)
An Elephant Seriously Injured: ಬಹುಶಃ ಸಕ್ರೆಬೈಲು ಆನೆ ಬಿಡಾರದಲ್ಲಿ ಇಂಥ ಘಟನೆ ಹಿಂದೆಂದೂ ನಡೆದಿರಲಿಲ್ಲ ಎನಿಸುತ್ತದೆ. ಕಾಡಿನಲ್ಲಿ ತನ್ನ ಪಾಡಿಗೆ ತಾನಿದ್ದ ಆನೆಯನ್ನು ಹಿಡಿದುಕೊಂಡು ಬಂದು ಅದನ್ನು ಪಳಗಿಸುವ ಪ್ರಕ್ರಿಯೆಯ ಯಾವುದೋ ಹಂತದಲ್ಲಿ ಅನಾಹುತವೊಂದು ಘಟಿಸಿಬಿಟ್ಟಿದೆ. ಪರಿಣಾಮವಾಗಿ ಗಜರಾಜನ ಕಾಲಿಗೆ ಗಂಭೀರ ಸ್ವರೂಪದ ಗಾಯವಾಗಿದೆ.
ಕಾಡಿನ ಆನೆಗಳನ್ನು ಹಿಡಿದು ಪಳಗಿಸುವ ಜೊತೆಗೆ ಅವುಗಳಿಗೆ ಹೊಟ್ಟೆ ತುಂಬಾ ಆಹಾರ ನೀಡುವ, ಚೆನ್ನಾಗಿಯೇ ನೋಡಿಕೊಳ್ಳುವ ಆನೆ ಬಿಡಾರದಲ್ಲೇ ಆನೆಯ ಕಾಲಿಗೆ ಗಂಭೀರ ಸ್ವರೂಪದ ಗಾಯ ಆಗಿರುವುದು ನಾನಾ ರೀತಿಯ ಅನುಮಾನಗಳಿಗೂ ಎಡೆಮಾಡಿಕೊಟ್ಟಿದೆ. ಮುಖ್ಯವಾಗಿ ಪಳಗಿಸಲೆಂದು ಆನೆಗೆ ಚಿತ್ರ ಹಿಂಸೆ ನೀಡಲಾಯಿತೇ? ಎನ್ನುವ ಅನುಮಾನ ಕೇಳಿಬರುತ್ತಿದೆ.
ಇದೇ ಮಾರ್ಚ್ 18ರಂದು ಸಕಲೇಶಪುರ ಬಳಿಯ ಕಾಡಿನಲ್ಲಿ ವಿಕ್ರಾಂತ್ ಎಂಬ ಹೆಸರಿನ ಆನೆಯನ್ನು ಸೆರೆಹಿಡಿಯಲಾಗಿತ್ತು. ನಂತರ ಅದನ್ನು ಸಕ್ರೆಬೈಲು ಆನೆ ಬಿಡಾರಕ್ಕೆ ಕರೆತರಲಾಗಿತ್ತು. ಅಲ್ಲಿನ ಖೆಡ್ಡಾಕ್ಕೆ ಕೆಡವಲಾಗಿತ್ತು. ಅದಾದ ಮೇಲೆ ಪಳಗಿಸುವ ಪ್ರಕ್ರಿಯೆ ವೇಳೆ ಯಾವುದೋ ಹಂತದಲ್ಲಿ ಆನೆಯ ಕಾಲಿಗೆ ಗಾಯವಾಗಿದೆ. ಮೂಲಗಳ ಪ್ರಕಾರ, ವಿಕ್ರಾಂತ್ ಆನೆಯನ್ನು ಸಕ್ರೆಬೈಲು ಆನೆ ಬಿಡಾರಕ್ಕೆ ಕರೆತಂದಾಗ ಅದರ ಮುಂಭಾಗದ ಕಾಲು ಚೆನ್ನಾಗಿಯೇ ಇತ್ತು.
ಆ ನಂತರದಲ್ಲಿ ಆನೆ ಬಿಡಾರದ ಖೆಡ್ಡಾದಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ಪಳಗಿಸಲು ಆನೆಗೆ ಹಿಂಸೆ ನೀಡಿರಬಹುದು. ಅದರಿಂದಲೇ ಆನೆ ಕಾಲಿಗೆ ನೋವಾಗಿರಬಹುದು, ಗಾಯವಾಗಿರಬಹುದು ಎಂದು ಹೇಳಲಾಗುತ್ತಿದೆ. ಸದ್ಯ ವಿಕ್ರಾಂತ್ ನಡೆಯುತ್ತಿರುವುದನ್ನು ನೋಡಿದರೆ ಅದಕ್ಕೆ ನೆಕ್ರೊಝ್ ಅಥವಾ ಗ್ಯಾಂಗ್ರಿನ್ ಆಗಿರಬಹುದು ಎನಿಸುತ್ತದೆ.
ಸದ್ಯ ವಿಕ್ರಾಂತ್ ಆನೆಗೆ ಈ ದುಸ್ಥಿತಿ ಬರಲು ಏನು ಕಾರಣ? ಯಾರು ಕಾರಣ? ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ. ವಿಕ್ರಾಂತ್ ಆನೆಯ ಸದ್ಯದ ಪರಿಸ್ಥಿತಿಯನ್ನು ನೋಡಿ ಸಕ್ರೆಬೈಲು ಆನೆ ಬಿಡಾರದ ಅರಣ್ಯಾಧಿಕಾರಿಗಳು ಕೂಡ ಆತಂಕಕ್ಕೀಡಾಗಿದ್ದಾರೆ. ಸಾಮಾನ್ಯವಾಗಿ ಆನೆಗಳನ್ನು ಪಳಗಿಸುವ ಸಂದರ್ಭದಲ್ಲಿ ವ್ಯನ್ಯಜೀವಿ ವೈದ್ಯರ ಉಪಸ್ಥಿತಿ ಇರಬೇಕಾಗುತ್ತದೆ. ಅವರಿದ್ದೂ ಹೀಗಾಗಿದೆಯಾ ಅಥವಾ ಬೇರೇನಾದರೂ ನಡೆದಿದೆಯಾ ಎನ್ನುವುದನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಬೇಕು.