)
ಕ್ಯಾಪ್ಟನ್ ಮಯಾಂಕ್ ಅಗರ್ವಾಲ್ ಹಾಗೂ ದೇವದತ್ ಪಡಿಕ್ಕಲ್ ಅವರ ವಿಸ್ಫೋಟಕ ಶತಕದೊಂದಿಗೆ ಪುದುಚೇರಿ ವಿರುದ್ಧದ ವಿಜಯ್ ಹಜಾರೆ ಟ್ರೋಫಿಯ ಪಂದ್ಯದಲ್ಲಿ ಕರ್ನಾಟಕ ತಂಡ 67 ರನ್ಗಳಿಂದ ಜಯಭೇರಿ ಬಾರಿಸಿದೆ. ಈ ಮೂಲಕ ಟ್ರೋಫಿಯಲ್ಲಿ ಕರ್ನಾಟಕದ ಗೆಲುವಿನ ನಾಗಲೋಟ ಮುಂದುವರೆದಿದೆ. ಮಯಾಂಕ್ ಅಗರ್ವಾಲ್ ಸಾರಥ್ಯದ ಟೀಮ್ ಸತತ ನಾಲ್ಕು ಗೆಲುವುಗಳನ್ನು ದಾಖಲಿಸಿದೆ.
ಗುಜರಾತ್ನ ಅಹಮದಾಬಾದ್ ಸ್ಟೇಡಿಯಂನಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿಯಲ್ಲಿ ಪುದುಚೇರಿ ಜೊತೆಗಿನ ಪಂದ್ಯದಲ್ಲಿ ಕ್ಯಾಪ್ಟನ್ ಮಯಾಂಕ್ ಅವರು ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಆಯ್ಕೆ ಮಾಡಿದರು. ಕರ್ನಾಟಕ ತಂಡ ಆರಂಭದಿಂದಲೇ ಸಿಡಿಲಬ್ಬರದ ಬ್ಯಾಟಿಂಗ್ ಮುಂದುವರೆಸಿತು. ನೋಡುಗರಿಗೆ ಇದೇನು ಟಿ20 ಪಂದ್ಯನ ಎಂದೆನಿಸಿತು.
ತಂಡದ ಪರವಾಗಿ ಓಪನರ್ಗಳಾಗಿ ಕ್ರೀಸ್ಗೆ ಆಗಮಿಸಿದ ನಾಯಕ ಮಯಾಂಕ್ ಅಗರ್ವಾಲ್ ಹಾಗೂ ದೇವದತ್ ಪಡಿಕ್ಕಲ್ ಎದುರಳಿ ಬೌಲರ್ಗಳನ್ನು ದಂಡಿಸಿದರು. ನಾಯಕ ಅಗರ್ವಾಲ್ 124 ಎಸೆತಗಳಲ್ಲಿ 15 ಬೌಂಡರಿ, 2 ಸಿಕ್ಸರ್ಗಳಿಂದ 132 ರನ್ ಬಾರಿಸಿದರು. ಮತ್ತೊಬ್ಬ ಓಪನರ್ ದೇವದತ್ ಪಡಿಕ್ಕಲ್ ಕೂಡ ಆರ್ಭಟಿಸಿ 116 ಎಸೆತಗಳಲ್ಲಿ 10 ಫೋರ್ ಹಾಗೂ 4 ಬಿಗ್ ಸಿಕ್ಸರ್ಗಳಿಂದ 113 ರನ್ ಬಾರಿಸಿದರು. ಈ ಇಬ್ಬರ ಪಾರ್ಟನರ್ಶೀಪ್ನಲ್ಲಿ 228 ರನ್ಗಳು ತಂಡಕ್ಕೆ ಹರಿದು ಬಂದವು.
ಕರುಣ್ ನಾಯರ್ 62, ರವಿಚಂದ್ರನ್ ಸ್ಮರಣ್ 21, ಮನ್ವಂತ್ ಕುಮಾರ್ 3, ಅಭಿನವ್ ಮನೋಹರ 6 ಎಸೆತಗಳಲ್ಲಿ 21 ರನ್ ಚಚ್ಚಿದರು. ಇದರಿಂದ ಕರ್ನಾಟಕ ತಂಡ 50 ಓವರ್ಗಳಲ್ಲಿ 4 ವಿಕೆಟ್ಗೆ 363 ರನ್ಗಳ ಬೃಹತ್ ಟಾರ್ಗೆಟ್ ಕೊಟ್ಟಿತ್ತು. ಈ ಗುರಿ ಹಿಂದೆ ಬಿದ್ದ ಪುದುಚೇರಿ ತಂಡವು ಭರ್ಜರಿಯಾಗಿಯೇ ಪೈಪೋಟಿ ಕೊಟ್ಟಿತು ಎನ್ನಬಹುದು. ಆದರ ವಿಕೆಟ್ಗಳನ್ನ ಉಳಿಸಿಕೊಳ್ಳದ ಕಾರಣ ಆಲೌಟ್ ಆಯಿತು. ಇದರಿಂದ ಪಂದ್ಯದಲ್ಲಿ ಪುದುಚೇರಿ 67 ರನ್ಗಳಿಂದ ಸೋಲನ್ನು ಒಪ್ಪಿಕೊಂಡಿತು.