)
Shravan Masa Rituals: ಹಿಂದೂ ಸಂಪ್ರದಾಯದಲ್ಲಿ ಶ್ರಾವಣ ಮಾಸವು ಅತ್ಯಂತ ಪವಿತ್ರವಾಗಿದೆ. ಶ್ರಾವಣ ಮಾಸದಲ್ಲಿ ದೈವಿಕ ಆಚರಣೆಗಳು ಹೆಚ್ಚಾಗಿದ್ದು, ಈ ತಿಂಗಳಿನಲ್ಲಿ ದೇವತಾರಾಧನೆ, ಪೂಜೆ, ಉಪವಾಸ ಹಾಗೂ ವ್ರತಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಶ್ರಾವಣ ಮಾಸದಲ್ಲಿ ಅಪ್ಪಿತಪ್ಪಿಯೂ ಸಹ 'ಕೂದಲನ್ನು ಕತ್ತರಿಸಬಾರದು' ಎನ್ನಲಾಗುತ್ತದೆ. ಇದು ಕೇವಲ ಧಾರ್ಮಿಕ ನಂಬಿಕೆಯಾಗಿದೆಯೇ? ಅಥವಾ ಇದಕ್ಕೆ ವೈಜ್ಞಾನಿಕ ಕಾರಣವಿದೆಯಾ? ಎಂಬುದನ್ನೂ ತಿಳಿಯಲು ಮುಂದೆ ಓದಿ...
ಶ್ರಾವಣದಲ್ಲಿ ಕೂದಲು ಕತ್ತರಿಸಬಾರದು ಎಂಬುದರ ಹಿಂದಿನ ಧಾರ್ಮಿಕ ನಂಬಿಕೆ:
ಶ್ರಾವಣ ಮಾಸವು ಶಿವನಿಗೆ ಬಹಳ ಪ್ರಿಯವಾದ ಮಾಸ. ಈ ಮಾಸದಲ್ಲಿ ಹೆಚ್ಚಿನ ಸಮಯ ಪಠಣ, ಧ್ಯಾನ, ಜಪ, ಪೂಜೆಗೆ ಮೀಸಲಿಡಲಾಗಿದೆ. ಶ್ರಾವಣ ಮಾಸದಲ್ಲಿ ಉದ್ದವಾದ ಕೂದಲು ಬಿಡುವುದು, ಹೇರ್ ಕಟ್ ಮಾಡಿಸದೆ ಇರುವುದು, "ವ್ರತಾಚರಣೆ"ಗೆ ಮತ್ತು ಶುದ್ಧತೆಯ ಸಂಕೇತ ಎಂದು ಕೆಲವರು ನಂಬುತ್ತಾರೆ. ಜೊತೆಗೆ ವರಮಹಾಲಕ್ಷ್ಮಿ ಪೂಜೆ, "ರಕ್ಷಾ ಬಂಧನ" ಮುಂತಾದ ಆಚರಣೆಗಳಲ್ಲಿ ಶರೀರವನ್ನು ಹೇಗೆ ಶುದ್ಧವಾಗಿ ಇಡಬೇಕು ಎಂಬ ಕುರಿತು ಉಲ್ಲೇಖಗಳಿವೆ. ಹಾಗಾಗಿ, ಈ ಮಾಸದಲ್ಲಿ ಕೂದಲು ಕತ್ತರಿಸಬಾರದು ಎನ್ನಲಾಗುತ್ತದೆ.
ವೈಜ್ಞಾನಿಕ ಕಾರಣ:
ಮಳೆಯ ಸಮಯದಲ್ಲಿ ವಾತಾವರಣದಲ್ಲಿ ತೇವತೆ ಹೆಚ್ಚಾಗಿರುತ್ತದೆ. ಈ ಸಮಯದಲ್ಲಿ ಕೂದಲು ಕತ್ತರಿಸುವಾಗ ಸೋಂಕು ಹರಡುವ ಸಾಧ್ಯತೆಗಳು ಹೆಚ್ಚು. ಇದರಿಂದ ಚರ್ಮದ ಮೇಲೆ ಗಾಯಗಳು ಉಂಟಾಗಬಹುದು ಹಾಗೂ ದೇಹಕ್ಕೆ ತ್ವರಿತವಾಗಿ ಸೋಂಕಾಗಬಹುದು. ಹೀಗಾಗಿ ಶ್ರಾವಣ ಮಾಸದಲ್ಲಿ ಕೂದಲನ್ನು ಅನಾವಶ್ಯಕವಾಗಿ ಕತ್ತರಿಸುವುದು ಆರೋಗ್ಯದ ದೃಷ್ಟಿಯಿಂದಲೂ ಸಹ ಒಳ್ಳೆಯದಲ್ಲ ಎಂಬುದು ವೈಜ್ಞಾನಿಕ ಕಾರಣವಾಗಿದೆ.
ಆಧ್ಯಾತ್ಮಿಕ ದೃಷ್ಟಿಕೋನ:
ಶ್ರಾವಣ ಮಾಸದಲ್ಲಿ ಶರೀರದಲ್ಲಿನ ಕೂದಲು ಕತ್ತರಿಸುವುದು ಮಾನಸಿಕವಾಗಿ ನಿಮ್ಮನ್ನು ಕುಗ್ಗಿಸುವುದಲ್ಲದೇ, ಧ್ಯಾನ ಸ್ಥಿತಿಗೆ ವ್ಯತಿರಿಕ್ತ ಎಂದು ಕೆಲವರು ನಂಬುತ್ತಾರೆ. ದೇಹದಲ್ಲಿ ಕೂದಲು ಶರೀರದ ಶಕ್ತಿ ಸಂಗ್ರಹಿಸುವ ಕೇಂದ್ರಗಳೆಂದು ಪುರಾತನ ಧಾರ್ಮಿಕ ಉಲ್ಲೇಖಗಳಲ್ಲಿ ವ್ಯಾಖ್ಯಾನಿಸಲಾಗಿದೆ. ಹಾಗಾಗಿ, ಶ್ರಾವಣ ಮಾಸದಲ್ಲಿ ಕೂದಲು ಕತ್ತರಿಸುವುದನ್ನು ನಿಷೇಧಿಸಲಾಗಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.