)
Ganapati: ವಾಸ್ತು ಶಾಸ್ತ್ರದಲ್ಲಿ ಗಣಪತಿ ಮತ್ತು ಲಕ್ಷ್ಮಿ ದೇವಿಯ ವಿಗ್ರಹಗಳನ್ನು ಶುಭದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಅವುಗಳನ್ನು ಸರಿಯಾದ ದಿಕ್ಕಿನಲ್ಲಿ ಇಡುವುದು ಬಹಳ ಮುಖ್ಯ. ಶಾಸ್ತ್ರಗಳ ಪ್ರಕಾರ, ಪೂಜಾ ಕೋಣೆಯಲ್ಲಿ ಲಕ್ಷ್ಮಿ ದೇವಿಯ ವಿಗ್ರಹವನ್ನು ಸರಿಯಾದ ದಿಕ್ಕಿನಲ್ಲಿ ಇಡುವುದರಿಂದ ವಿಶೇಷ ಪ್ರಯೋಜನಗಳು ಮತ್ತು ಸಂಪತ್ತು ಬರುತ್ತದೆ ಎಂದು ನಂಬಲಾಗಿದೆ. ಈಗ ವಾಸ್ತು ಪ್ರಕಾರ ಗಣಪತಿ ಮತ್ತು ಲಕ್ಷ್ಮಿ ದೇವಿಯ ವಿಗ್ರಹಗಳನ್ನು ಯಾವ ದಿಕ್ಕಿನಲ್ಲಿ ಇಡುವುದು ಉತ್ತಮ ಎಂಬುವುದರ ಪ್ರಮುಖ ಮಾಹಿತಿ ಇಲ್ಲಿದೆ.
ಹಿಂದೂ ಧರ್ಮದಲ್ಲಿ ಗಣೇಶನು ಜ್ಞಾನದ ಅಧಿಪತಿ. ಲಕ್ಷ್ಮಿ ದೇವಿಯನ್ನು ಸಂಪತ್ತು ಮತ್ತು ಸಮೃದ್ಧಿಯ ದೇವತೆ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಈ ಎರಡೂ ದೇವರನ್ನು ಪೂಜಾ ಕೋಣೆಯಲ್ಲಿ ಒಟ್ಟಿಗೆ ಇಡುವುದು ಬಹಳ ಶುಭಕರ. ಅಷ್ಟೇ ಅಲ್ಲ ದೀಪಾವಳಿ ಮತ್ತು ಅಕ್ಷಯ ತೃತೀಯದಂತಹ ವಿಶೇಷ ಶುಭ ಸಂದರ್ಭಗಳಲ್ಲಿ ಎರಡೂ ದೇವತೆಗಳನ್ನು ಒಟ್ಟಿಗೆ ಇಟ್ಟು ಪೂಜಿಸಲಾಗುತ್ತದೆ.
ಮನುಷ್ಯನ ಜೀವನದಲ್ಲಿ ಜ್ಞಾನ ಬಹಳ ಮುಖ್ಯವಾಗಿರುತ್ತದೆ. ಇಲ್ಲವಾದರೆ ಅವರ ಕೈಯಲ್ಲಿರುವ ಹಣವು ದುರುಪಯೋಗವಾಗುತ್ತದೆ. ಆದ್ದರಿಂದ ಪೂಜಾ ಸ್ಥಳಗಳಲ್ಲಿ ಗಣೇಶ ಮತ್ತು ಲಕ್ಷ್ಮಿಯನ್ನು ಅಕ್ಕಪಕ್ಕದಲ್ಲಿ ಇಡಲಾಗುತ್ತದೆ. ಪೂಜಾ ಕೋಣೆಯಲ್ಲಿ ಅಥವಾ ಪೂಜೆ ಮಾಡುವ ಸ್ಥಳದಲ್ಲಿ, ಗಣೇಶ ಮತ್ತು ಲಕ್ಷ್ಮಿಯ ವಿಗ್ರಹಗಳನ್ನು ಒಟ್ಟಿಗೆ ಇಡಲಾಗುತ್ತದೆ.
ಪುರಾಣಗಳ ಪ್ರಕಾರ ಮನೆಯ ಪೂಜಾ ಕೋಣೆಯಲ್ಲಿ ಗಣೇಶ ಮತ್ತು ಲಕ್ಷ್ಮಿ ದೇವಿಯ ವಿಗ್ರಹಗಳನ್ನು ಉತ್ತರ ದಿಕ್ಕಿನಲ್ಲಿ ಇಡಬೇಕು. ಈ ನಂಬಿಕೆಯ ಹಿಂದೆ ಒಂದು ದಂತಕಥೆಯಿದೆ. ಇದರ ಪ್ರಕಾರ, ಒಮ್ಮೆ ಶಿವನು ಕೋಪಗೊಂಡು ಗಣೇಶನ ತಲೆಯನ್ನು ಕತ್ತರಿಸಿದನು.
ನಂತರ ಗಣಪತಿಯು ತನ್ನ ಸ್ವಂತ ಮಗನೆಂದು ತಿಳಿದು, ಶಿವನು ಗಣಗಳನ್ನು ಉತ್ತರಕ್ಕೆ ಕಳುಹಿಸಿದನು. ಈ ದಿಕ್ಕಿನಲ್ಲಿ ಮೊದಲು ಕಾಣುವ ವ್ಯಕ್ತಿಯ ತಲೆಯನ್ನು ತರುವಂತೆ ಆದೇಶಿಸಿದನು. ನಂತರ ಶಿವ ಗಣಗಳು ಉತ್ತರದಲ್ಲಿ ಮಲಗಿದ್ದ ಆನೆಯ ತಲೆಯನ್ನು ಕತ್ತರಿಸಿ ತಮ್ಮೊಂದಿಗೆ ತೆಗೆದುಕೊಂಡು ಹೋದರು. ಅಂದಿನಿಂದ ಉತ್ತರವನ್ನು ಅತ್ಯಂತ ಪವಿತ್ರ ದಿಕ್ಕು ಎಂದು ಪರಿಗಣಿಸಲಾಗಿದೆ.
ಹಲವು ಬಾರಿ, ಲಕ್ಷ್ಮಿ ದೇವಿಯ ವಿಗ್ರಹವನ್ನು ಗಣೇಶನ ಎಡಭಾಗದಲ್ಲಿ ಇಡುವುದರಿಂದ ಮನೆಯ ಆರ್ಥಿಕ ಪರಿಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ವಾಸ್ತವವಾಗಿ ಗಂಡಂದಿರು ತಮ್ಮ ಪತ್ನಿಯರನ್ನು ತಮ್ಮ ಎಡಭಾಗದಲ್ಲಿ ಕೂರಿಸುತ್ತಾರೆ. ಲಕ್ಷ್ಮಿ ದೇವಿಯು ಗಣೇಶನ ತಾಯಿಯ ಸ್ಥಾಮದಲ್ಲಿರುವ ಕಾರಣ ಆಕೆಯನ್ನು ಗಣೇಶನ ಎಡಭಾಗದಲ್ಲಿ ಇಡುವುದರಿಂದ ಆರ್ಥಿಕ ಬಿಕ್ಕಟ್ಟು ಉಂಟಾಗುತ್ತದೆ. ಆದ್ದರಿಂದ, ಲಕ್ಷ್ಮಿ ದೇವಿಯನ್ನು ಗಣೇಶನ ಬಲಭಾಗದಲ್ಲಿ ಇಡಬೇಕು.