚ್ಚಿಸುತ್ತದೆ.