)
ಸೈಯದ್ ಮುಷ್ತಾಕ್ ಅಲಿ T20 ಟ್ರೋಫಿಯಲ್ಲಿ ಬಿರುಸಿನ ಬ್ಯಾಟಿಂಗ್ ಮಾಡಿದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅರ್ಧಶತಕ ಬಾರಿಸಿ ಬರೋಡಾ ತಂಡವನ್ನು ಗೆಲ್ಲಿಸಿದ್ದಾರೆ. ನಿನ್ನೆಯಷ್ಟೇ ಟೀಮ್ ಇಂಡಿಯಾಗೆ ಹಾರ್ದಿಕ್ ಪಾಂಡ್ಯ ಮರಳಲಿದ್ದಾರೆ ಎಂದು ಹೇಳಲಾಗಿತ್ತು. ಸದ್ಯ ಇದರ ಬೆನ್ನಲ್ಲೇ ಅದ್ಭುತವಾದ ಆಲ್ರೌಂಡರ್ ಪ್ರದರ್ಶನ ನೀಡಿದ್ದಾರೆ.
ಹೈದರಾಬಾದ್ನ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆದ ಸೈಯದ್ ಮುಷ್ತಾಕ್ ಅಲಿ T20 ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕ್ಯಾಪ್ಟನ್ ಅಭಿಷೇಕ್ ಶರ್ಮಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಬ್ಯಾಟಿಂಗ್ಗೆ ಆಗಮಿಸಿದ ಅಭಿಷೇಕ್ ಶರ್ಮಾ, ಪ್ರಭಾಸಿಮ್ರಾನ್ ಸಿಂಗ್ ಉತ್ತಮ ಆರಂಭ ನೀಡಿದರು. ಓಪನರ್ ಪ್ರಭಾಸಿಮ್ರಾನ್ 16 ರನ್ಗೆ ವಿಕೆಟ್ ಒಪ್ಪಿಸಿದರೆ, ಅಭಿಷೇಕ್ ಶರ್ಮಾ ಕೇವಲ 19 ಬಾಲ್ಗಳಲ್ಲಿ 5 ಬೌಂಡರಿ ಹಾಗೂ 4 ಬಿಗ್ ಸಿಕ್ಸರ್ಗಳಿಂದ 50 ರನ್ ಬಾರಿಸಿದರು.
ಮೂರನೇ ಕ್ರಮಾಂಕದಲ್ಲಿ ಕ್ರೀಸ್ಗೆ ಬಂದ ಅನ್ಮೋಲ್ಪ್ರೀತ್ ಸಿಂಗ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ಕೇವಲ 32 ಎಸೆತಗಳಲ್ಲಿ 7 ಫೋರ್, 4 ಸಿಕ್ಸರ್ಗಳಿಂದ 69 ರನ್ ಗಳಿಸಿದರು. ನಮನ್ಧೀರ್ 39, ನೆಹಾಲ್ ವಧೇರಾ 16, ಸನ್ವೀರ್ ಸಿಂಗ್ 16 ರನ್ ಗಳಿಸಿದರು. ಈ ಎಲ್ಲರ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ಎಂಟು ವಿಕೆಟ್ಗೆ 223 ರನ್ಗಳ ಟಾರ್ಗೆಟ್ ನೀಡಿತ್ತು.
ಈ ಗುರಿ ಬೆನ್ನತ್ತಿದ ಬರೋಡಾ ತಂಡ ಉತ್ತಮ ಆರಂಭ ಪಡೆಯಿತು. ವಿಷ್ಣು ಸೋಲಂಕಿ 43, ಶಾಶ್ವತ್ ರಾವತ್ 31 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ಶಿವಾಲಿಕ್ ಶರ್ಮಾ ಅತ್ಯುತ್ತಮ ಬ್ಯಾಟಿಂಗ್ ಮಾಡುತ್ತಿದರು. 47 ರನ್ಗಳಿಸಿ ಆಡುವಾಗ ರಿಟೈರ್ನಿಂದ ಕ್ರೀಸ್ನಿಂದ ಹೊರ ನಡೆದರು. ಆದರೆ ಇನ್ನೊಂದೆಡೆ ಅಬ್ಬರದ ಬ್ಯಾಟಿಂಗ್ ಮಾಡುತ್ತಿದ್ದ ಹಾರ್ದಿಕ್ ಪಾಂಡ್ಯ ತಂಡವನ್ನು ಗೆಲುವಿನತ್ತ ತೆಗೆದುಕೊಂಡು ಹೋದರು.
ಶಿವಾಲಿಕ್ ಶರ್ಮಾ ರಿಟೈರ್ನಿಂದ ಬ್ಯಾಟಿಂಗ್ಗೆ ಜಿತೇಶ್ ಶರ್ಮಾ ಆಗಮಿಸಿದರು. ಈ ಪಂದ್ಯದಲ್ಲಿ 42 ಬಾಲ್ಗಳನ್ನು ಎದುರಿಸಿದ ಹಾರ್ದಿಕ್ ಪಾಂಡ್ಯ 7 ಫೋರ್ ಹಾಗೂ 4 ಅತ್ಯದ್ಭುತವಾದ ಸಿಕ್ಸರ್ಗಳಿಂದ 77 ರನ್ಗಳನ್ನು ಚಚ್ಚಿ ಬರೋಡಾ ತಂಡವನ್ನು ಗೆಲ್ಲಿಸಿದರು. ಬರೋಡಾ 19.1 ಓವರ್ಗಳಲ್ಲಿ ಮೂರು ವಿಕೆಟ್ಗೆ 224 ರನ್ ಗಳಿಸಿ ಗೆಲುವು ಪಡೆಯಿತು. ಇದು ಅಲ್ಲದೇ ಹಾರ್ದಿಕ್ ಪಾಂಡ್ಯ, ಟೀಮ್ ಇಂಡಿಯಾದಲ್ಲಿ ಆಡುವುದು ಮೊದಲ ಮ್ಯಾಚ್ನಲ್ಲೇ ಕನ್ಫರ್ಮ್ ಮಾಡಿದಂತೆ ಅಗಿದೆ. ಇನ್ನು ಎರಡು ಪಂದ್ಯಗಳನ್ನು ಪಾಂಡ್ಯ ಆಡಬೇಕಿದೆ. ಈ ಎರಡರಲ್ಲೂ ಪಾಂಡ್ಯ ಇದೇ ಪರ್ಫಾಮೆನ್ಸ್ ಮುಂದುವರೆಸಿದರೆ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಆಯ್ಕೆ ಆಗುವುದು ಪಕ್ಕಾ.