9 ಪಂದ್ಯ, 9 ನಗರ, 8400 ಕಿಮೀ ಪ್ರಯಾಣ: 2023ರ ವಿಶ್ವಕಪ್ ಗೆಲ್ಲಲು ಟೀಂ ಇಂಡಿಯಾ ದಾಟಬೇಕು ಈ ಹಾದಿ!
ರೋಹಿತ್ ಶರ್ಮಾ ನಾಯಕತ್ವದ ಭಾರತ ಕ್ರಿಕೆಟ್ ತಂಡ ಮುಂಬರುವ ಏಕದಿನ ವಿಶ್ವಕಪ್‌ನಲ್ಲಿ 34 ದಿನಗಳಲ್ಲಿ 9 ನಗರಗಳಲ್ಲಿ 9 ಲೀಗ್ ಪಂದ್ಯಗಳನ್ನು ಆಡಲು ಸುಮಾರು 8400 ಕಿಲೋಮೀಟರ್ ಪ್ರಯಾಣಿಸಲಿದೆ. ಮತ್ತೊಂದೆಡೆ, ಭಾರತ ಸೆಮಿಫೈನಲ್ ಮತ್ತು ನಂತರ ಫೈನಲ್ ತಲುಪಿದರೆ, ಈ ಪ್ರಯಾಣವು 42 ದಿನಗಳಲ್ಲಿ 11 ಪಂದ್ಯಗಳಲ್ಲಿ 9700 ಕಿಲೋಮೀಟರ್ ಆಗಲಿದೆ.
ಭಾರತದ ಪಂದ್ಯಗಳು ರಾತ್ರಿ 11 ಗಂಟೆಯ ಸುಮಾರಿಗೆ ಕೊನೆಗೊಳ್ಳುತ್ತವೆ. ಆದರೆ ಪ್ರತಿ ಮೂರನೇ ದಿನ ತಂಡವು ವಿಮಾನವನ್ನು ಏರಬೇಕು. 100 (50+50) ಓವರ್ ಗಳ ಪಂದ್ಯವಾದ ಕಾರಣ ಆಟಗಾರರು ಸಾಕಷ್ಟು ಸುಸ್ತಾಗಿರುತ್ತಾರೆ. ಭಾರತೀಯ ತಂಡವು ಸಾಮಾನ್ಯವಾಗಿ ತಮ್ಮ ತಾಯ್ನಾಡಿನಲ್ಲಿ ಆಡುವಾಗ ಚಾರ್ಟರ್ ಫ್ಲೈಟ್ ಗಳನ್ನು ಉಪಯೋಗಿಸುತ್ತದೆ. ಆದರೆ ಅದು ಯಾವಾಗಲೂ ಲಭ್ಯವಿರುವುದಿಲ್ಲ.
ಭಾರತ ತಂಡವು ಎಲ್ಲಾ ಒಂಬತ್ತು ನಗರಗಳಲ್ಲಿ ಲೀಗ್ ಪಂದ್ಯಗಳನ್ನು ಆಡುವ ಏಕೈಕ ತಂಡವಾಗಿದೆ. ಉಳಿದ ಪ್ರಮುಖ ತಂಡಗಳು ಒಂದು ನಗರದಲ್ಲಿ ಕನಿಷ್ಠ ಎರಡು ಪಂದ್ಯಗಳನ್ನು ಆಡುತ್ತವೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯಕ್ಕಾಗಿ ಚೆನ್ನೈ ತಲುಪಿದ ನಂತರ, ಭಾರತ ತಂಡವು ಚೆನ್ನೈನಿಂದ ದೆಹಲಿಗೆ (1761 ಕಿಮೀ), ದೆಹಲಿಯಿಂದ ಅಹಮದಾಬಾದ್ (775 ಕಿಮೀ), ಅಹಮದಾಬಾದ್ ನಿಂದ ಪುಣೆ (516 ಕಿಮೀ), ಪುಣೆಯಿಂದ ಧರ್ಮಶಾಲಾ (1936 ಕಿಮೀ), ಧರ್ಮಶಾಲಾದಿಂದ ಲಕ್ನೋಗೆ ಪ್ರಯಾಣ ಬೆಳೆಸಲಿದೆ. (748 ಕಿಮೀ) ಕಿಮೀ), ಲಕ್ನೋದಿಂದ ಮುಂಬೈ (1190 ಕಿಮೀ), ಮುಂಬೈನಿಂದ ಕೋಲ್ಕತ್ತಾ (1652 ಕಿಮೀ) ಮತ್ತು ಕೋಲ್ಕತ್ತಾದಿಂದ ಬೆಂಗಳೂರು (1544 ಕಿಮೀ). ಹೀಗೆ ಒಟ್ಟು ಪ್ರಯಾಣವು 8361 ಕಿ.ಮೀ. ಆಗಲಿದೆ
ಬಿಸಿಸಿಐ ಅಧಿಕಾರಿಯೊಬ್ಬರು ಪಿಟಿಐಗೆ ಮಾಹಿತಿ ನೀಡಿದ್ದು, “ಭಾರತ ತಂಡಕ್ಕೆ ಸಂಬಂಧಿಸಿದಂತೆ, ಯಾವೊಬ್ಬ ಆಟಗಾರನು ತನ್ನ ತವರಿನಲ್ಲಿ ಆಟವಾಡುವ ಅವಕಾಶವನ್ನು ನಿರಾಕರಿಸಲಾಗುವುದಿಲ್ಲ. ಅದಕ್ಕಾಗಿಯೇ ವೇಳಾಪಟ್ಟಿ ತುಂಬಾ ಬ್ಯುಸಿಯಾಗಿದೆ” ಎಂದು ಹೇಳಿದ್ದಾರೆ.
ಹೈದರಾಬಾದ್, ಚೆನ್ನೈ, ಕೋಲ್ಕತ್ತಾ ಮತ್ತು ಬೆಂಗಳೂರಿನಲ್ಲಿ ಪಾಕಿಸ್ತಾನ ತಲಾ ಎರಡು ಪಂದ್ಯಗಳನ್ನು ಆಡಬೇಕಿದೆ. ಅಕ್ಟೋಬರ್ 15 ರಂದು ಅಹಮದಾಬಾದ್ ನಲ್ಲಿ ಭಾರತ ವಿರುದ್ಧದ ಪಂದ್ಯ ನಡೆಯಲಿದೆ. ಬಾಬರ್ ಆಜಮ್ ತಂಡವು ಒಟ್ಟು 6849 ಕಿಲೋಮೀಟರ್ ದೂರ ಕ್ರಮಿಸಲಿದೆ. ಹೈದರಾಬಾದ್ ಮತ್ತು ಚೆನ್ನೈನಲ್ಲಿ ಪೂರ್ಣ ವಾರದ ಸಮಯವನ್ನು ಪಡೆಯಲಿದೆ. ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ಕೂಡ ಭಾರತಕ್ಕಿಂತ ಕಡಿಮೆ ಪ್ರಯಾಣಿಸಬೇಕಿದೆ. ಆಸ್ಟ್ರೇಲಿಯಾ 6907 ಕಿಲೋಮೀಟರ್ ಪ್ರಯಾಣಿಸಬೇಕಾಗಿದೆ. ಮತ್ತೊಂದೆಡೆ ಇಂಗ್ಲೆಂಡ್ ತಂಡವು 8171 ಕಿಲೋಮೀಟರ್ ಪ್ರಯಾಣಿಸಲಿದೆ.