)
ಉತ್ತಮ ಜೀವನ ನಡೆಸಲು ಅಗತ್ಯವಿರುವ ಅನೇಕ ನೀತಿಗಳು ಮತ್ತು ಸಲಹೆಗಳನ್ನು ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಹೇಳಿದ್ದಾರೆ. ಸಂತೋಷಕರ ದಾಂಪತ್ಯ ಜೀವನ ನಡೆಸಬೇಕಾದರೆ ಪತಿ ಮತ್ತು ಪತ್ನಿಯಲ್ಲಿ ಇರಬೇಕಾದ ಗುಣಗಳನ್ನು ವಿವರಿಸಿದ್ದಾರೆ. ಜೊತೆಗೆ ಪತ್ನಿಯಲ್ಲಿ ಯಾವ ಗುಣವಿದ್ದರೆ ಸಂಸಾರ ಹಾಳಾಗಬಹುದು ಎನ್ನುವ ಬಗ್ಗೆಯೂ ವಿವರವಾಗಿ ಹೇಳಿದ್ದಾರೆ. ಚಾಣಕ್ಯರ ಪ್ರಕಾರ, ಮಹಿಳೆಯರಿಗೆ ಇರುವ ಕೆಲವೊಂದು ಅಭ್ಯಾಸಗಳು ಪತಿಯನ್ನು ಸಮಸ್ಯೆಗೆ ದೂಡುತ್ತದೆ.
ಪತಿಗೆ ತೊಂದರೆ ಉಂಟುಮಾಡಬಹುದಾದ ಮಹಿಳೆಯರ ಅಭ್ಯಾಸಗಳು :
ಕಹಿ ಮತ್ತು ಕಠಿಣ ಮಾತು :
ಚಾಣಕ್ಯ ನೀತಿಯ ಪ್ರಕಾರ, ಕಠಿಣ ಧ್ವನಿಯನ್ನು ಹೊಂದಿರುವ ಮತ್ತು ಯಾವಾಗಲೂ ಕಹಿ ಮಾತುಗಳನ್ನು ಮಾತನಾಡುವ ಮಹಿಳೆಯರು, ಮನೆಯ ಶಾಂತಿ ಮತ್ತು ಸಂತೋಷವನ್ನು ಹಾಳು ಮಾಡಿ ಬಿಡಬಹುದು. ಅಂಥಹ ಮಹಿಳೆಯರು ತಮ್ಮ ಗಂಡನ ಮನಸ್ಸನ್ನು ಸದಾ ಗೊಂದಲದ ಗೂಡಾಗಿಸುತ್ತಾರೆ. ಮನೆಯಲ್ಲಿ ಯಾವಾಗಲೂ ಭಿನ್ನಾಭಿಪ್ರಾಯವೇ ಎದ್ದು ಕಾಣುತ್ತದೆ.
ಸುಖಾ ಸುಮ್ಮನೆ ಹಣ ಖರ್ಚು ಮಾಡುವುದು :
ಹಿಂದೆ ಮುಂದೆ ಯೋಚಿಸದೆ ಹಣವನ್ನು ವ್ಯರ್ಥವಾಗಿ ಖರ್ಚು ಮಾಡುವ ಗುಣವಿರುವ ಮಹಿಳೆ ತನ್ನ ಪತಿಯನ್ನು ಆರ್ಥಿಕ ಸಂಕಷ್ಟಕ್ಕೆ ದೂಡುತ್ತಾಳೆ. ಈ ಅಭ್ಯಾಸಗಳು ಮನೆಯ ಆರ್ಥಿಕ ಸ್ಥಿತಿಯನ್ನು ತಲೆ ಕೆಳಗೆ ಮಾಡಿ ಬಿಡಬಹುದು. ಇದು ಗಂಡನ ಮೇಲೆ ಅನಗತ್ಯ ಒತ್ತಡವನ್ನು ಹೆಚ್ಚಿಸುತ್ತದೆ. ಸಂಬಂಧದಲ್ಲಿ ಕಿರಿ ಕಿರಿ ಉಂಟುಮಾಡುತ್ತದೆ.
ಜಗಳ ಮಾಡುವ ಬುದ್ದಿ :
ಕೆಲವು ಮಹಿಳೆಯರಿಗೆ ಸಣ್ಣ ಸಣ್ಣ ವಿಚಾರಗಳಿಗೂ ವಾದ ಮಾಡುವ ಬುದ್ದಿ ಇರುತ್ತದೆ. ಅಗತ್ಯವಿಲ್ಲದ ಕಡೆಗಳಲ್ಲಿಯೂ ಕಾಲು ಕೆರೆದು ಜಗಳಕ್ಕೆ ನಿಲ್ಲುವ ಗುಣವಿರುವ ಮಹಿಳೆ ಮನೆಯಲ್ಲಿ ಕಿರಿ ಕಿರಿ ವಾತಾವರಣ ನಿರ್ಮಿಸಿ ಬಿಡುತ್ತಾಳೆ. ಮಾತ್ರವಲ್ಲ ಮನೆಯ ಸಂತೋಷ ಮತ್ತು ಶಾಂತಿ ಕದಡುವುದಕ್ಕೆ ಕಾರಣವಾಗುತ್ತಾಳೆ.
ಮಹಿಳೆಯರ ಗುಣ ನಡತೆ :
ತನ್ನ ಗಂಡನಿಗೆ ನಿಷ್ಟೆಯಿಲ್ಲದ ಮಹಿಳೆ ಅಥವಾ ಅನುಮಾನಾಸ್ಪದ ಗುಣ ನಡತೆ ಹೊಂದಿರುವ ಮಹಿಳೆ ಇಡೀ ಕುಟುಂಬಕ್ಕೆ ಅಪಖ್ಯಾತಿ ಮತ್ತು ಕಳಂಕವನ್ನು ಉಂಟುಮಾಡುತ್ತಾಳೆ. ಅಂಥಹ ಸಂಬಂಧ ಬಹಳ ಬೇಗನೆ ನಂಬಿಕೆ ಕಳೆದುಕೊಳ್ಳುತ್ತದೆ.
ಸೋಮಾರಿತನ :
ಸೋಮಾರಿಯಾಗಿರುವ ಮತ್ತು ಮನೆಕೆಲಸಗಳಲ್ಲಿ ಆಸಕ್ತಿ ವಹಿಸದ, ಇಡೀ ಮನೆಯನ್ನು ಅವ್ಯವಸ್ಥೆಯಲ್ಲಿ ಇರಿಸುವ ಮಹಿಳೆಯರ ಗಂಡಂದಿರು ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಅಂಥಹ ಮನೆಯಲ್ಲಿ ನಕಾರಾತ್ಮಕತೆ ಉಳಿಯುತ್ತದೆ ಮತ್ತು ಗಂಡ ಮನೆಕೆಲಸಗಳ ಹೊರೆಯನ್ನು ಹೊರಬೇಕಾಗುತ್ತದೆ.
( ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಆಧಾರದಲ್ಲಿ ಬರೆಯಲಾಗಿದೆ. ಜೀ ನ್ಯೂಸ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ.)