Weight Loss: ತೂಕ ಇಳಿಕೆಗಾಗಿ ಜಿಮ್, ವ್ಯಾಯಾಮ, ವಾಕಿಂಗ್, ಡಯಟ್ ಎಂದು ನೂರಾರು ಕಸರತ್ತು ನಡೆಸುವ ಜನ ಕೆಲವು ಸಾಮಾನ್ಯ ತಪ್ಪುಗಳಿಂದಾಗಿ ತೂಕ ಇಳಿಕೆ ಪ್ರಯಾಣದಲ್ಲಿ ಎಡವುತ್ತಾರೆ.
ತೂಕ ಇಳಿಕೆ ಇಂದಿನ ಕಾಲಮಾನದಲ್ಲಿ ಬಹುತೇಕ ಜನರನ್ನು ಕಾಡುತ್ತಿರುವ ಸಾಮಾನ್ಯ ಸಮಸ್ಯೆ ಆಗಿದೆ. ತೂಕ ಇಳಿಕೆಗಾಗಿ ಬೆಲ್ಲಿ ಫ್ಯಾಟ್ ಕರಗಿಸುವ ಸಲುವಾಗಿ ಜನರು ಮಾಡುವ ಸರ್ಕಸ್ ಒಂದೆರಡಲ್ಲ. ಆದರೆ, ಇದರೊಂದಿಗೆ ಮಾಡುವ ಕೆಲವು ಸಾಮಾನ್ಯ ತಪ್ಪುಗಳಿಂದಾಗಿ ನಿರೀಕ್ಷಿತ ಮಟ್ಟದಲ್ಲಿ ತೂಕ ಇಳಿಕೆ ಆಗುವುದಿಲ್ಲ.
ಹೌದು, ತೂಕ ಇಳಿಕೆಗೆ ಸಹಕಾರಿ ಆಗಲಿದೆ ಎಂದು ಭಾವಿಸಿ ಜನರು ಮಾಡುವ ಕೆಲವು ಸಾಮಾನ್ಯವಾದ ತಪ್ಪುಗಳು ತೂಕ ಇಳಿಕೆಯ ವೇಗವನ್ನು ನಿಧಾನಗೊಳಿಸುತ್ತದೆ. ಅಂತಹ ಮೂರು ಸಾಮಾನ್ಯ ತಪ್ಪುಗಳ ಬಗ್ಗೆ ತಿಳಿಯಲು ಮುಂದೆ ಓದಿ.
ತೂಕ ಇಳಿಕೆ ಮಾಡಲು ಯೋಚಿಸುವವರು ಮೊದಲಿಗೆ ತಿನ್ನುವ ಆಹಾರವನ್ನು ಕಡಿಮೆ ಮಾಡಲು ಯೋಚಿಸುತ್ತಾರೆ. ಆಲೋಚನೆ ಏನೋ ಸರಿಯೇ. ಆದರೆ, ಆಹಾರವನ್ನು ಕಡಿಮೆ ಮಾಡಬೇಕೋ ಹೊರತು, ಅದನ್ನು ಬಿಡಬಾರದು. ಬೆಳಿಗ್ಗೆ ಉಪಹಾರ ತಿನ್ನದಿರುವುದು ಅಥವಾ ತಡವಾಗಿ ಉಪಹಾರ ಸೇವಿಸುವುದರಿಂದ ದೇಹವು 'ಹಂಗರ್ ಮೂಡ್'ಗೆ ಹೋಗುತ್ತದೆ. ಇದು ತೂಕ ಇಳಿಕೆ ಬದಲಿಗೆ ಒಮ್ಮೆ ಆಹಾರ ತಿನ್ನುವಾಗ ಅಧಿಕ ಆಹಾರ ಸೇವನೆಗೆ ಪ್ರಚೋದಿಸುವುದರಿಂದ ತೂಕ ಹೆಚ್ಚಾಗುವ ಅಪಾಯವೇ ಹೆಚ್ಚು.
ಬೆಳಿಗ್ಗೆ ಕಣ್ ಬಿಟ್ಟ ತಕ್ಷಣ ದೇವರನ್ನು ನೋಡುತ್ತಾರೋ ಇಲ್ಲವೋ... ಪ್ರತಿಯೊಬ್ಬರಿಗೂ ಮೊಬೈಲ್ ನೋಡುವ ಅಭ್ಯಾಸ ಇದ್ದೇ ಇರುತ್ತದೆ. ಬೆಳಿಗ್ಗೆ ಎದ್ದ ಕೂಡಲೇ ಮೊಬೈಲ್ ನೋಡುವುದರಿಂದ ನಮ್ಮ ಸ್ಟ್ರೆಸ್ ಹಾರ್ಮೋನ್ ಎಂದರೆ ಕಾರ್ಟಿಸೋಲ್ ಹೆಚ್ಚಾಗುತ್ತದೆ. ಇದರಿಂದ ನಮ್ಮ ಮೆಟಬಾಲಿಸಂ ನಿಧಾನಗೊಳ್ಳುತ್ತದೆ. ಇದು ಸಹಜವಾಗಿ ತೂಕ ಇಳಿಕೆಯನ್ನು ಕೂಡ ನಿಧಾನಗೊಳಿಸುತ್ತದೆ.
ಬೆಳಿಗ್ಗೆ ಎದ್ದ ಕೂಡಲೇ ಬೆಡ್ ಕಾಫಿ/ಟೀ ಕುಡಿಯುವ ಅಭ್ಯಾಸ ಕೆಲವರಿಗೆ ಇರುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಟೀ ಅಥವಾ ಕಾಫಿ ಕುಡಿಯುವುದರಿಂದ ದೇಹದಲ್ಲಿ ಅಸಿಡಿಟಿ ಹೆಚ್ಚಾಗುತ್ತದೆ. ಅಲ್ಲದೆ, ಮೆಟಬಾಲಿಸಂ ಕೂಡ ನಿಧಾನವಾಗುವುದರಿಂದ ಇದು ತೂಕ ಇಳಿಕೆ, ಬೊಜ್ಜು ಕರಗಿಸುವ ಪ್ರಕ್ರಿಯೆಯನ್ನೂ ಕೂಡ ನಿಧಾನಗೊಳಿಸುತ್ತದೆ.
ನೀವು ಕೂಡ ತೂಕ ಇಳಿಕೆ ಪ್ರಯತ್ನದಲ್ಲಿದ್ದರೆ, ಹೊಟ್ಟೆಯ ಸುತ್ತಲಿನ ಬೊಜ್ಜನ್ನು ಕರಗಿಸಲು ಬಯಸಿದರೆ ಯಾವುದೇ ಕಾರಣಕ್ಕೂ ಈ ಮೂರು ತಪ್ಪುಗಳನ್ನು ಮಾಡಬೇಡಿ. ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.