Bank Merger in India: ಕೇಂದ್ರ ಸರ್ಕಾರವು ಬ್ಯಾಂಕಿಂಗ್ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ತರಲು ಮುಂದಾಗಿದೆ. ಸಣ್ಣ ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ದೊಡ್ಡ ಬ್ಯಾಂಕುಗಳೊಂದಿಗೆ ವಿಲೀನಗೊಳಿಸುವ ಮಹತ್ವದ ಯೋಜನೆಯನ್ನು ಸರ್ಕಾರ ರೂಪಿಸಿದೆ. ಇದರಿಂದಾಗಿ ದೇಶದ ಬ್ಯಾಂಕಿಂಗ್ ವ್ಯವಸ್ಥೆ ಮತ್ತಷ್ಟು ಬಲಿಷ್ಠವಾಗಲಿದ್ದು, 2027ರೊಳಗೆ ಈ ವಿಲೀನ ಪ್ರಕ್ರಿಯೆಯನ್ನು ಅಂತಿಮಗೊಳಿಸುವ ಗುರಿ ಇದೆ.
ಸರ್ಕಾರದ ಮೂಲಗಳ ಪ್ರಕಾರ, ಇಂಡಿಯನ್ ಓವರ್‌ಸೀಸ್ ಬ್ಯಾಂಕ್ (IOB), ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (CBI), ಬ್ಯಾಂಕ್ ಆಫ್ ಇಂಡಿಯಾ (BOI) ಮತ್ತು ಬ್ಯಾಂಕ್ ಆಫ್ ಮಹಾರಾಷ್ಟ್ರ (BOM)ವನ್ನ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB), ಬ್ಯಾಂಕ್ ಆಫ್ ಬರೋಡಾ (BOB) ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಂತಹ (SBI) ದೈತ್ಯ ಬ್ಯಾಂಕ್‌ಗಳೊಂದಿಗೆ ವಿಲೀನಗೊಳಿಸುವ ಪ್ರಸ್ತಾವನೆ ಸಿದ್ಧವಾಗಿದೆ.
ಈ ಕುರಿತ ಚರ್ಚೆ ನಡೆಸಿ 2027ರೊಳಗೆ ವಿಲೀನವನ್ನ ಅಂತಿಮಗೊಳಿಸುವ ಸಂಬಂಧ ರೂಪುರೇಷೆ ಸಿದ್ಧಪಡಿಸುವ ಗುರಿ ಹೊಂದಲಾಗಿದೆ. ಈ ವಿಲೀನ ಪ್ರಸ್ತಾವನೆಯ ಕುರಿತ ಅಧಿಕೃತ ಚರ್ಚೆಯ ದಾಖಲೆಯನ್ನ ಮೊದಲು ಸಂಪುಟ ಸಭೆಯಲ್ಲಿ ಚರ್ಚಿಸಿ, ನಂತರ ಪ್ರಧಾನ ಮಂತ್ರಿ ಕಚೇರಿಯ (PMO) ಪರಿಶೀಲನೆಗೆ ಕಳುಹಿಸಲಾಗುತ್ತದೆ. ಬಳಿಕ ಸಂಬಂಧಪಟ್ಟ ಬ್ಯಾಂಕ್‌ಗಳ ಅಭಿಪ್ರಾಯ ಪಡೆದು, ಆಂತರಿಕವಾಗಿ ಒಮ್ಮತ ಮೂಡಿದ ನಂತರವೇ ಸರ್ಕಾರ ಈ ಬಗ್ಗೆ ಅಧಿಕೃತ ಘೋಷಣೆ ಮಾಡುವ ಸಾಧ್ಯತೆಯಿದೆ.
ಈ ಹಿಂದೆ 2017ರಿಂದ 2020ರ ನಡುವೆ ಕೇಂದ್ರ ಸರ್ಕಾರ 10 ಸಾರ್ವಜನಿಕ ವಲಯದ ಬ್ಯಾಂಕ್‌ಗಳನ್ನ ನಾಲ್ಕು ದೊಡ್ಡ ಬ್ಯಾಂಕ್‌ಗಳಾಗಿ ವಿಲೀನಗೊಳಿಸಿತ್ತು. ಇದರಿಂದ ದೇಶದಲ್ಲಿದ್ದ 27 ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಸಂಖ್ಯೆ 12ಕ್ಕೆ ಇಳಿಕೆ ಕಂಡಿತ್ತು. ಈ ಸಂದರ್ಭದಲ್ಲಿ ಸಿಂಡಿಕೇಟ್ ಬ್ಯಾಂಕ್ ಅನ್ನ ಕೆನರಾ ಬ್ಯಾಂಕ್‌ನೊಂದಿಗೆ ವಿಲೀನಗೊಳಿಸಿದ್ದರೆ, ಒರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾವನ್ನ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB)ಯಲ್ಲಿ ವಿಲೀನ ಮಾಡಲಾಗಿತ್ತು.
ನೀತಿ ಆಯೋಗದ ಶಿಫಾರಸುಗಳ ಹಿನ್ನೆಲೆ ಈ ಬಾರಿ ಮತ್ತೆ ಬ್ಯಾಂಕ್ ವಿಲೀನಕ್ಕೆ ಮತ್ತೆ ಚಾಲನೆ ನೀಡಲಾಗುತ್ತಿದೆ. SBI, PNB, BOB ಮತ್ತು ಕೆನರಾ ಬ್ಯಾಂಕ್‌ನಂತಹ ಕೆಲವೇ ಕೆಲವು ದೊಡ್ಡ ಸರ್ಕಾರಿ ಬ್ಯಾಂಕ್‌ಗಳನ್ನ ಮಾತ್ರ ಉಳಿಸಿಕೊಂಡು, ಉಳಿದ ಸಣ್ಣ ಬ್ಯಾಂಕ್‌ಗಳನ್ನ ಖಾಸಗೀಕರಣಗೊಳಿಸಲು ಅಥವಾ ವಿಲೀನಗೊಳಿಸಲು ನೀತಿ ಆಯೋಗ ಈ ಹಿಂದೆ ಶಿಫಾರಸು ಮಾಡಿತ್ತು.
ಖಾಸಗಿ ಬ್ಯಾಂಕ್‌ಗಳು ಮತ್ತು ಫಿನ್‌ಟೆಕ್ ಕಂಪನಿಗಳಿಂದ ಹೆಚ್ಚುತ್ತಿರುವ ಸ್ಪರ್ಧೆಯನ್ನ ಎದುರಿಸಲು ಸಾರ್ವಜನಿಕ ವಲಯದ ಬ್ಯಾಂಕ್‌ಗಳನ್ನ ಜಾಗತಿಕ ಮಟ್ಟದಲ್ಲಿ ಬಲಪಡಿಸುವುದು ಕೇಂದ್ರ ಸರ್ಕಾರದ ಮುಖ್ಯ ಉದ್ದೇಶವಾಗಿದೆ.