)
Yuzvendra Chahal on divorce: ನೃತ್ಯ ನಿರ್ದೇಶಕಿ ಧನಶ್ರೀ ವರ್ಮಾರಿಂದ ವಿಚ್ಛೇದನ ಪಡೆದ ನಂತರ ಭಾರತೀಯ ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ಮೊದಲ ಬಾರಿಗೆ ತಮ್ಮ ಮಾನಸಿಕ ಆರೋಗ್ಯದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಅವರು ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಬಗ್ಗೆ ಅನೇಕ ಕೇಳಿರದ ಕಥೆಗಳನ್ನು ಹೇಳಿದ್ದಾರೆ. ಧನಶ್ರೀ ಮತ್ತು ನಾನು ಹಲವಾರು ತಿಂಗಳ ಹಿಂದೆ ವಿಚ್ಛೇದನ ಪಡೆಯಲು ನಿರ್ಧರಿಸಿದ್ದೆವು ಎಂದು ಅವರು ಬಹಿರಂಗಪಡಿಸಿದ್ದಾರೆ. ತಮ್ಮಿಬ್ಬರ ಸಂಬಂಧದಲ್ಲಿ ಎಲ್ಲವೂ ಸರಿಯಾಗುತ್ತದೆಂದು ಯೋಚಿಸುವುದನ್ನ ನಿಲ್ಲಿಸಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಎಷ್ಟೇ ಪ್ರಯತ್ನಪಟ್ಟರೂ ನಮ್ಮ ಪ್ರಯತ್ನ ಕಾರ್ಯರೂಪಕ್ಕೆ ಬರಲಿಲ್ಲ. ಹೀಗಾಗಿ ನಾವು ವಿಧಿ ಇಲ್ಲದೇ ಬೇರೆಯಾಗಬೇಕಾಯಿತು ಎಂದು ಚಾಹಲ್ ಹೇಳಿಕೊಂಡಿದ್ದಾರೆ. ಧನಶ್ರೀ ಅವರಿಂದ ವಿಚ್ಛೇದನ ಪಡೆದ ನಂತರ ಯುಜ್ವೇಂದ್ರ ಅವರನ್ನು ಮೋಸಗಾರ ಎಂದೂ ಕರೆಯಲಾಯಿತು. ಕ್ರಿಕೆಟಿಗ ಕೂಡ ಇದರ ಬಗ್ಗೆ ಮೌನ ಮುರಿದಿದ್ದಾರೆ. ಆ ಸಮಯದಲ್ಲಿ ನನಗೆ ಆತ್ಮಹತ್ಯೆಯ ಆಲೋಚನೆಗಳು ಬರುತ್ತಿದ್ದವು ಎಂಬ ಶಾಕಿಂಗ್ ವಿಚಾರವನ್ನ ಹಂಚಿಕೊಂಡಿದ್ದಾರೆ.
ಚಾಹಲ್ಗೆ ಮೋಸಗಾರನ ಪಟ್ಟ!!
ರಾಜ್ ಶಮಾನಿ ಪಾಡ್ಕ್ಯಾಸ್ಟ್ನಲ್ಲಿ ಮಾತನಾಡಿರುವ ಚಾಹಲ್, ʼವಿಚ್ಛೇದನದ ನಂತರ ನನಗೆ 'ವಂಚಕ' ಎಂಬ ಟ್ಯಾಗ್ ನೀಡಲಾಯಿತು. ಭವಿಷ್ಯದಲ್ಲಿ ಎಲ್ಲವೂ ಸರಿಯಾಗುತ್ತದೆಂಬ ಆಶಯದೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ನಿಮ್ಮ ಮದುವೆಯ ಬಗ್ಗೆ ಪರಿಪೂರ್ಣವೆಂಬ ಭಾವನೆಯನ್ನ ವ್ಯಕ್ತಪಡಿಸಿದ್ದೀರಾ? ಎಂದು ಚಾಹಲ್ರನ್ನ ಕೇಳಿದಾಗ, ಅವರು ಹೌದು ... ಅದು ಹಾಗೆಯೇ ಇತ್ತು' ಎಂದು ಹೇಳಿದ್ದಾರೆ. ʼನಮ್ಮ ಬೇರ್ಪಡುವ ನಿರ್ಧಾರ ಬದಲಾಗಬಹುದು ಮತ್ತು ಇಬ್ಬರೂ ಮತ್ತೆ ಸಂತೋಷದಿಂದ ಒಟ್ಟಿಗೆ ಇರಬಹುದು ಎಂದು ತಾನು ನನ್ನ ಅಂತರಂಗದಲ್ಲಿ ಆಳವಾಗಿ ಭಾವಿಸಿದ್ದೆʼ ಅಂತಾ ಹೇಳಿದ್ದಾರೆ. 'ವಿಚ್ಛೇದನದ ನಂತರ ನನ್ನನ್ನು ಮೋಸಗಾರ ಎಂದು ಕರೆಯಲಾಯಿತು, ಆದರೆ ನಾನು ಜೀವನದಲ್ಲಿ ಎಂದಿಗೂ ಮೋಸ ಮಾಡಿಲ್ಲ. ನಾನು ನಿಷ್ಠಾವಂತ ವ್ಯಕ್ತಿ. ನನ್ನಂತಹ ನಿಷ್ಠಾವಂತ ವ್ಯಕ್ತಿಯನ್ನು ನೀವು ಹುಡುಕಲು ಸಾಧ್ಯವಿಲ್ಲ ... ನಾನು ನನ್ನ ಜನರ ಬಗ್ಗೆ ಕಾಳಜಿ ವಹಿಸುತ್ತೇನೆ' ಅಂತಾ ಚಾಹಲ್ ಹೇಳಿದ್ದಾರೆ. 'ನಮ್ಮ ಇಡೀ ಕಥೆಯನ್ನ ತಿಳಿಯದೆ ಜನರು ತಮ್ಮದೇ ತೀರ್ಮಾನಕ್ಕೆ ಬಂದಾಗ ನನಗೆ ತುಂಬಾ ನೋವಾಯಿತು. ಈ ಎಲ್ಲಾ ವಿಷಯಗಳಿಂದಲೂ ನನಗೆ ತುಂಬಾ ನೋವಾಗಿದೆ... ಏನಾಯಿತು ಎಂದು ಯಾರಿಗೂ ತಿಳಿದಿಲ್ಲ ಮತ್ತು ಇಂದಿಗೂ ಸಹ ಅವರು ನನ್ನನ್ನು ದೂಷಿಸುತ್ತಿದ್ದಾರೆʼಎಂದು ಚಾಹಲ್ ಬೇಸರ ವ್ಯಕ್ತಪಡಿಸಿದ್ದಾರೆ.
ಧನಶ್ರೀ-ಚಹಾಲ್ ವಿಚ್ಛೇದನ ಪಡೆದಿದ್ದು ಏಕೆ?
ತಮ್ಮ ವಿವಾಹ ವಿಚ್ಛೇದನದ ಕಾರಣದ ಬಗ್ಗೆ ಮಾತನಾಡಿದ ಚಾಹಲ್, ʼನಮ್ಮ ದಾಂಪತ್ಯವು 'ರಾಜಿ' ಅಂತಾ ಹೇಳಿದ್ದಾರೆ. ʼಒಟ್ಟಿಗೆ ಉತ್ತಮ ಸಮಯ ಕಳೆಯಲು ಸಾಧ್ಯವಾಗದ ಕಾರಣ ನಮ್ಮಿಬ್ಬರ ನಡುವೆ ಅಂತರ ಹೆಚ್ಚಾಗಿತ್ತುʼ ಅಂತಾ ಹೇಳಿದ್ದಾರೆ. ಎರಡೂ ಕಡೆಯಿಂದ ರಾಜಿ ಅಗತ್ಯವಾಗಿದ್ದರೂ, ಕೆಲವೊಮ್ಮೆ ಭಿನ್ನಾಭಿಪ್ರಾಯಗಳಿಂದ ಎಲ್ಲವೂ ಹಾಳಾಗುತ್ತದೆ ಅಂತಾ ಅವರು ಹೇಳಿದ್ದಾರೆ. ತಾವು ಮತ್ತು ಧನಶ್ರೀ ಇಬ್ಬರೂ ತಮ್ಮ ತಮ್ಮ ವೃತ್ತಿಜೀವನದಲ್ಲಿ ನಿರತರಾಗಿದ್ದೇವು. ಇದರಿಂದ ಕಳೆದ ಕೆಲವು ವರ್ಷಗಳಿಂದ ಇಬ್ಬರ ನಡುವಿನ ಉದ್ವಿಗ್ನತೆ ಹೆಚ್ಚಾಗಿದ್ದು, ಅದು ಕ್ರಮೇಣ ಸಂಬಂಧದ ಮೇಲೆ ಪರಿಣಾಮ ಬೀರುತ್ತಿತ್ತುʼ ಎಂದು ಹೇಳಿಕೊಂಡಿದ್ದಾರೆ.
ʼಚೆನ್ನಾಗಿಯೇ ಇದ್ದ ನಮ್ಮ ಸಂಸಾರದಲ್ಲಿ ಬಿರುಕು ಮೂಡಿತು. ನಾವಿಬ್ಬರೂ ಚೆನ್ನಾಗಿಯೇ ಇರಬೇಕೆಂದು ತುಂಬಾ ಪ್ರಯತ್ನಪಟ್ಟರೂ ಅದು ಕೈಗೂಡಲಿಲ್ಲ. ನಮ್ಮ ಸಂಬಂಧ ಹಳಸಿದ ನಂತರ ನನಗೆ ಏನೂ ಮಾಡಬೇಕೆಂದು ತೋಚಲಿಲ್ಲ. ಪ್ರತಿದಿನವೂ ನನ್ನ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿದ್ದವು. ನನ್ನನ್ನ ಮೋಸಗಾರನೆಂದು ಕರೆದು ನನ್ನದೇ ಎಲ್ಲಾ ತಪ್ಪು ಎಂಬು ಬಿಂಬಿಸಲಾಯಿತು. ಇದರಿಂದ ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ಉಂಟಾಯಿತು. ಹೀಗಾಗಿ ನನಗೆ ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ಆಲೋಚನೆಗಳು ಬರಲು ಪ್ರಾರಂಭಿಸಿದವುʼ ಅಂತಾ ಚಾಹಲ್ ಹೇಳಿಕೊಂಡಿದ್ದಾರೆ.