ಕೇಂದ್ರ ಸರ್ಕಾರಿ ನೌಕರರು ತುಟ್ಟಿಭತ್ಯೆ ಹೆಚ್ಚಳದ ನಿರೀಕ್ಷೆಯಲ್ಲಿದ್ದಾರೆ. ಇದು ೭ನೆ ವೇತನ ಆಯೋಗದ ಕೊನೆಯ ತುಟ್ಟಿಭತ್ಯೆ ಎಂದು ಹೇಳಲಾಗುತ್ತಿದೆ. ಈ ಮಧ್ಯೆ,
ಕೋವಿಡ್-19 ಸಾಂಕ್ರಾಮಿಕ ರೋಗದ ಸಮಯದಲ್ಲಿ ಸ್ಥಗಿತಗೊಳಿಸಲಾದ 18 ತಿಂಗಳ ಡಿಎ ಬಾಕಿ ಸಿಗುತ್ತದೆಯೇ ಎನ್ನುವ ಚರ್ಚೆ ಮತ್ತೊಮ್ಮೆ ಆರಂಭವಾಗಿದೆ.
ಕೇಂದ್ರ ಸರ್ಕಾರಿ ನೌಕರರು ಡಿಎ ಹೆಚ್ಚಳದ ನಿರೀಕ್ಷೆಯಲ್ಲಿದ್ದಾರೆ. ಜನವರಿಯಲ್ಲಿ ಅತಿ ಕಡಿಮೆ ತುಟ್ಟಿಭತ್ಯೆ ಹೆಚ್ಚಳವಾಗಿದ್ದು, ಈ ಬಾರಿ ದೊಡ್ಡ ಮಟ್ಟದಲ್ಲಿ ತುಟ್ಟಿಭತ್ಯೆ ಏರಿಕೆಯಾಗಲಿದೆ ಎನ್ನುವ ಅಂದಾಜು.
ಈ ನಡುವೆ ರಾಷ್ಟ್ರೀಯ ಮಂಡಳಿಯ ಸ್ಥಾಯಿ ಸಮಿತಿಯ 63 ನೇ ಸಭೆಯು ದೆಹಲಿಯ ಕೆ.ಜಿ. ಮಾರ್ಕ್‌ನಲ್ಲಿರುವ ನಾಗರಿಕ ಸೇವಾ ಅಧಿಕಾರಿಗಳ ಸಂಸ್ಥೆಯಲ್ಲಿ (CSOI) ನಡೆಯಿತು.ಈ ಸಭೆಯಲ್ಲಿ, ಕೇಂದ್ರ ಸರ್ಕಾರಿ ನೌಕರರಿಗೆ ಸಂಬಂಧಿಸಿದ ಹಲವಾರು ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲಾಯಿತು.
ಸಭೆಯಲ್ಲಿ, ನೌಕರರು ಮಾರ್ಚ್ 2020 ರಿಂದ ಜೂನ್ 2021 ರವರೆಗಿನ 18 ತಿಂಗಳ ಬಾಕಿ ತುಟ್ಟಿ ಭತ್ಯೆ ಮತ್ತು ಪಿಂಚಣಿದಾರರ ತುಟ್ಟಿ ಪರಿಹಾರವನ್ನು ಹಿಂತಿರುಗಿಸಬೇಕು ಒತ್ತಾಯಿಸಿದ್ದಾರೆ.
ಆದರೆ ಹಣಕಾಸು ಸಚಿವಾಲಯವು ತನ್ನ ಹಿಂದಿನ ನಿಲುವನ್ನು ಪುನರುಚ್ಚರಿಸಿದೆ. ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಹಾಗಾಗಿ ಡಿಎ/ಡಿಆರ್ ಬಾಕಿ ಪಾವತಿಸಲು ಸಾಧ್ಯವಿಲ್ಲ ಎಂದು ಸರ್ಕಾರ ಹೇಳಿದೆ.
8ನೇ ವೇತನ ಆಯೋಗದ ರಚನೆ ಮತ್ತು ಅದರ ಕಾರ್ಯಾವಧಿಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ಆಯೋಗದ ಅಧ್ಯಕ್ಷರು ಮತ್ತು ಸದಸ್ಯರನ್ನು ಶೀಘ್ರದಲ್ಲೇ ನೇಮಿಸಿ, ಟಿಒಆರ್ ಹೊರಡಿಸುವಂತೆ ನೌಕರರು ಸರ್ಕಾರವನ್ನು ಒತ್ತಾಯಿಸಿದರು.
ಸಭೆಯಲ್ಲಿ ಚರ್ಚಿಸಲಾದ ಮತ್ತೊಂದು ಪ್ರಮುಖ ವಿಷಯವೆಂದರೆ ಕೇಂದ್ರ ಸರ್ಕಾರಿ ನೌಕರರ ಗುಂಪು ವಿಮಾ ಯೋಜನೆ (CGEGIS). ಈ ವಿಮಾ ಯೋಜನೆಗೆ ಸಂಬಂಧಿಸಿದಂತೆ ಹೊಸ ಯೋಜನೆಯನ್ನು ಸಿದ್ಧಪಡಿಸಲಾಗಿದ್ದು, ಅದನ್ನು ಶೀಘ್ರದಲ್ಲೇ ನೌಕರರೊಂದಿಗೆ ಹಂಚಿಕೊಳ್ಳಲಾಗುವುದು ಎಂದು ವೆಚ್ಚ ಇಲಾಖೆ ತಿಳಿಸಿದೆ.