)
ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರು ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುವ ಟಿ20 ಸರಣಿಗೆ ಮರಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಗಾಯದಿಂದ ಬಳಲುತ್ತಿದ್ದ ಹಾರ್ದಿಕ್ ಪಾಂಡ್ಯ ಅವರು ಬೆಂಗಳೂರಿನಲ್ಲಿರುವ ಸೆಂಟರ್ ಆಫ್ ಎಕ್ಸ್ಲೆನ್ಸ್ನಲ್ಲಿ ಪುನರ್ವಸತಿಯನ್ನು ಪೂರ್ಣಗೊಳಿಸಿದ್ದಾರೆ. ಹೀಗಾಗಿ ಅವರಿಗೆ ಬೌಲಿಂಗ್ ಮಾಡಲು ಅನುಮತಿ ನೀಡಲಾಗಿದೆ ಎಂದು ವರದಿ ಬಹಿರಂಗಗೊಂಡಿದೆ.
ಹಾರ್ದಿಕ್ ಪಾಂಡ್ಯ ಅವರು ಕಳೆದ ಸೆಪ್ಟೆಂಬರ್ನಲ್ಲಿ ನಡೆದ ಏಷ್ಯಾ ಕಪ್ ಟೂರ್ನಿಯಲ್ಲಿ ಗಂಭೀರವಾದ ಇಂಜುರಿಗೆ ಒಳಗಾಗಿದ್ದರು. ಇದರಿಂದ ಆಸ್ಟ್ರೇಲಿಯಾ ಪ್ರವಾಸದಿಂದ ಹಾಗೂ ಈಗ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಒಡಿಐ ಸರಣಿಯಿಂದಲೂ ದೂರವಾಗಿದ್ದರು. 2026ರ ಟಿ20 ವಿಶ್ವಕಪ್ ಟೂರ್ನಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈಗಲೇ ಅವರ ಫಿಟ್ನೆಸ್ ಹಾಗೂ ಇಂಜುರಿಯಿಂದ ಚೇತರಿಸಿಕೊಂಡಿರುವ ಅಪ್ಡೇಟ್ಸ್ಗಳನ್ನು ಪಡೆದುಕೊಳ್ಳಲಾಗಿದೆ. ಇದು ಹಾರ್ದಿಕ್ ಪಾಂಡ್ಯ ತಂಡಕ್ಕೆ ಮರಳುವುದನ್ನು ತೋರಿಸುತ್ತದೆ.
ಟೀಮ್ ಇಂಡಿಯಾದಲ್ಲಿ ಆಡುವುದಕ್ಕೂ ಮೊದಲು ಹಾರ್ದಿಕ್ ಪಾಂಡ್ಯ ಅವರು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಬರೋಡಾ ತಂಡದಲ್ಲಿ ಆಡಲಿದ್ದಾರೆ. ಡಿಸೆಂಬರ್ ಎರಡರಂದು ಪಂಜಾಬ್ ವಿರುದ್ಧ ಹಾಗೂ ಡಿಸೆಂಬರ್ ನಾಲ್ಕರಂದು ಗುಜರಾತ್, ಡಿಸೆಂಬರ್ ಆರರಂದು ಹರಿಯಾಣ ವಿರುದ್ಧ ಸೇರಿ ಮೂರು ಪಂದ್ಯಗಳನ್ನು ಆಡುವ ನಿರೀಕ್ಷೆ ಇದೆ. ಇಲ್ಲಿ ನೀಡುವ ಪರ್ಫಾಮೆನ್ಸ್ ಆಧಾರದ ಮೇಲೆ ಅವರ ಫಿಟ್ನೆಸ್ ಅನ್ನು ಗಮನಕ್ಕೆ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಲಾಗಿದೆ.
ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಹಾರ್ದಿಕ್ ಪಾಂಡ್ಯ ಆಡುವುದನ್ನು ಆಯ್ಕೆದಾರ ಪ್ರಗ್ಯಾನ್ ಓಜಾ ಅವರು ಮೇಲ್ವಿಚಾರಣೆ ಮಾಡಲಿದ್ದಾರೆ. ಹಲವು ತಿಂಗಳುಗಳಿಂದ ತಂಡದಿಂದ ದೂರ ಉಳಿದ ಅವರು ಯಾವ ರೀತಿ ಹೊಂದಿಕೊಳ್ಳುತ್ತಾರೆ. ಅವರ ದೇಹ ಹೇಗೆ ಸಹಕರಿಸುತ್ತದೆ? ಎಂಬುದನ್ನು ಗಮನಿಸಲಾಗುತ್ತದೆ. ಇಲ್ಲಿ ಗಮನಿಸಿದ ಮೇಲೆ ಹಾರ್ದಿಕ್ ಪಾಂಡ್ಯ ಫಿಟ್ನೆಸ್, ಬೌಲಿಂಗ್, ಬ್ಯಾಟಿಂಗ್ ಪ್ರದರ್ಶನ ಕುರಿತು ಸಂಪೂರ್ಣ ಮಾಹಿತಿಯನ್ನು ಆಯ್ಕೆ ಸಮಿತಿ ಮತ್ತು ತಂಡದ ನಿರ್ವಹಣೆಗೆ ಕಳುಹಿಸಿಕೊಡಲಿದ್ದಾರೆ. ಇದು ಟಿ20 ಸರಣಿಯನ್ನು ಹಾರ್ದಿಕ್ ಆಡಬಲ್ಲರೇ, ಇಲ್ಲವೇ ಎಂಬುದನ್ನು ನಿರ್ಧರಿಸುತ್ತದೆ ಎಂದು ಹೇಳಲಾಗಿದೆ.