)
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಹೊಸ ಮಾಲೀಕರನ್ನು ಹುಡುಕುತ್ತಿರುವಾಗ ರಾಜಸ್ಥಾನ ರಾಯಲ್ಸ್ (ಆರ್ಆರ್) ಕೂಡ ಮಾರಾಟಕ್ಕೆ ಬಂದಿದೆ ಎಂಬ ವರದಿಗಳು ಹೊರಬಿದ್ದಿವೆ.
ಲಕ್ನೋ ಸೂಪರ್ ಜಯಂಟ್ಸ್ ಮಾಲೀಕ ಸಂಜೀವ್ ಗೋಯೆಂಕಾ ಅವರ ಸಹೋದರ ಹರ್ಷ್ ಗೋಯೆಂಕಾ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ."ಒಂದಲ್ಲ ಎರಡು ಐಪಿಎಲ್ ತಂಡಗಳು ಮಾರಾಟಕ್ಕಿವೆ ಎನ್ನುವ ಮಾಹಿತಿ ತಿಳಿದಿದೆ. ಅದರಲ್ಲಿ ಆರ್ಸಿಬಿ ಮತ್ತು ಆರ್ಆರ್. ಈಗಿನ ಭಾರೀ ಮೌಲ್ಯವನ್ನು ನಗದೀಕರಿಸಿಕೊಳ್ಳಲು ಜನ ಬಯಸುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ. ಎರಡು ತಂಡಗಳು ಮಾರಾಟಕ್ಕೆ, 4-5 ಮಂದಿ ಆಸಕ್ತ ಖರೀದಿದಾರರಿದ್ದಾರೆ. ಇದರಲ್ಲಿ ಮಾಲೀಕರು ಪುಣೆ, ಅಹಮದಾಬಾದ್, ಮುಂಬಯಿ, ಬೆಂಗಳೂರು ಅಥವಾ ಅಮೆರಿಕದಿಂದಲೇ?" ಎನ್ನುವುದನ್ನು ನೋಡಬೇಕಾಗಿದೆ ಎಂದು ಹರ್ಷ್ ಗೋಯೆಂಕಾ ಬರೆದಿದ್ದಾರೆ.
ಆರ್ಸಿಬಿ ಮಾರಾಟದ ಬೆಲೆ 16,600 ಕೋಟಿ. ರೂ.
ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ನ ಮೂಲ ಕಂಪನಿ ಡಿಯಾಜಿಯೋ, ಆರ್ಸಿಬಿ ಫ್ರಾಂಚೈಸಿಗೆ ಸುಮಾರು 2 ಬಿಲಿಯನ್ ಅಮೆರಿಕನ್ ಡಾಲರ್ (ಸುಮಾರು ₹16,600 ಕೋಟಿ) ಮೌಲ್ಯವನ್ನು ನಿಗದಿಪಡಿಸಿದೆ ಎಂದು ವರದಿಯಾಗಿದೆ. 2025 ಮಾರ್ಚ್ 31ರಂದು ಮುಕ್ತಾಯವಾಗುವ ಹಣಕಾಸು ವರ್ಷದಲ್ಲಿ ಆರ್ಸಿಬಿ ತಂಡವು ಕಂಪನಿಯ ಒಟ್ಟು ಲಾಭದ ಶೇ.8.3ರಷ್ಟು ಕೊಡುಗೆ ನೀಡಿತ್ತು.
ಲಸಿಕಾ ಉದ್ಯಮಿ ದಿಗ್ಗಜ ಅದರ್ ಪೂನಾವಾಲಾ ಅವರು ಆರ್ಸಿಬಿ ಕ್ರೀಡಾ ವಿಭಾಗವನ್ನು ಖರೀದಿಸಲು ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ. ಮಾರಾಟ ಪ್ರಕ್ರಿಯೆ 2026 ಮಾರ್ಚ್ 31ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಆದರೆ ಈ ನಡುವೆಯೂ ಆರ್ಸಿಬಿ ತಂಡವು ನವೆಂಬರ್ 27ರಂದು ನಡೆಯಲಿರುವ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಹರಾಜಿನಲ್ಲಿ ಭಾಗವಹಿಸಲಿದೆ ಮತ್ತು ಆಟಗಾರರನ್ನು ಖರೀದಿಸಲಿದೆ.
ಬಾಂಬೆ ಸ್ಟಾಕ್ ಎಕ್ಸ್ಚೇಂಜ್ಗೆ (ಬಿಎಸ್ಇ) ಕಳುಹಿಸಿದ ಸಂವಹನದಲ್ಲಿ ಡಿಯಾಜಿಯೋ "ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ತನ್ನ ಸಂಪೂರ್ಣ ಸ್ವಾಮ್ಯದ ಸಹಕಾರಿ ಕಂಪನಿ ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ (ಆರ್ಸಿಎಸ್ಪಿಎಲ್)ನ ಹೂಡಿಕೆಯ ಕುರಿತು ಕಾರ್ಯತಾಂತ್ರಿಕ ಪರಿಶೀಲನೆ ಆರಂಭಿಸುತ್ತಿದೆ. ಆರ್ಸಿಎಸ್ಪಿಎಲ್ ವ್ಯವಹಾರವು ಬಿಸಿಸಿಐ ಆಯೋಜಿಸುವ ಪುರುಷರ ಐಪಿಎಲ್ ಮತ್ತು ಮಹಿಳಾ ಪ್ರೀಮಿಯರ್ ಲೀಗ್ಗಳಲ್ಲಿ ಭಾಗವಹಿಸುವ 'ರಾಯಲ್ ಚಾಲೆಂಜರ್ಸ್ ಬೆಂಗಳೂರು' ತಂಡಗಳ ಮಾಲೀಕತ್ವವನ್ನು ಒಳಗೊಂಡಿದೆ.ಪ್ರಕ್ರಿಯೆ 2026 ಮಾರ್ಚ್ 31ರೊಳಗೆ ಪೂರ್ಣಗೊಳ್ಳಲಿದೆ' ಎಂದು ಕಂಪನಿ ತಿಳಿಸಿದೆ.
ರಾಜಸ್ಥಾನ ರಾಯಲ್ಸ್ ಮಾಲೀಕತ್ವ
ಪ್ರಸ್ತುತ ರಾಜಸ್ಥಾನ ರಾಯಲ್ಸ್ ತಂಡವು ರಾಯಲ್ಸ್ ಸ್ಪೋರ್ಟ್ಸ್ ಗ್ರೂಪ್ (ಎಮರ್ಜಿಂಗ್ ಮೀಡಿಯಾ ಸ್ಪೋರ್ಟಿಂಗ್ ಹೋಲ್ಡಿಂಗ್ಸ್ ಲಿಮಿಟೆಡ್)ಗೆ ಸೇರಿದ್ದು, ಅದು ಶೇ.65ರಷ್ಟು ಪಾಲನ್ನು ಹೊಂದಿದೆ. ಉಳಿದ ಸಣ್ಣ ಪಾಲುಗಳು ಲ್ಯಾಚ್ಲನ್ ಮರ್ಡಾಕ್ ಮತ್ತು ರೆಡ್ಬರ್ಡ್ ಕ್ಯಾಪಿಟಲ್ ಪಾರ್ಟನರ್ಸ್ ಬಳಿ ಇವೆ.ಐಪಿಎಲ್ ತಂಡಗಳ ಮೌಲ್ಯ ಗಗನಕ್ಕೇರಿದ ಈ ಸಮಯದಲ್ಲಿ ಹಲವು ಉದ್ಯಮಿಗಳು ಮತ್ತು ಅಂತಾರಾಷ್ಟ್ರೀಯ ಹೂಡಿಕೆದಾರರು ಆಸಕ್ತಿ ತೋರುತ್ತಿದ್ದಾರೆ ಎನ್ನಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಎರಡೂ ತಂಡಗಳ ಹೊಸ ಮಾಲೀಕರು ಯಾರಾಗಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿದೆ.