ಕ್ರಿಕೆಟ್ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಸಿಕ್ಸರ್ ಬಾರಿಸಿದ ಟೀಂ ಇಂಡಿಯಾದ ಕ್ರಿಕೆಟಿಗ ಯಾರು ಗೊತ್ತಾ?
ಇಂದಿನ ದಿನಗಳಲ್ಲಿ ಕ್ರಿಕೆಟ್ ಸಾಕಷ್ಟು ಬದಲಾಗಿದೆ. ಸ್ವರೂಪ ಯಾವುದೇ ಆಗಿರಲಿ, ಬ್ಯಾಟ್ಸ್‌ಮನ್‌ಗಳು ಆಕ್ರಮಣಕಾರಿ ಶೈಲಿಯಲ್ಲಿ ಸಿಕ್ಸರ್, ಬೌಂಡರಿಗಳ ಸುರಿಮಳೆಗೈಯುತ್ತಾರೆ. ಟೆಸ್ಟ್, ಏಕದಿನ ಅಥವಾ ಟಿ20 ಇರಲಿ, ಈಗ ಕ್ರಿಕೆಟ್‌ನಲ್ಲಿ ಸಿಕ್ಸರ್ ಬಾರಿಸುವುದು ಸಾಮಾನ್ಯವಾಗಿದೆ.
ಆದರೆ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ಪರ ಮೊದಲ ಸಿಕ್ಸರ್ ಹೊಡೆದವರು ಯಾರು ಗೊತ್ತಾ? ಈ ವರದಿಯಲ್ಲಿ ಸಂಕ್ಷಿಪ್ತ ಮಾಹಿತಿ ನೀಡಲಾಗಿದೆ.
ಬ್ರಿಟಿಷರು ಭಾರತವನ್ನು ಹಲವು ವರ್ಷಗಳಿಂದ ಆಳಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. 1947 ಆಗಸ್ಟ್ 15 ರಂದು ಭಾರತ ಬ್ರಿಟಿಷರಿಂದ ಮುಕ್ತವಾಗಿ ಸ್ವಾತಂತ್ರ್ಯ ಪಡೆಯಿತು. ಇನ್ನು ಸ್ವಾತಂತ್ರ್ಯಕ್ಕೂ ಮುನ್ನ ಭಾರತ ತನ್ನ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯವನ್ನು ಇಂಗ್ಲೆಂಡ್ ವಿರುದ್ಧ ಆಡಿತ್ತು.
1932 ರಲ್ಲಿ ಭಾರತ ತನ್ನ ಮೊದಲ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್ ವಿರುದ್ಧ ಆಡಿತು. ಈ ಟೆಸ್ಟ್ ಪಂದ್ಯದಲ್ಲಿ ಆಲ್ ರೌಂಡರ್ ಅಮರ್ ಸಿಂಗ್ ಭಾರತದ ಪರ ಇತಿಹಾಸ ನಿರ್ಮಿಸಿದ್ದರು. ಈ ಪಂದ್ಯದಲ್ಲಿ ಅಮರ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೊದಲ ಸಿಕ್ಸರ್ ಬಾರಿಸಿದ ಭಾರತದ ಆಟಗಾರ ಎನಿಸಿಕೊಂಡರು.
ಇದರೊಂದಿಗೆ ಮತ್ತೊಂದು ಅದ್ಭುತ ದಾಖಲೆಯನ್ನೂ ಮಾಡಿದ್ದಾರೆ. ಆ ಪಂದ್ಯದಲ್ಲಿ ಭಾರತದ ಪರ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅರ್ಧಶತಕ ಸಿಡಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ರಣಜಿ ಟ್ರೋಫಿಯಲ್ಲಿ 100 ವಿಕೆಟ್ ಪಡೆದ ಮೊದಲ ಆಟಗಾರ ಕೂಡ ಅಮರ್ ಸಿಂಗ್.
ಭಾರತದ ಪರ ಆಡಿದ ಆಲ್ ರೌಂಡರ್ ಅಮರ್ ಸಿಂಗ್ ಅವರು ಡಿಸೆಂಬರ್ 4, 1910 ರಂದು ರಾಜ್ ಕೋಟ್ ನಲ್ಲಿ ಜನಿಸಿದರು. ವಿಶ್ವ ಸಮರ 2 ರ ಮೊದಲು ಭಾರತಕ್ಕಾಗಿ 7 ಟೆಸ್ಟ್ ಪಂದ್ಯಗಳನ್ನು ಆಡಿದ್ದರು. ಇದರಲ್ಲಿ ಅವರು ಒಟ್ಟು 28 ವಿಕೆಟ್ಗಳನ್ನು ಪಡೆದಿದ್ದರು. ಈ ಅವಧಿಯಲ್ಲಿ 292 ರನ್ ಕೂಡ ಗಳಿಸಿದ್ದರು.
ಅಮರ್ ಸಿಂಗ್ ಆ 7 ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 7 ಬೌಂಡರಿ ಮತ್ತು 2 ಸಿಕ್ಸರ್ ಬಾರಿಸಿದ್ದರು. ಆದರೆ ತಮ್ಮ 29 ನೇ ವಯಸ್ಸಿನಲ್ಲಿ ಟೈಫಾಯಿಡ್‌ನಿಂದ ಜಾಮ್‌ನಗರದಲ್ಲಿ 21 ಮೇ 1940 ರಂದು ನಿಧನರಾದರು.