)
MM Hills Deepavali Jatre: ಹನೂರು ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಶ್ರೀ ಕ್ಷೇತ್ರ ಮಲೆಮಹದೇಶ್ವರ ಬೆಟ್ಟದಲ್ಲಿ ಅಕ್ಟೋಬರ್ 18ರಿಂದ 22ರ ರವರೆಗೆ ಐದು ದಿನಗಳ ಕಾಲ ದೀಪಾವಳಿ ಜಾತ್ರಾ ಮಹೋತ್ಸವ ಜರುಗಲಿದ್ದು, ಲಕ್ಷಾಂತರ ಭಕ್ತಾದಿಗಳು ಆಗಮಿಸುವ ನಿರೀಕ್ಷೆ ಇರುವ ಹಿನ್ನೆಲೆಯಲ್ಲಿ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಅಕ್ಟೋಬರ್ 18ರಿಂದ ಅಕ್ಟೋಬರ್ 22ರವರೆಗೆ ಯಾವ ದಿನ ಏನು ವಿಶೇಷ?
ಅಕ್ಟೋಬರ್ 18:
ದೀಪಾವಳಿ ಜಾತ್ರಾ ಮಹೋತ್ಸವ ಅ.18 ರಂದು ಪ್ರಾರಂಭವಾಗಲಿದ್ದು, ಅಂದು ಮಹದೇಶ್ವರ ಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಲಾಗುವುದು.
ಅಕ್ಟೋಬರ್ 19:
ಅ.19ರಂದು ದೀಪಾವಳಿ ಪ್ರಯುಕ್ತ ಸ್ವಾಮಿಗೆ ವಿಶೇಷ ಪೂಜೆ ಹಾಗೂ ಎಣ್ಣೆ ಮಜ್ಜನ ಸೇವೆ ವಿವಿಧ ಉತ್ತವಗಳು ನಡೆಯಲಿವೆ.
ಅಕ್ಟೋಬರ್ 20:
ಅಕ್ಟೋಬರ್ 20 ರಂದು ಸ್ವಾಮಿಗೆ ನರಕ ಚತುರ್ದಶಿ ವಿಶೇಷ ಪೂಜೆ ಸೇವೆ ಉತ್ಸವಗಳು ನಡೆಯಲಿವೆ.
ಅಕ್ಟೋಬರ್ 21:
ಅಕ್ಟೋಬರ್ 21ರಂದು ದೀಪಾವಳಿ ಅಮಾವಾಸ್ಯೆ ವಿಶೇಷ ಪೂಜೆ ಹಾಗೂ ಉತ್ಸವಗಳು ಜರುಗಲಿದ್ದು ಬೆಳಗ್ಗೆ 9:15 ರ ನಂತರ ಹಾಲರವಿ ಉತ್ಸವವು ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿರವರ ನೇತೃತ್ವದಲ್ಲಿ ಜರುಗಲಿದೆ.
ಅಕ್ಟೋಬರ್ 22:
ಅಕ್ಟೋಬರ್ 22ರಂದು ಬೆಳಿಗ್ಗೆ ಮಹಾರಥೋತ್ಸವು ಬೆಳಗ್ಗೆ 9:15 ರಿಂದ 9:55 ರವರೆಗೆ ಜರುಗಲಿದ್ದು, ನಂತರ ಗುರು ಬ್ರಹ್ಮೋತ್ಸವ ಮತ್ತು ಅನ್ನ ಬ್ರಹ್ಮೋತ್ಸವ ಅದೇ ದಿನ ರಾತ್ರಿ ಅಭಿಷೇಕದ ಪೂಜೆ ಮುಗಿದ ನಂತರ ತೆಪ್ಪೋತ್ಸವ ನಡೆಯಲಿದೆ.
ದೀಪಾವಳಿ ಜಾತ್ರೆಗೆ ಪಾದಯಾತ್ರೆ ಮೂಲಕ ಬರುವ ಭಕ್ತರಿಗಾಗಿ ವಿಶೇಷ ವ್ಯವಸ್ಥೆ:
ದೀಪಾವಳಿ ಜಾತ್ರಾ ಮಹೋತ್ಸವ ಪ್ರಯುಕ್ತ ಮಹದೇಶ್ವರ ಬೆಟ್ಟಕ್ಕೆ ಪಾದ ಯಾತ್ರೆಯ ಮೂಲಕ ಆಗಮಿಸುವ ಭಕ್ತಾದಿ ಗಳಿಗೆ ತಾಳಬೆಟ್ಟದಿಂದ ಮ.ಬೆಟ್ಟದವರೆಗಿನ ಮಾರ್ಗ ಮಧ್ಯದಲ್ಲಿ 10 ಕಡೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಬೆಟ್ಟದ ಎರಡೂ ಕಡೆಗಳಲ್ಲಿ ಶುದ್ದ ಕುಡಿಯುವ ನೀರಿನ ಘಟಕದಲ್ಲಿ ಜನರಿಗೆ ಶುದ್ಧ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ದಾಸೋಹ ಭವನದಲ್ಲಿ ವಿಶೇಷ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿದ್ದು ಒಂದು ಬಾರಿಗೆ 1,500 ಜನರು ಪ್ರಸಾದ ಸ್ವೀಕರಿಸಬಹುದಾಗಿದೆ. ಇದಲ್ಲದೆ ಹಳೇ ದಾಸೋಹ ಭವನದ ಬಳಿ ವಿಶೇಷ ದಾಸೋಹ ಕೇಂದ್ರ ತೆರೆದು ದಿನದ 24 ಗಂಟೆಯೂ ದಾಸೋಹ ಏರ್ಪಡಿಸಲಾಗುತ್ತದೆ.
ನಾಲ್ಕು ಲಕ್ಷ ಲಾಡು ದಾಸ್ತಾನು :
ಕಳೆದ ದೀಪಾವಳಿ ಜಾತ್ರಾ ಮಹೋತ್ಸವದಲ್ಲಿ 5 ಲಕ್ಷಕ್ಕೂ ಹೆಚ್ಚು ಲಾಡು ಮಾರಾಟವಾಗಿತ್ತು. ಈ ಬಾರಿಯ ದೀಪಾವಳಿ ಜಾತ್ರಾ ಮಹೋತ್ಸವದಲ್ಲಿ ಹೆಚ್ಚಿನ ಭಕ್ತಾದಿಗಳು ಆಗಮಿಸುವ ನಿರೀಕ್ಷೆ ಇರುವುದರಿಂದ ಈಗಾಗಲೇ ಸುಮಾರು ನಾಲ್ಕು ಲಕ್ಷದವರೆಗೆ ಲಾಡುಗಳನ್ನು ತಯಾರು ಮಾಡಿ ದಾಸ್ತಾನು ಮಾಡಿಕೊಳ್ಳಲಾಗಿದೆ.
ಭಕ್ತಾದಿಗಳಿಗೆ ನೆರಳಿನ ವ್ಯವಸ್ಥೆ:
ರಾಜಗೋಪುರದ ಎಡ ಹಾಗೂ ಬಲಭಾಗದಲ್ಲಿ ದೇವರ ದರ್ಶನ ಪಡೆಯಲು ಸರತಿ ಸಾಲಿನಲ್ಲಿ ನಿಲ್ಲುವ ಭಕ್ತಾದಿಗಳಿಗೆ, ವಿಶ್ರಾಂತಿ ಪಡೆಯುವ ಹಾಗೂ ವಾಸ್ತವ್ಯ ಮಾಡುವ ಭಕ್ತಾದಿಗಳಿಗೆ ಶಾಮಿಯಾನ ಹಾಕಿ ನೆರಳಿನ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇದಲ್ಲದೆ ರಂಗಮಂದಿರದಲ್ಲಿಯೂ ಐದು ದಿನಗಳ ಕಾಲ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಹಲವು ಜಾನಪದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗಿದೆ.
ಮಲೆ ಮಹದೇಶ್ವರ ಬೆಟ್ಟದಲ್ಲಿರುವ ಶೌಚಾಲಯದ ಜೊತೆಗೆ ತಾಳಬೆಟ್ಟದಲ್ಲಿ 20 ಹಾಗೂ ಮಲೆ ಮಹದೇಶ್ವರ ಬೆಟ್ಟದಲ್ಲಿ ಅಂತರಗಂಗೆಯ ಸಮೀಪ 25 ಹಾಗೂ ಅಗತ್ಯವಿರುವ ಕಡೆ 5 ಒಟ್ಟಾರೆ 50 ಮೊಬೈಲ್ ತಾತ್ಕಾಲಿಕ ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ.
ದ್ವಿಚಕ್ರ ವಾಹನಗಳಿಗೆ ನಿರ್ಬಂಧ:
ಟ್ರಾಫಿಕ್ ಜಾಮ್ ತಡೆಗಟ್ಟಲು ಅ.19ರ ಬೆಳಿಗ್ಗೆ 6 ಗಂಟೆಯಿಂದ 22ರ ಸಂಜೆ 6 ಗಂಟೆಯವರೆಗೆ ಮ.ಬೆಟ್ಟಕ್ಕೆ ದ್ವಿಚಕ್ರ ವಾಹನದಲ್ಲಿ ಹೋಗುವುದನ್ನು ನಿರ್ಬಂಧಿಸಲಾಗಿದೆ. ದ್ವಿಚಕ್ರ ವಾಹನದಲ್ಲಿ ಬರುವ ಭಕ್ತರಿಗೆ ಕೌದಳ್ಳಿಯಲ್ಲಿ ತಾತ್ಕಾಲಿಕ ಪಾರ್ಕಿಂಗ್ ವ್ಯವಸ್ಥೆ: ವ್ಯವಸ್ಥೆ ಕಲ್ಪಿಸಲಾಗಿದ್ದು, ಇಲ್ಲಿಂದ ಕೆಎಸ್ ಆರ್ಟಿಸಿ ಬಸ್ ಮುಖಾಂತರ ಮಹದೇಶ್ವರ ಬೆಟ್ಟಕ್ಕೆ ತೆರಳಲು ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ.
ಕೆಎಸ್ಆರ್ಟಿಸಿಯಿಂದ 350 ಬಸ್:
ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುವ ದೀಪಾವಳಿ ಜಾತ್ರಾ ಮಹೋತ್ಸವಕ್ಕೆ ಕೆಎಸ್ಆರ್ಟಿಸಿ ವತಿಯಿಂದ 350 ಬಸ್ಗಳ ವ್ಯವಸ್ಥೆ ಮಾಡಲಾಗಿದೆ. ವಾಹನಗಳು ಕೆಟ್ಟು ನಿಂತರೆ ದುರಸ್ತಿ ಪಡಿಸಲು 50 ಮಂದಿ ತಾಂತ್ರಿಕ ಸಿಬ್ಬಂದಿಗಳನ್ನು ಕೂಡ ನೇಮಕ ಮಾಡಿಕೊಳ್ಳಲಾಗಿದೆ. ಹನೂರು ತಾಲೂಕು ಕೇಂದ್ರದಿಂದ ಹೆಚ್ಚಿನ ಭಕ್ತಾದಿಗಳು ಆಗಮಿಸಿದರೆ ಅಲ್ಲಿಯೂ ಹೆಚ್ಚಿನ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ವಿಭಾಗೀಯ ನಿಯಂತ್ರಣ ಅಧಿಕಾರಿ ಅಶೋಕ್ ಮಾಹಿತಿ ನೀಡಿದರು.
ಸ್ವಚ್ಛತೆಗೆ ಹೆಚ್ಚಿನ ಆದ್ಯತೆ :
ಮಲೆ ಮಾದೇಶ್ವರ ಬೆಟ್ಟದಲ್ಲಿ ಐದು ದಿನಗಳ ಕಾಲ ನಡೆಯಲಿರುವ ದೀಪಾವಳಿ ಜಾತ್ರಾ ಮಹೋತ್ಸವಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತಾದಿಗಳು ಆಗಮಿಸುವ ಹಿನ್ನೆಲೆ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ದೇವಸ್ಥಾನದ ರಾಜಗೋಪುರ ಮುಂಭಾಗ ಮತ್ತಿತರ ಜನಸಂದಣಿ ಇರುವ ಕಡೆ ಸ್ವಚ್ಛತೆ ಕಾಪಾಡಲು ಹೆಚ್ಚು ಪೌರಕಾರ್ಮಿಕ ಸಿಬ್ಬಂದಿ ಗಳನ್ನು ನಿಯೋಜಿಸಲಾಗಿದೆ.
ದರ್ಶನಕ್ಕೆ ನೇರ ವ್ಯವಸ್ಥೆ:
ಪಾದಯಾತ್ರೆಯ ಮೂಲಕ ಮ.ಬೆಟ್ಟಕ್ಕೆ ತೆರಳುವ ಭಕ್ತಾದಿಗಳಿಗೆ 240ರೂ. ಟಿಕೆಟ್ ಕ್ಯೂ ಲೈನ್, 60 ವರ್ಷ ಮೇಲ್ಪಟ್ಟವರಿಗೆ ರಾಜಗೋಪುರದ ಮಹಾದ್ವಾರದ ಬಳಿ ಪ್ರತ್ಯೇಕ ಕ್ಯೂಲೈನ್, ಅತಿಥಿ ಗಣ್ಯರಿಗೆ ಗೇಟ್ ನಂಬರ್ 4ರಲ್ಲಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ರಘು ತಿಳಿಸಿದ್ದಾರೆ.
ಪೊಲೀಸ್ ಬಂದೋಬಸ್ತ್:
ಲಕ್ಷಾಂತರ ಭಕ್ತಾದಿಗಳು ಶ್ರೀ ಕ್ಷೇತ್ರಕ್ಕೆ ಆಗಮಿಸುವ ನಿರೀಕ್ಷೆ ಇರುವುದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ 1 ಡಿವೈಎಸ್ಪಿ, 6 ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್ 17 ಎಎಸ್ಐ 35 , ಮಹಿಳಾ ಪೇದೆಗಳು 45, ಪೊಲೀಸ್ ಪೇದೆಗಳು 300, ಗೃಹ ರಕ್ಷಕ ದಳದ ಸಿಬ್ಬಂದಿ 400, 2 ಡಿಆರ್, 2 ಕೆಎಸ್ಆರ್ಪಿ ತುಕಡಿ, ಹಾಗೂ ವಿದ್ಯಾರ್ಥಿಗಳನ್ನು ಸಹ ನಿಯೋಜಿಸಲಾಗಿದೆ.
ದೀಪಾವಳಿ ಜಾತ್ರಾ ಮಹೋತ್ಸವ ಪ್ರಯುಕ್ತ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಪ್ರಾಧಿಕಾರದ ಉಪಾಧ್ಯಕ್ಷರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವೆಂಕಟೇಶ್, ಜಿಲ್ಲಾಧಿಕಾರಿಗಳಾದ ಸಿ ಟಿ ಶಿಲ್ಪಾ ನಾಗ್ ಶಾಸಕ ಎಂ ಆರ್ ಮಂಜುನಾಥ್ ರವರ ಮಾರ್ಗದರ್ಶನದಲ್ಲಿ ಬರುವಂತಹ ಭಕ್ತರಿಗೆ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಕಾರ್ಯದರ್ಶಿ
ಎ.ಇ.ರಘು ತಿಳಿಸಿದ್ದಾರೆ.