)
ನವದೆಹಲಿ: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ಜೆಮಿಮಾ ರೋಡ್ರಿಗಸ್ ಸ್ನೇಹಿತೆ ಸ್ಮೃತಿ ಮಂಧಾನಾ ಅವರ ಕುಟುಂಬಕ್ಕೆ ಬೆಂಬಲ ನೀಡಲು ವುಮೆನ್ಸ್ ಬಿಗ್ ಬ್ಯಾಷ್ ಲೀಗ್ (WBBL) ನ ಉಳಿದ ಪಂದ್ಯಗಳಿಂದ ಹಿಂದೆ ಸರಿದಿದ್ದಾರೆ.
ಆಸ್ಟ್ರೇಲಿಯಾದ ಬ್ರಿಸ್ಬೇನ್ ಹೀಟ್ ತಂಡದ ಪರ ಆಡುತ್ತಿದ್ದ ಜೆಮಿಮಾ ಅವರು ಲೀಗ್ನ ಕೊನೆಯ ನಾಲ್ಕು ಪಂದ್ಯಗಳಿಗೆ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸದೆ ಭಾರತದಲ್ಲೇ ಉಳಿಯಲು ನಿರ್ಧರಿಸಿದ್ದಾರೆ.ಈ ನಿರ್ಧಾರಕ್ಕೆ ಕಾರಣ ಸ್ಮೃತಿ ಮಂಧಾನಾ ಅವರ ಕುಟುಂಬದಲ್ಲಿ ಎದುರಾದ ಆಕಸ್ಮಿಕ ಆರೋಗ್ಯ ಸಂಕಷ್ಟ.
ನವೆಂಬರ್ 23 ರಂದು ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ ಅವರೊಂದಿಗೆ ಸ್ಮೃತಿ ಅವರ ಮದುವೆ ನಿಗದಿಯಾಗಿತ್ತು.ಆದರೆ ಮದುವೆಯ ದಿನವೇ ಬೆಳಿಗ್ಗೆ ಸ್ಮೃತಿ ಅವರ ತಂದೆ ಶ್ರೀನಿವಾಸ್ ಮಂಧಾನಾ ಅವರಿಗೆ ಸಣ್ಣ ಹೃದಯಾಘಾತವಾಗಿದೆ.ಅಲ್ಲದೆ ವರ ಪಲಾಶ್ ಮುಚ್ಚಲ್ ಕೂಡ ಆರೋಗ್ಯ ಸಮಸ್ಯೆಯಿಂದ ಮುಂಬೈಯ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.ಈ ಎರಡೂ ಘಟನೆಗಳಿಂದಾಗಿ ಮದುವೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.
ಈ ಕಠಿಣ ಸಮಯದಲ್ಲಿ ತನ್ನ ಅತ್ಯಂತ ನಿಕಟ ಸ್ನೇಹಿತೆ ಸ್ಮೃತಿ ಮಂಧಾನಾ ಜೊತೆಗೆ ಇರಬೇಕೆಂಬ ಆಸೆಯಿಂದ ಜೆಮಿಮಾ ಅವರು ವೃತ್ತಿಪರ ಕ್ರಿಕೆಟ್ ಒಪ್ಪಂದಕ್ಕಿಂತ ಸ್ನೇಹವನ್ನೇ ಆದ್ಯತೆ ನೀಡಿದ್ದಾರೆ. ಬ್ರಿಸ್ಬೇನ್ ಹೀಟ್ ಫ್ರಾಂಚೈಸಿ ಜೆಮಿಮಾ ಅವರ ನಿರ್ಧಾರವನ್ನು ಸ್ವಾಗತಿಸಿದೆ. ತಂಡದ ಸಿಇಒ ಟೆರ್ರಿ ಸ್ವೆನ್ಸನ್ ಮಾತನಾಡಿ, “ಜೆಮಿಮಾ ರೋಡ್ರಿಗಸ್ ಪ್ರಸ್ತುತ ಕಷ್ಟದ ಸಮಯವನ್ನು ಎದುರಿಸುತ್ತಿದ್ದಾರೆ. ಭಾರತದಲ್ಲಿ ಉಳಿದು ತಮ್ಮ ಸ್ನೇಹಿತೆಯ ಕುಟುಂಬಕ್ಕೆ ಬೆಂಬಲ ನೀಡುವ ನಿರ್ಧಾರವನ್ನು ನಾವು ಪೂರ್ಣವಾಗಿ ಗೌರವಿಸುತ್ತೇವೆ. ಜೆಮಿಮಾ ಮತ್ತು ಸ್ಮೃತಿ ಹಾಗೂ ಅವರ ಕುಟುಂಬಗಳಿಗೆ ನಮ್ಮ ಪೂರ್ಣ ಬೆಂಬಲವಿದೆ” ಎಂದು ತಿಳಿಸಿದ್ದಾರೆ.
ಕ್ರಿಕೆಟ್ಗಿಂತ ಸ್ನೇಹ ಮತ್ತು ಕುಟುಂಬಕ್ಕೆ ಮಹತ್ವ ನೀಡಿದ ಜೆಮಿಮಾ ಅವರ ಈ ನಡೆಗೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ.ಸ್ಮೃತಿ ಮಂಧಾನಾ ಮತ್ತು ಅವರ ತಂದೆಯವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂಬ ಹಾರೈಕೆ ವ್ಯಕ್ತವಾಗಿದೆ.