)
Ganesh Chaturthi real history : ವಿನಾಯಕ ಚತುರ್ಥಿಗೆ ಸಂಬಂಧಿಸಿದ ವಿವಿಧ ಕಥೆಗಳಿವೆ, ಅವುಗಳಲ್ಲಿ ಒಂದು ಗಣೇಶನ ಜನನ. ಒಮ್ಮೆ, ಪಾರ್ವತಿ ದೇವಿಯು ಕೈಲಾಸದಲ್ಲಿ ಸ್ನಾನ ಮಾಡಲು ತಯಾರಿ ನಡೆಸುತ್ತಿದ್ದಳು. ಆ ಸಮಯದಲ್ಲಿ, ಅಲ್ಲಿ ಯಾರೂ ಇರಲಿಲ್ಲ. ದೇವಿಗೆ ತನಗೆ ಕಾವಲುಗಾರ ಬೇಕು ಎಂದು ಅನಿಸಿತು.
ಆದ್ದರಿಂದ, ಅಲ್ಲಿ ಲಭ್ಯವಿರುವ ತನ್ನ ಮೈಯಲ್ಲಿನ ಮಣ್ಣು ಮತ್ತು ಅರಿಶಿನ ಬಳಸಿ, ಪಾರ್ವತಿ ದೇವಿಯು ಒಂದು ವಿಗ್ರಹವನ್ನು ಸೃಷ್ಟಿ ಮಾಡಿ ಅದಕ್ಕೆ ಜೀವ ತುಂಬಿದಳು. ಅಂದೇ ಗಣೇಶನ ಜನನವಾಗಿತ್ತು. ತದನಂತರ ಗಣೇಶನನ್ನು ಕಾವಲು ಕಾಯಲು ಬಿಟ್ಟು ಪಾರ್ವತಿ ಸ್ನಾನ ಮಾಡಲು ಹೋದಳು, ಅದೇ ಸಮಯದಲ್ಲಿ ಅಲ್ಲಿಗೆ ಬಂದ ಶಿವನನ್ನು ಗಣೇಶ ತಡೆದನು.
ಇಬ್ಬರ ನಡುವೆ ಯುದ್ಧವಾಯಿತು, ಶಿವನು ಕೊನೆಗೆ ತನ್ನ ತ್ರಿಶೂಲದಿಂದ ಗಣಪತಿಯ ತಲೆಯನ್ನು ಕತ್ತರಿಸಿದ. ಆ ವೇಳೆ ಅಲ್ಲಿಗೆ ಬಂದ ಪಾರ್ವತಿ ನೆಲದ ಮೇಲೆ ಉರಳಿ ಬಿದ್ದ ತನ್ನ ಮಗನ ತಲೆಯನ್ನು ನೋಡಿ ದುಃಖಿತಳಾದಳು. ದೇವಿಯು ತನ್ನ ಮಗನಿಗೆ ಜೀವ ನೀಡಿ ಬದುಕಿಸುವಂತೆ ಪರಿಪರಿಯಾಗಿ ಬೇಡಿಕೊಂಡಳು. ದುಃಖಿತನಾದ ಭಗವಂತ ತನ್ನ ರಾಕ್ಷಸಗಣಕ್ಕೆ ಉತ್ತರ ದಿಕ್ಕಿಗೆ ತಲೆ ಮಾಡಿ ಮಲಗಿರುವ ಆನೆ ತಲೆಯನ್ನು ಕತ್ತಿರಿಸಿ ತರುವಂತೆ ಆಜ್ಞೆ ಮಾಡುತ್ತಾನೆ. ರಾಕ್ಷಸರು ತಂದ ಆನೆಯ ತಲೆಯನ್ನು ಶಿವನು ಮಗುವಿನ ದೇಹಕ್ಕೆ ಜೋಡಿಸಿ ಮರು ಜೀವ ನೀಡುತ್ತಾನೆ. ಹೀಗೆ ಗಣಪತಿ ಹುಟ್ಟಿಕೊಂಡ.
ಈ ಘಟನೆ ಶುಕ್ಲ ಪಕ್ಷದ ಚತುರ್ಥಿಯ ದಿನದಂದು ಸಂಭವಿಸಿತು. ಅದಕ್ಕಾಗಿಯೇ ಆ ದಿನವನ್ನು ವಿನಾಯಕ ಚತುರ್ಥಿ ಎಂದು ಕರೆಯಲಾಗುತ್ತದೆ. ಗಣಪತಿ ಎಂಬ ಹೆಸರಿನ ಹಿಂದೆಯೂ ಒಂದು ಕಾರಣವಿದೆ. ಶಿವನು ಆನೆಯ ತಲೆಯನ್ನು ಕತ್ತರಿಸಿ, ತನ್ನ ಮಗನಿಗೆ ಜೀವ ನೀಡಿ ರಾಕ್ಷಸ ಕುಲಗಳ ಅಧಿಪತಿ ಎಂದು ಘೋಷಿಸಿದನು. ಆದ್ದರಿಂದ, ಗಣಪತಿಯು ಕುಲಗಳ ಅಧಿಪತಿಯಾದನು.
ವಿನಾಯಕನನ್ನು ಭಕ್ತಿ ಪೂರ್ವಕವಾಗಿ ಪೂಜಿಸಿದರೆ, ತೊಂದರೆ ಮತ್ತು ಅಡೆತಡೆಗಳನ್ನು ನಿವಾರಿಸುತ್ತಾನೆ ಎಂದು ನಂಬಲಾಗಿದೆ. ವಿಘ್ನವಿನಾಶಕನನ್ನು ಪೂಜಿಸುವ ಮೂಲಕ ನೀವು ಯಾವುದೇ ಕೆಲಸವನ್ನು ಪ್ರಾರಂಭಿಸಿದರೆ ಅದನ್ನು ತಡೆಯಲು ಯಾವ ಶಕ್ತಿಯಿಂದಲೂ ಆಗುವುದಿಲ್ಲ ಎಂದು ಹೇಳಲಾಗುತ್ತದೆ. ಅಂದಹಾಗೆ ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು..