ನಮ್ಮ ಆದರ್ಶಗಳನ್ನು ಕೆಲವೇ ಪದಗಳಲ್ಲಿ ವಿವರಿಸಬಹುದು. ಮಾನವ ಜನಾಂಗಕ್ಕೆ ಅವರ ದೈವಿಕತೆಯನ್ನೂ ಅವರ ಜೀವನದ ಪ್ರತಿಯೊಂದು ಚಲನವನದಲ್ಲೂ ಹೇಗೆ ಅದನ್ನು ವ್ಯಕ್ತಗೊಳಿಸುವುದು ಎಂಬುದನ್ನೂ ಬೋಧಿಸುವುದು.
ಧರ್ಮದ ರಹಸ್ಯವಿರುವುದು ಸಿದ್ಧಾಂತಗಳಲ್ಲಲ್ಲ, ಅದರ ಅನುಷ್ಠಾನದಲ್ಲಿ. ಒಳ್ಳೆಯವರಾಗಿರುವುದು, ಒಳ್ಳೆಯದ್ದನ್ನು ಮಾಡುವುದು ಇದೇ ಧರ್ಮದ ಸರ್ವಸ್ವ.
ಮಾನವನಲ್ಲಿ ಈಗಾಗಲೇ ಅಡಗಿರುವ ದೈವತ್ವವನ್ನು ವ್ಯಕ್ತಗೊಳಿಸುವುದೇ ಧರ್ಮ.
ಪ್ರಾಣಿಸಹಜ ವ್ಯಕ್ತಿಯನ್ನು ಮುನಷ್ಯನನ್ನಾಗಿ, ಮನುಷ್ಯನನ್ನು ದೇವರನ್ನಾಗಿಸುವ ಭಾವನೆಯೇ ಧರ್ಮ.
ಯಾರಿಗೆ ತನ್ನಲ್ಲಿ ತನಗೇ ನಂಬಿಕೆಯಿಲ್ಲವೋ ಅವನು ನಾಸ್ತಿಕ. ಹಳೆಯ ಧರ್ಮಗಳು ಹೇಳುತ್ತವೆ, ದೇವರನ್ನು ನಂಬದವನು ನಾಸ್ತಿಕ ಎಂದು. ಹೊಸ ಧರ್ಮ ಹೇಳುತ್ತದೆ, ಯಾರಿಗೆ ತನ್ನಲ್ಲಿ ನಂಬಿಕೆಯಿಲ್ಲವೋ ಅವನು ನಾಸ್ತಿಕ ಎಂದು.
ಈ ಜಗತ್ತಿನಲ್ಲಿ ಇತಿಹಾಸ ಆತ್ಮಶ್ರದ್ಧೆಯನ್ನು ಹೊಂದಿದ್ದ ಕೆಲವೇ ವ್ಯಕ್ತಿಗಳ ಇತಿಹಾಸ. ಆ ಶ್ರದ್ಧೆ ಅಂತರಂಗದ ದಿವ್ಯತೆಯನ್ನು ಬಡಿದೆಬ್ಬಿಸುತ್ತದೆ. ಆಗ ನೀವೇನನ್ನು ಬೇಕಾದರೂ ಸಾಧಿಸಬಲ್ಲಿರಿ.
ನಿಮ್ಮ ನಂಬಿಕೆಯಂತೆ ನೀವಾಗುತ್ತೀರಿ. ನಿಮ್ಮನ್ನು ನೀವು ಋಷಿಗಳೆಂದು ನಂಬಿದರೆ ನೀವು ನಾಳೆ ಋಷಿಗಳೇ ಆಗುತ್ತೀರಿ.
ಪ್ರತಿಯೊಬ್ಬನಲ್ಲಿಯೂ ಪೂರ್ಣ ಋಷಿತ್ವವನ್ನು ಪಡೆಯುವ ಸಾಮರ್ಥ್ಯ ಅಂತರ್ಹಿತವಾಗಿದೆ.