Gold Price: ದಾಖಲೆ ಮಟ್ಟಕ್ಕೆ ಏರಿದ್ದ ಚಿನ್ನದ ಬೆಲೆಯಲ್ಲಿ ಇತ್ತೀಚೆಗೆ ಸ್ವಲ್ಪ ವಿರಾಮ ಕಂಡುಬಂದಿದೆ. ಇದೇ ವೇಳೆ ಜಗತ್ತಿನ ಹೂಡಿಕೆದಾರರು ಚಿನ್ನದ ಮೇಲೆ ಇನ್ನಷ್ಟು ನಂಬಿಕೆ ಇಟ್ಟಿರುವುದನ್ನು ಇತ್ತೀಚಿನ ಅಂಕಿಅಂಶಗಳು ತೋರಿಸುತ್ತಿವೆ.
1/6Gold Price: 2025ರಲ್ಲಿ ಜಾಗತಿಕವಾಗಿ ಚಿನ್ನದ ಇಟಿಎಫ್‌ಗಳ (Gold ETF) ಮೇಲೆ ಭಾರೀ ಹೂಡಿಕೆ ನಡೆದಿದೆ. ವಿಶ್ವದಾದ್ಯಂತ ಒಟ್ಟು 88.5 ಬಿಲಿಯನ್ ಡಾಲರ್ ಹೂಡಿಕೆ ಚಿನ್ನದ ಇಟಿಎಫ್‌ಗಳಿಗೆ ಹರಿದುಬಂದಿದ್ದು, ಬಂಗಾರ ಇನ್ನೂ ಸುರಕ್ಷಿತ ಹೂಡಿಕೆ ಆಯ್ಕೆಯಾಗಿ ಉಳಿದಿದೆ ಎಂಬುದನ್ನು ಇದು ಸಾಬೀತುಪಡಿಸುತ್ತದೆ.
2/6ಈ ಜಾಗತಿಕ ಹೂಡಿಕೆ ಪ್ರವಾಹದಲ್ಲಿ ಭಾರತವೂ ಪ್ರಮುಖ ಪಾತ್ರ ವಹಿಸಿದೆ. ಭಾರತದ ನಿಪ್ಪಾನ್ ಇಂಡಿಯಾ ಇಟಿಎಫ್ ಗೋಲ್ಡ್ ಬೀಸ್ 2025ರಲ್ಲಿ 1.17 ಬಿಲಿಯನ್ ಡಾಲರ್ ಹೂಡಿಕೆಯನ್ನು ಆಕರ್ಷಿಸಿದ್ದು, ದೇಶದ ಅತಿದೊಡ್ಡ ಚಿನ್ನದ ಇಟಿಎಫ್ ಆಗಿ ಹೊರಹೊಮ್ಮಿದೆ. ಇದರಿಂದ ಈ ನಿಧಿ ವಿಶ್ವದ ಟಾಪ್ 15 ಚಿನ್ನದ ಇಟಿಎಫ್‌ಗಳ ಪಟ್ಟಿಯಲ್ಲೂ ಸ್ಥಾನ ಪಡೆದಿದೆ.
3/6ಚಿನ್ನದ ಇಟಿಎಫ್ ಹೂಡಿಕೆಯಲ್ಲಿ ಭಾರತವು ವಿಶ್ವದ ಮೂರನೇ ಅತಿದೊಡ್ಡ ಮಾರುಕಟ್ಟೆಯಾಗಿ ಹೊರಹೊಮ್ಮಿದೆ. 2025ರಲ್ಲಿ ಭಾರತದಲ್ಲಿ ಒಟ್ಟು 4.37 ಬಿಲಿಯನ್ ಡಾಲರ್ ಮೌಲ್ಯದ ಹೂಡಿಕೆ ಚಿನ್ನದ ಇಟಿಎಫ್‌ಗಳಲ್ಲಿ ನಡೆದಿದೆ. ಈ ಪಟ್ಟಿಯಲ್ಲಿ ಅಮೆರಿಕಾ ಮತ್ತು ಚೀನಾ ಮೊದಲ ಎರಡು ಸ್ಥಾನಗಳನ್ನು ಪಡೆದಿವೆ.
4/6ಜಾಗತಿಕ ಆರ್ಥಿಕ ಅನಿಶ್ಚಿತತೆ, ಕರೆನ್ಸಿ ಚಂಚಲತೆ, ಬಡ್ಡಿದರ ಬದಲಾವಣೆಗಳ ನಿರೀಕ್ಷೆ ಹಾಗೂ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳ ನಡುವೆಯೂ ಹೂಡಿಕೆದಾರರು ಚಿನ್ನದತ್ತ ಹೆಚ್ಚು ಮುಖ ಮಾಡಿದ್ದಾರೆ. 2025ರಲ್ಲಿ ಚಿನ್ನವು ಹೂಡಿಕೆದಾರರ ಪೋರ್ಟ್‌ಫೋಲಿಯೊದಲ್ಲಿ ಪ್ರಮುಖ ಸ್ಥಾನ ಕಾಯ್ದುಕೊಂಡಿದೆ.
5/6ಪ್ರಾಂತ್ಯವಾರು ಹೂಡಿಕೆಯನ್ನು ನೋಡಿದರೆ, ಉತ್ತರ ಅಮೆರಿಕಾದಲ್ಲಿ 50,647 ಮಿಲಿಯನ್ ಡಾಲರ್, ಏಷ್ಯಾದಲ್ಲಿ 25,555 ಮಿಲಿಯನ್ ಡಾಲರ್ ಹಾಗೂ ಯುರೋಪ್‌ನಲ್ಲಿ 11,747 ಮಿಲಿಯನ್ ಡಾಲರ್ ಹೂಡಿಕೆ ದಾಖಲಾಗಿದೆ. ಇದರಲ್ಲಿ ಭಾರತ ಏಷ್ಯಾ ಪ್ರದೇಶದ ಪ್ರಮುಖ ಕೊಡುಗೆದಾರ ರಾಷ್ಟ್ರವಾಗಿದೆ.
6/6ಜಾಗತಿಕವಾಗಿ ಎಸ್‌ಪಿಡಿಆರ್ ಗೋಲ್ಡ್ ಶೇರ್ಸ್ ಅತಿ ಹೆಚ್ಚು 23,361 ಮಿಲಿಯನ್ ಡಾಲರ್ ಹೂಡಿಕೆಯನ್ನು ಆಕರ್ಷಿಸಿದ್ದು, ಐಶೇರ್ಸ್ ಗೋಲ್ಡ್ ಟ್ರಸ್ಟ್ 11,150 ಮಿಲಿಯನ್ ಡಾಲರ್ ಹೂಡಿಕೆಯೊಂದಿಗೆ ಮುಂದುವರಿದಿದೆ. ಭಾರತದಲ್ಲಿ ಚಿನ್ನದ ಇಟಿಎಫ್‌ಗಳ ಜನಪ್ರಿಯತೆ ಹೆಚ್ಚುತ್ತಿರುವುದು, ಹೂಡಿಕೆದಾರರು ಭೌತಿಕ ಚಿನ್ನಕ್ಕಿಂತ ನಿಯಂತ್ರಿತ ಮತ್ತು ಸುರಕ್ಷಿತ ಹೂಡಿಕೆ ಮಾರ್ಗಗಳನ್ನು ಆರಿಸಿಕೊಳ್ಳುತ್ತಿರುವುದಕ್ಕೆ ಸ್ಪಷ್ಟ ಸೂಚನೆ ಎನ್ನಲಾಗಿದೆ.